
‘ಬಾಹುಬಲಿ 2’ ಬಳಿಕ ನಟ ಪ್ರಭಾಸ್ (Prabhas) ಅವರು ಒಂದು ಮಾಸ್ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಇಂದು (ಡಿಸೆಂಬರ್ 22) ಬಿಡುಗಡೆ ಆಗಿದೆ. ಕೆಲವರು ಚಿತ್ರಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದರೆ, ಇನ್ನೂ ಕೆಲವರು ನೆಗೆಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ. ಮೇಕಿಂಗ್ನಲ್ಲಿ ‘ಕೆಜಿಎಫ್ 2’ ಛಾಯೆ ಹಾಗೂ ‘ಉಗ್ರಂ’ ಕಥೆಯನ್ನು ಎರವಲು ಪಡೆದ ಬಗ್ಗೆ ಅನೇಕರು ಈ ಚಿತ್ರವನ್ನು ಟೀಕಿಸಿದ್ದಾರೆ. ಸಿನಿಮಾ ಪೈರಸಿ ಆಗದಂತೆ ನೋಡಿಕೊಳ್ಳಲು ಚಿತ್ರತಂಡ ಮುಂದಾಗಿದೆ. ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಟ್ವೀಟ್ ಮಾಡಿ ವಿಶೇಷ ಮನವಿ ಮಾಡಿದೆ.
ಕನ್ನಡದಲ್ಲಿ 2014ರಲ್ಲಿ ‘ಉಗ್ರಂ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರವನ್ನು ಜನರು ಥಿಯೇಟರ್ನಲ್ಲಿ ಹೆಚ್ಚು ನೋಡಿರಲಿಲ್ಲ. ಈ ಸಿನಿಮಾದ ಪೈರಸಿ ಕಾಪಿ ಹೆಚ್ಚು ವೈರಲ್ ಆಯ್ತು. ಜನರು ಪೈರಸಿ ಕಾಪಿಯನ್ನೇ ನೋಡಿ ಮೆಚ್ಚಿಕೊಂಡರು. ಈ ಸಿನಿಮಾ ವಿಮರ್ಶೆಯಲ್ಲಿ ಗೆದ್ದಿತೇ ಹೊರತು ಗಳಿಕೆ ಮಾಡಲಿಲ್ಲ. ಈ ಬೇಸರ ಪ್ರಶಾಂತ್ ನೀಲ್ ಅವರಿಗೆ ಇದೆ. ಈ ಕಾರಣದಿಂದಲೇ ಪ್ರಶಾಂತ್ ನೀಲ್ ಅವರು ದೊಡ್ಡ ಸ್ಕೇಲ್ನಲ್ಲಿ ‘ಸಲಾರ್’ ಮಾಡಿದರು. ಈ ಸಿನಿಮಾಗೆ ಪೈರಸಿಯ ಕಾಟ ಎದುರಾಗಬಹುದು ಎಂದು ತಂಡ ಮೊದಲೇ ಎಚ್ಚೆತ್ತುಕೊಂಡಿದೆ.
ಇತ್ತೀಚೆಗೆ ಪೈರಸಿ ಕಾಟ ಜೋರಾಗಿದೆ. ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆದಾಗ ಅಭಿಮಾನಿಗಳು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ಥಿಯೇಟರ್ ಪ್ರಿಂಟ್ನ ಪೈರಸಿ ಸೈಟ್ನಲ್ಲಿ ಅಪ್ಲೋಡ್ ಮಾಡುತ್ತಾರೆ. ಈ ಕಾರಣದಿಂದ ಹೊಂಬಾಳೆ ಫಿಲ್ಮ್ಸ್ ವಿಶೇಷ ಮನವಿ ಮಾಡಿಕೊಂಡಿದೆ.
‘ಸಲಾರ್ ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲೇ ನೋಡಿ. ಪೈರಸಿ ಲಿಂಕ್ ಕಂಡರೆ ಟ್ವಿಟರ್ ಖಾತೆ @blockxtechs ಅಥವಾ @blockxtech.com ಖಾತೆಗೆ ರಿಪೋರ್ಟ್ ಮಾಡಿ’ ಎಂದು ಹೊಂಬಾಳೆ ಫಿಲ್ಮ್ಸ್ ಮನವಿ ಮಾಡಿದೆ. ಇದನ್ನು ಅಭಿಮಾನಿಗಳು ಬೆಂಬಲಿಸಿದ್ದಾರೆ. ಈ ರೀತಿಯ ದೃಶ್ಯ ಕಂಡರೆ ಮಾಹಿತಿ ನೀಡುವುದಾಗಿ ಅಭಿಮಾನಿಗಳು ಹೇಳಿದ್ದಾರೆ.
ಇದನ್ನೂ ಓದಿ: ‘ಉಗ್ರಂ’, ‘ಕೆಜಿಎಫ್’ ಚಿತ್ರಗಳನ್ನು ನೆನಪಿಸಿದ ‘ಸಲಾರ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ
‘ಸಲಾರ್’ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್’ ಅದ್ದೂರಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’, ‘ಸಾಹೋ’ ಮತ್ತು ‘ಆದಿಪುರುಷ್’ ಸಿನಿಮಾಗಳು ನಿರಾಶಾದಾಯಕವಾಗಿದ್ದವು. ಇದರಿಂದಾಗಿ ಅಭಿಮಾನಿಗಳು ‘ಸಲಾರ್’ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆ ಹುಸಿ ಆಗಿಲ್ಲ ಎಂದು ಪ್ರಭಾಸ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ‘ಸಲಾರ್’ ಸಿನಿಮಾ ಸಖತ್ ಮಾಸ್ ಆಗಿದೆ. ಪ್ರಭಾಸ್ ಅವರು ಆ್ಯಕ್ಷನ್ ಅವತಾರದಲ್ಲಿ ಮೆರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ