ಮಗನ ಸಿನಿಮಾದಿಂದ ನಿರ್ದೇಶಕನ ಹೊರಗಿಟ್ಟಿದ್ದಕ್ಕೆ ಕಾರಣ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಆಯುಷ್ ಉಪೇಂದ್ರ ಅವರ ಚೊಚ್ಚಲ ಸಿನಿಮಾದಿಂದ ನಿರ್ದೇಶಕರನ್ನು ತೆಗೆದಿರುವ ವಿಚಾರವಾಗಿ ಪ್ರಿಯಾಂಕಾ ಉಪೇಂದ್ರ ಫಿಲ್ಮ್ ಚೇಂಬರ್‌ಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. ನಿರ್ಮಾಪಕರ ಹಣ, ಸಿನಿಮಾದ ಗುಣಮಟ್ಟ ಹಾಗೂ ನಾಯಕನ ವೃತ್ತಿಜೀವನ ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯಾಂಶಗಳು
- ಆಯುಷ್ ಉಪೇಂದ್ರ ಸಿನಿಮಾ ನಿರ್ದೇಶಕನ ಎಕ್ಸಿಟ್
- ಮೌನ ಮುರಿದ ಪ್ರಿಯಾಂಕಾ ಉಪೇಂದ್ರ
- ನಿರ್ಮಾಪಕರ ಹಣ ಹಾಗೂ ಸಿನಿಮಾದ ಗುಣಮಟ್ಟ ಕಾಯಲು ನಿರ್ದೇಶಕರ ಬದಲಾವಣೆ
ಕನ್ನಡ ಚಿತ್ರರಂಗದ ತಾರಾ ದಂಪತಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ಅವರ ಚೊಚ್ಚಲ ಸಿನಿಮಾದ ನಿರ್ದೇಶಕರನ್ನು ಬದಲಾಯಿಸಿರುವ ವಿಚಾರ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ನಟಿ ಪ್ರಿಯಾಂಕಾ ಉಪೇಂದ್ರ ಕೊನೆಗೂ ಮೌನ ಮುರಿದಿದ್ದಾರೆ. ಚಿತ್ರದಿಂದ ನಿರ್ದೇಶಕರಿಗೆ ಗೇಟ್ ಪಾಸ್ ನೀಡಿರುವ ಕುರಿತು ಎದ್ದಿದ್ದ ವಿವಾದಕ್ಕೆ ಸುದೀರ್ಘ ಸ್ಪಷ್ಟನೆ ನೀಡಿರುವ ಅವರು, ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸುದೀರ್ಘವಾದ ಪತ್ರವನ್ನು ಬರೆದಿದ್ದಾರೆ.
ತಮ್ಮ ಮಗ ಆಯುಷ್ ಉಪೇಂದ್ರ ಅವರ ವೃತ್ತಿಜೀವನದ ಮೊದಲ ಸಿನಿಮಾವನ್ನು ರಕ್ಷಿಸುವುದು ಹಾಗೂ ನಿರ್ಮಾಪಕರ ಹಣಕ್ಕೆ ಮೋಸ ಆಗದಂತೆ ನೋಡಿಕೊಳ್ಳುವುದು ತಮ್ಮ ಮುಖ್ಯ ಉದ್ದೇಶ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಸಿನಿಮಾದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ನಾಯಕನ ಭವಿಷ್ಯದ ಹಿತದೃಷ್ಟಿಯಿಂದ ನಿರ್ದೇಶಕರನ್ನು ಬದಲಾಯಿಸುವ ಈ ಕಠಿಣ ತೀರ್ಮಾನವನ್ನು ಅನಿವಾರ್ಯವಾಗಿ ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಿತ್ರೀಕರಣ ಆರಂಭವಾದ ಸಮಯದಿಂದಲೂ ನಿರ್ಮಾಣ ತಂಡಕ್ಕೆ ಅಗತ್ಯವಿರುವ ಹಣಕಾಸು, ಸೃಜನಶೀಲತೆ ಹಾಗೂ ಲಾಜಿಸ್ಟಿಕ್ಸ್‌ಗೆ ಸಂಬಂಧಿಸಿದಂತೆ ಸಂಪೂರ್ಣ ಬೆಂಬಲವನ್ನು ನೀಡಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ. ಆದರೆ ಕೆಲಸದ ವೇಳಾಪಟ್ಟಿ, ಸಮರ್ಪಕ ಸಂವಹನ ಹಾಗೂ ಯೋಜನೆಯ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ ಗಂಭೀರ ಮಟ್ಟದ ಸಮಸ್ಯೆಗಳು ಮತ್ತು ಆತಂಕಗಳು ಎದುರಾದವು ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಎಲ್ಲಾ ಗೊಂದಲಗಳು ಮತ್ತು ಆತಂಕಗಳನ್ನು ನಿವಾರಿಸಿ ನ್ಯಾಯಯುತವಾದ ಪರಿಹಾರ ಕಂಡುಕೊಳ್ಳಲು ಪ್ರಿಯಾಂಕಾ ಉಪೇಂದ್ರ ಅವರು ಫಿಲ್ಮ್ ಚೇಂಬರ್ ಹಸ್ತಕ್ಷೇಪವನ್ನು ಕೋರಿದ್ದಾರೆ. ಚೇಂಬರ್ ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ವಿನಂತಿಸಿರುವ ಅವರು, ಚಿತ್ರದ ಯಶಸ್ವಿ ಪೂರ್ಣಗೊಳಿಸುವಿಕೆಗೆ ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಆಯುಷ್ ಉಪೇಂದ್ರ ಅವರ ಮೊದಲ ಸಿನಿಮಾದ ನಿರ್ದೇಶಕರ ಬದಲಾವಣೆ ವಿಚಾರವು ಪ್ರಿಯಾಂಕಾ ಅವರ ಈ ಪತ್ರದ ಮೂಲಕ ಹೊಸ ತಿರುವು ಪಡೆದುಕೊಂಡಿದೆ. ಫಿಲ್ಮ್ ಚೇಂಬರ್ ಈ ವಿವಾದವನ್ನು ಹೇಗೆ ಬಗೆಹರಿಸಲಿದೆ ಮತ್ತು ಮುಂದಿನ ದಿನಗಳಲ್ಲಿ ಈ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:02 pm, Mon, 9 November 26




