‘777 ಚಾರ್ಲಿ’ ಚಿತ್ರದಿಂದ ನಾಯಿಗಳಿಗೂ ಬಂತು ಕಾಲ; ಚಾರ್ಲಿ ಹೆಸರಿನಲ್ಲಿ ಹುಟ್ಟಿಕೊಂಡ ಅಭಿಮಾನಿ ಸಂಘ
‘777 ಚಾರ್ಲಿ’ ಶ್ವಾನಕ್ಕೂ ಅಭಿಮಾನಿ ಸಂಘ ಇದೆ. ಈ ಸಂಘದಲ್ಲಿ ನಾಯಿಗಳೇ ಪದಾಧಿಕಾರಿಗಳು. ಆ ಕುರಿತು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಚಿಕ್ಕಬಳ್ಳಾಪುರ: ನೆಚ್ಚಿನ ನಟ ನಟಿಯರು ಅಭಿನಯಿಸಿರುವ ಸಿನಿಮಾಗಳು ಬಿಡುಗಡೆ ಆದಾಗ ಅವರ ಚಲನಚಿತ್ರಗಳು ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಲಾಗುತ್ತದೆ. ನೆಚ್ಚಿನ ನಟರಿಗೆ ಶುಭ ಕೋರಿ, ಫ್ಲೆಕ್ಸ್ ಬ್ಯಾನರ್, ಕಟೌಟ್‌ಗಳನ್ನು ಹಾಕುವುದು ಸಹಜ. ಆದರೆ ಈಗ ಬಿಡುಗಡೆ ಆಗಿರುವ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ (777 Charlie Movie) ಕನ್ನಡ ಸಿನಿಮಾಗೆ ಶುಭ ಹಾರೈಸಿ ಹಾಗೂ ಚಿತ್ರದಲ್ಲಿ ಅಮೋಘವಾಗಿ ನಟಿಸಿರುವ ಚಾರ್ಲಿ ಎನ್ನುವ ನಾಯಿಯೊಂದರ ನಟನೆಗೆ ಮಾರು ಹೋಗಿರುವ ಚಿತ್ರಪ್ರೇಮಿಗಳು ವಿನೂತನವಾಗಿ ಚಿತ್ರಮಂದಿರದ ಬಳಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಹಾಕಿಸಿ ಗಮನ ಸೆಳೆದಿದ್ದಾರೆ. ಚಾರ್ಲಿ ಅನ್ನುವ ನಾಯಿಯ ಅಭಿಮಾನ ಪೂರ್ವಕವಾಗಿ ಚಾರ್ಲಿ ಅಭಿಮಾನಿಗಳ ಸಂಘವನ್ನು ಹುಟ್ಟುಹಾಕಲಾಗಿದೆ. ಈ ಸಂಘದಲ್ಲಿ ಸದಸ್ಯರು ಹಾಗೂ ಪದಾಧಿಕಾರಿಗಳನ್ನಾಗಿ ಸಾಕು ನಾಯಿಗಳನ್ನು ಗುರುತು ಮಾಡಿದ್ದಾರೆ. ಒಬ್ಬೊಬ್ಬರದು ಒಂದು ನಾಯಿ ಎಂಬಂತೆ 13 ನಾಯಿಗಳನ್ನು ಗುರ್ತಿಸಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ, ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಹಾಗೂ ಸದಸ್ಯರನ್ನಾಗಿ ಹೆಸರು ನಾಮಕರಣ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಬಿ.ಬಿ. ರಸ್ತೆಯಲ್ಲಿರುವ ಬಾಲಾಜಿ ಚಿತ್ರಮಂದಿರದ ಮುಂದೆ ‘777 ಚಾರ್ಲಿ’ ಸಿನಿಮಾದ ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಇನ್ನುಳಿದ ತಾರಾಬಳಗದ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಅದರ ಜೊತೆ ‘777 ಚಾರ್ಲಿ’ ಶ್ವಾನದ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರ ನಗರದ ಭುವನೇಶ್ವರಿ ವೃತ್ತದ 777 ಚಾರ್ಲಿ ಅಭಿಮಾನಿಗಳ ಸಂಘವೆಂದು ಬ್ಯಾನರ್ ಹಾಕಲಾಗಿದೆ.
ಇದನ್ನೂ ಓದಿ: 777 Charlie: ಚಿತ್ರಮಂದಿರಕ್ಕೆ ಬಂದು ತನ್ನದೇ ಸಿನಿಮಾ ನೋಡಿದ ಚಾರ್ಲಿ; ಇಲ್ಲಿದೆ ಕ್ಯೂಟ್ ವಿಡಿಯೋ
‘777 ಚಾರ್ಲಿ’ ಚಲನಚಿತ್ರಕ್ಕೆ ಶುಭ ಹಾರೈಸಿ ನಟನೆಯಲ್ಲಿ ಪಾಲ್ಗೊಂಡಿರುವ ಶ್ವಾನದ ಜೊತೆ ತಮ್ಮ ಸಾಕು ನಾಯಿಗಳಿಗೆ ಸಂಘ ಕಟ್ಟಿ ಅವುಗಳ ಪೋಟೋ ತೆಗೆಸಿ ಬ್ಯಾನರ್ ಹಾಕಿರುವುದು ಚಿಕ್ಕಬಳ್ಳಾಪುರದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ವರದಿ: ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಪುರ
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.