
‘ಯೇ ಮಾಯ ಚೇಸಾವೆ’ (Ye Maaya Chesave ) ಸಿನಿಮಾದಲ್ಲಿ ನಟಿಸಿದ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ನಡುವೆ ಪ್ರೀತಿ ಸಿಗುರಿತ್ತು. ಆ ಪ್ರೀತಿ ನಂತರ ಮದುವೆ ಹಂತಕ್ಕೆ ಹೋಯಿತು. ಆದರೆ ಹೆಚ್ಚು ವರ್ಷಗಳ ಕಾಲ ಸಮಂತಾ ಮತ್ತು ನಾಗ ಚೈತನ್ಯ (Naga Chaitanya) ಸಂಸಾರ ಮಾಡಲಿಲ್ಲ. ಅವರು ವಿಚ್ಛೇದನ ಪಡೆದುಕೊಂಡಿದ್ದು ಅಭಿಮಾನಿಗಳಿಗೆ ಶಾಕ್ ನೀಡಿತು. ಮತ್ತೆ ಸಮಂತಾ ಹಾಗೂ ನಾಗ ಚೈತನ್ಯ ಒಂದಾಗಬಹುದು ಎಂದು ಕೆಲವರು ನಿರೀಕ್ಷಿಸಿದ್ದರು. ಅದು ನಿಜವಾಗಲಿಲ್ಲ. ಕೊನೇ ಪಕ್ಷ ಸಿನಿಮಾ ಮೇಲಿನ ಪ್ರೀತಿಗಾದರೂ ಅವರು ಒಟ್ಟಿಗೆ ಕೆಲಸ ಮಾಡಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಆದರೆ ಸಮಂತಾ (Samantha Ruth Prabhu) ಅವರು ಅದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಹಲವು ಸಿನಿಮಾಗಳು ಮರು ಬಿಡುಗಡೆ ಆಗಿ ಯಶಸ್ಸು ಕಾಣುತ್ತಿವೆ. ಈ ಮೊದಲು ಸೂಪರ್ ಹಿಟ್ ಆದ ಸಿನಿಮಾಗಳನ್ನು ಮತ್ತೆ ಬಿಡುಗಡೆ ಮಾಡಿ ಜನರನ್ನು ಆಕರ್ಷಿಸಲಾಗುತ್ತಿದೆ. ಜುಲೈ 18ರಂದು ‘ಯೇ ಮಾಯ ಚೇಸಾವೆ’ ಸಿನಿಮಾ ರೀ-ರಿಲೀಸ್ ಆಗಲಿದೆ. ಈ ಸಿನಿಮಾದ ಪ್ರಚಾರದಲ್ಲಿ ನಾಗ ಚೈತನ್ಯ ಮತ್ತು ಸಮಂತಾ ಅವರು ಒಟ್ಟಿಗೆ ಭಾಗವಹಿಸುತ್ತಾರೆ ಎಂಬ ಗಾಸಿಪ್ ಹಬ್ಬಿತ್ತು. ಅದನ್ನು ಸಮಂತಾ ತಳ್ಳಿ ಹಾಕಿದ್ದಾರೆ.
ಸಮಂತಾ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ‘ಇಲ್ಲ, ನಾನು ಯೇ ಮಾಯ ಚೇಸಾವೆ ಸಿನಿಮಾವನ್ನು ಯಾರ ಜೊತೆಗೂ ಪ್ರಮೋಟ್ ಮಾಡುತ್ತಿಲ್ಲ. ಅಸಲಿಗೆ ನಾನು ಆ ಸಿನಿಮಾದ ಪ್ರಚಾರಕ್ಕೇ ಹೋಗುವುದಿಲ್ಲ. ಈ ಬಗ್ಗೆ ಗಾಸಿಪ್ ಎಲ್ಲಿಂದ ಬಂತು ಎಂಬುದು ನನಗೆ ತಿಳಿದಿಲ್ಲ. ಚಿತ್ರದ ಮುಖ್ಯ ಪಾತ್ರಧಾರಿಗಳನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ ಎನಿಸುತ್ತದೆ. ಆದರೆ ಪ್ರೇಕ್ಷಕರ ಬಯಕೆಗೆ ತಕ್ಕಂತೆ ನಾವು ಬದುಕಲು ಆಗಲ್ಲ’ ಎಂದು ಸಮಂತಾ ಅವರು ಹೇಳಿದ್ದಾರೆ.
ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ನಾಗ ಚೈತನ್ಯ ಅವರು ನಟಿ ಶೋಭಿತಾ ದುಲಿಪಾಲ ಜೊತೆ ಮದುವೆ ಮಾಡಿಕೊಂಡರು. ಆದರೆ ಸಮಂತಾ ಇನ್ನೂ ಎರಡನೇ ಮದುವೆ ಆಗಿಲ್ಲ. ಸದ್ಯಕ್ಕೆ ಅವರು ನಿರ್ದೇಶಕ ರಾಜ್ ನಿಧಿಮೋರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅವರಿಬ್ಬರು ಜೊತೆಯಾಗಿ ಸುತ್ತಾಡುತ್ತಿರುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿವೆ.
ಇದನ್ನೂ ಓದಿ: ನಟಿ ಸಮಂತಾಗೆ ಮಧ್ಯ ರಸ್ತೆಯಲ್ಲಿ ಕಿರುಕುಳ; ವೈರಲ್ ಆಗಿದೆ ವಿಡಿಯೋ
ಸಿನಿಪ್ರಿಯರಿಗೆ ‘ಯೇ ಮಾಯ ಚೇಸಾವೆ’ ಸಿನಿಮಾ ತುಂಬ ಇಷ್ಟ. ಜುಲೈ 18ರಂದು ಮತ್ತೊಮ್ಮೆ ಈ ಸಿನಿಮಾವನ್ನು ತೆರೆ ಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ನಾಗ ಚೈತನ್ಯ ಅವರು ಸಮಂತಾ ಬಗ್ಗೆ ಮಾತನಾಡುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.