ತಮ್ಮ ಬಗ್ಗೆ ಸುಳ್ಳು ಸುದ್ದಿ ಹರಡಿದವಗೆ ಕ್ಲಾಸ್ ತೆಗೆದುಕೊಂಡ ರಶ್ಮಿಕಾ ಮಂದಣ್ಣ

Rashmika Mandanna: ನಟಿ ರಶ್ಮಿಕಾ ಮಂದಣ್ಣ ಬಗ್ಗೆ ನೆಟ್ಟಿಗನೊಬ್ಬ ಸುಳ್ಳು ಸುದ್ದಿ ಹರಡಲು ಯತ್ನಿಸಿದ್ದು, ನಟಿ ರಶ್ಮಿಕಾ ನೇರವಾಗಿಯೇ ಖಡಕ್ ಉತ್ತರ ನೀಡಿದ್ದಾರೆ.

ತಮ್ಮ ಬಗ್ಗೆ ಸುಳ್ಳು ಸುದ್ದಿ ಹರಡಿದವಗೆ ಕ್ಲಾಸ್ ತೆಗೆದುಕೊಂಡ ರಶ್ಮಿಕಾ ಮಂದಣ್ಣ
Follow us
ಮಂಜುನಾಥ ಸಿ.
|

Updated on: Feb 13, 2024 | 9:31 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ತಮ್ಮ ಕೆಲವು ಅಪ್ರಬುದ್ಧ ಮಾತುಗಳಿಂದ ವಿವಾದಕ್ಕೆ ಈಡಾಗಿದ್ದರು, ಸಖತ್ ಟ್ರೋಲ್​ಗೂ ಸಹ ಗುರಿಯಾಗಿದ್ದರು. ಆದರೆ ವರ್ಷಗಳು ಕಳೆದಂತೆ ವೇದಿಕೆಗಳ ಮೇಲೆ ಪ್ರಬುದ್ಧವಾಗಿ ಮಾತನಾಡಲು ಪ್ರಾರಂಭಿಸಿದರು. ವಾರಗೆಯ ಇತರೆ ನಟಿಯರಂತೆ ವಿವಾದಗಳಿಂದಲೂ ಸಾಕಷ್ಟು ದೂರವೇ ಉಳಿಯುವ ಪ್ರಯತ್ನದಲ್ಲಿದ್ದಾರೆ. ಹಾಗಿದ್ದರೂ ಸಹ ನೆಟ್ಟಿಗರು ಒಂದಲ್ಲ ಒಂದು ಕಾರಣಕ್ಕೆ ರಶ್ಮಿಕಾರನ್ನು ಗುರಿ ಮಾಡಿಕೊಳ್ಳುತ್ತಲೇ ಇದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗನೋರ್ವ ರಶ್ಮಿಕಾ ಬಗ್ಗೆ ಸುಳ್ಳು ಸುದ್ದಿ ಹರಡುವ ಪ್ರಯತ್ನ ಮಾಡಿದ್ದು ಅದಕ್ಕೆ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ ರಶ್ಮಿಕಾ.

ರಶ್ಮಿಕಾ ಮಂದಣ್ಣ ಟಾಲಿವುಡ್​ನ ಜನಪ್ರಿಯ ನಟಿ. ಇದೀಗ ಬಾಲಿವುಡ್​ನಲ್ಲಿ ಮಿಂಚುತ್ತಿದ್ದರೂ ಸಹ ಟಾಲಿವುಡ್​ನೊಂದಿಗೆ ನಂಟು ಹೊಂದಿದ್ದಾರೆ. ಕೆಲವು ಹೊಸ ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಸಹ ಹಲವು ಹಿಟ್ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ನಟಿಸಿರುವ ಕೆಲವು ಸಿನಿಮಾಗಳು ಫ್ಲಾಪ್ ಸಹ ಆಗಿವೆ. ಅದರಲ್ಲಿ ಒಂದು ‘ಆಡುವಾಳ್ಳು ಮೀಕು ಜೋಹಾರ್ಲು’.

ಇದನ್ನೂ ಓದಿ:Rashmika Mandanna: ಅರ್ಧಕ್ಕೆ ನಿಂತೋಯ್ತು ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ?

‘ನನಗೆ ‘ಆಡುವಾಳ್ಳು ಮೀಕು ಜೋಹಾರ್ಲು’ ಸಿನಿಮಾದ ಚಿತ್ರಕತೆ ಸ್ವಲ್ಪವೂ ಇಷ್ಟವಿರಲಿಲ್ಲ. ಆದರೂ ಕೇವಲ ಕಿಶೋರ್ ತಿರುಮಲ ಹಾಗೂ ನಟ ಶರವಣ ಅವರ ಮೇಲೆ ಗೌರವಕ್ಕಾಗಿ ಆ ಸಿನಿಮಾ ಒಪ್ಪಿಕೊಂಡೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆಂದು ಗೋವಿಂದ್ ಎಂಬ ಟ್ವಿಟ್ಟರ್ ಬಳಕೆದಾರನೊಬ್ಬ ತನ್ನ ಖಾತೆಯಲ್ಲಿ ಬರೆದುಕೊಂಡಿದ್ದ. ಇದನ್ನು ನಿಜವೆಂದು ನಂಬಿ ಹಲವರು ಆ ಟ್ವೀಟ್​ಗೆ ಪ್ರತಿಕ್ರಿಯೆ ಸಹ ನೀಡಿದ್ದರು. ಆದರೆ ಆ ಟ್ವೀಟ್​ಗೆ ನೇರವಾಗಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘ಹೀಗೆ ಯಾರು ಹೇಳಿದ್ದಾರೆ? ಚಿತ್ರಕತೆಯಲ್ಲಿ ನಂಬಿಕೆ ಇರುವ ಸಿನಿಮಾಗಳಲ್ಲಿ ಮಾತ್ರವೇ ನಾನು ನಟಿಸುತ್ತೇನೆ. ಆ ಸಿನಿಮಾದ ನಟರು, ತಂತ್ರಜ್ಞರೊಟ್ಟಿಗೆ ಕೆಲಸ ಮಾಡುವುದು ನನ್ನ ಭಾಗ್ಯ ಎಂದು ನಾನು ಭಾವಿಸುತ್ತೇನೆ. ಇಂಥಹ ತಲೆ-ಬುಡವಿಲ್ಲದ ಸುದ್ದಿಗಳು ಎಲ್ಲಿಂದ ಪ್ರಾರಂಭವಾಗುತ್ತವೆ ಎಂಬುದೇ ನನಗೆ ತಿಳಿಯುತ್ತಿಲ್ಲ’ ಎಂದು ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಿಂದ ಸಾಕಷ್ಟು ಸಮಸ್ಯೆಗಳಿಗೆ ಗುರಿ ಆಗಿದ್ದಾರೆ. ಆರಂಭದಲ್ಲಿ ಹಲವು ರೀತಿಯ ಕೀಳು ಟ್ರೋಲ್​ಗಳಿಗೆ ರಶ್ಮಿಕಾ ಗುರಿಯಾಗಿದ್ದರು. ಕೆಲ ತಿಂಗಳ ಹಿಂದಷ್ಟೆ ರಶ್ಮಿಕಾರ ಡೀಪ್ ಫೇಕ್ ವಿಡಿಯೋ ಮಾಡಿ ಹರಿಬಿಟ್ಟಿದ್ದು ರಾಷ್ಟ್ರದಾದ್ಯಂತ ಸುದ್ದಿಯಾಯ್ತು. ಡೀಪ್ ಫೇಕ್ ವಿಡಿಯೋ ಮಾಡಿದವನ ಬಂಧನವೂ ಆಯ್ತು. ಈಗ ರಶ್ಮಿಕಾ ಬಗ್ಗೆ ಇಲ್ಲದ ಸುದ್ದಿಗಳನ್ನು ಹಬ್ಬಿಸಲು ಆರಂಭಿಸಿದ್ದಾರೆ ನೆಟ್ಟಿಗರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ