ಸಮಂತಾ, ವಿಜಯ್ ದೇವರಕೊಂಡ ಸೇರಿ ತೆಲುಗಿನ ಹಲವರಿಗೆ ಚುನಾವಣಾ ಆಯೋಗದಿಂದ ನೋಟಿಸ್

ನೋಟಿಸ್ ನೀಡಿದ ತಕ್ಷಣವೇ ಯಾರದ್ದೇ ಮತದಾನದ ಹಕ್ಕನ್ನು ರದ್ದುಗೊಳಿಸಿಲ್ಲ ಅಥವಾ ಅನರ್ಹಗೊಳಿಸಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಂಬಂಧಪಟ್ಟ ವ್ಯಕ್ತಿಗಳು ಅಥವಾ ಅವರ ಪರವಾಗಿ ಅಧಿಕೃತ ಪ್ರತಿನಿಧಿಗಳು ಅಗತ್ಯ ದಾಖಲೆಗಳನ್ನು ಹಿಡಿದು ವಿಚಾರಣೆಗೆ ಹಾಜರಾಗಿ ದೋಷಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಸಮಂತಾ, ವಿಜಯ್ ದೇವರಕೊಂಡ ಸೇರಿ ತೆಲುಗಿನ ಹಲವರಿಗೆ ಚುನಾವಣಾ ಆಯೋಗದಿಂದ ನೋಟಿಸ್
Samantha, Rajamouli, Mahesh Babu, Vijay Deverakonda

Updated on: Sep 11, 2026 | 6:25 PM

ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಹೈದರಾಬಾದ್‌ನ ಪ್ರಮುಖ ನಟ-ನಟಿಯರು, ಕ್ರೀಡಾಪಟುಗಳು ಸೇರಿದಂತೆ ಹಲವು ಗಣ್ಯರಿಗೆ ಆಯೋಗದಿಂದ ನೋಟಿಸ್ ನೀಡಲಾಗಿದೆ.ಈ ಪಟ್ಟಿಯಲ್ಲಿ ನಟಿ ಸಮಂತಾ ರುತ್ ಪ್ರಭು, ನಟ ವಿಜಯ್ ದೇವರಕೊಂಡ, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಚಿತ್ರರಂಗ ಹಾಗೂ ಕ್ರೀಡಾಕ್ಷೇತ್ರದ ಪ್ರಮುಖ ಹೈ-ಪ್ರೊಫೈಲ್ ಹೆಸರುಗಳು ಕಾಣಿಸಿಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಚುನಾವಣಾ ಆಯೋಗ ನೀಡಿರುವ ಪರಿಶೀಲನಾ ನೋಟಿಸ್ ಪಡೆದವರಲ್ಲಿ ಹೈದರಾಬಾದ್ ಮೂಲದ ಪ್ರಮುಖ ವ್ಯಕ್ತಿಗಳು ಸೇರಿದ್ದಾರೆ. ಚಿತ್ರರಂಗದಿಂದ ನಟ ಮಹೇಶ್ ಬಾಬು ಹಾಗೂ ಅವರ ಪತ್ನಿ ನಮ್ರತಾ ಶಿರೋಡ್ಕರ್, ನಿರ್ದೇಶಕ ಎಸ್‌ಎಸ್ ರಾಜಮೌಳಿ, ನಟ ವೆಂಕಟೇಶ್ ದಗ್ಗುಬಾಟಿ ಮತ್ತು ಅವರ ಪುತ್ರಿಯರು, ಆನಂದ್ ದೇವರಕೊಂಡ, ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲ ಮುಂತಾದವರ ಹೆಸರು ಇದೆ.

ಕ್ರೀಡಾಕ್ಷೇತ್ರದಿಂದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್, ಪುಲ್ಲೇಲ ಗೋಪಿಚಂದ್, ಮಾಜಿ ಕ್ರಿಕೆಟರ್ ಮಿಥಾಲಿ ರಾಜ್ ಅವರ ಹೆಸರುಗಳು ಇವೆ. ಉದ್ಯಮಿ ದಿವಿಸ್ ಲ್ಯಾಬೊರೇಟರೀಸ್ ಮುಖ್ಯಸ್ಥ ಮುರಳಿ ಕೃಷ್ಣ ಪ್ರಸಾದ್ ದಿವೈ ಅವರಿಗೂ ನೋಟಿಸ್ ನೀಡಲಾಗಿದೆ. ಮತದಾರರ ಪಟ್ಟಿಯ ನವೀಕರಣ ಹಾಗೂ ದೋಷರಹಿತಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಮತದಾರರ ಗುರುತಿನ ಚೀಟಿಯಲ್ಲಿರುವ ಹೆಸರು ಅಥವಾ ತಂದೆ-ತಾಯಿಯ ಹೆಸರಿನ ಸ್ಪೆಲ್ಲಿಂಗ್‌ನಲ್ಲಿ ದೋಷಗಳು ಕಂಡುಬಂದಿದೆ. ಹಳೆಯ ದಾಖಲೆಗಳೊಂದಿಗೆ ಹೊಂದಾಣಿಕೆ ಆಗಿಲ್ಲ. ಹಿಂದಿನ ಎಸ್‌ಐಆರ್ ದಾಖಲೆಗಳ ಜೊತೆ ಪ್ರಸ್ತುತ ಮಾಹಿತಿ ಮ್ಯಾಪ್ ಆಗಿಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಸ್ಪಷ್ಟ ಕಾರಣಗಳನ್ನು ನಮೂದಿಸದೆ ಪರಿಶೀಲನೆಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಮತದಾರರ ಕರಡು ಪಟ್ಟಿಯಲ್ಲಿ ಹೆಸರಿದ್ರೂ ಬರಲಿದೆ ನೋಟಿಸ್!

ಹೈ-ಪ್ರೊಫೈಲ್ ವ್ಯಕ್ತಿಗಳಿಗೇ ಇಂತಹ ನೋಟಿಸ್‌ಗಳು ತಲುಪುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಪ್ರಭಾವಿ ಗಣ್ಯರೇ ದಾಖಲೆಗಳ ವ್ಯತ್ಯಾಸದಿಂದ ನೋಟಿಸ್ ಎದುರಿಸಬೇಕಾದರೆ, ಸಾಮಾನ್ಯ ಮತದಾರರ ಪರಿಸ್ಥಿತಿ ಏನು? ಸರಿಯಾದ ಜಾಗೃತಿ ಇಲ್ಲದ ಸಾಮಾನ್ಯ ಜನರು ಆಯೋಗದ ನೋಟಿಸ್‌ಗಳಿಗೆ ಸ್ಪಂದಿಸುವುದು ಹೇಗೆ ಎಂದು ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ವಿಚಾರಣೆಗಳು ನಡೆಯುತ್ತಿದ್ದು, ದಾಖಲೆ ಸಲ್ಲಿಸಲು ಆಯೋಗ ಸಮಯಾವಕಾಶ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 6:24 pm, Fri, 11 September 26

Loading...
Unable to load recommendations.
Follow Us