‘ವಿಕ್ರಾಂತ್ ರೋಣ’ ಚಿತ್ರ (Vikrant Rona Movie) ತೆರೆಗೆ ಬಂದು ಯಶಸ್ಸು ಕಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ಗಳಿಕೆ ಮಾಡಿದೆ. ಈ ಚಿತ್ರ ತಂಡಕ್ಕೆ ಎಲ್ಲ ಕಡೆಗಳಿಂದ ಶುಭಾಶಯ ಹರಿದು ಬರುತ್ತಿದೆ. ಈ ಚಿತ್ರದಿಂದ ನಟ ಸುದೀಪ್ ಹಾಗೂ ನಿರ್ದೇಶಕ ಅನುಪ್ ಭಂಡಾರಿ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರದ ಬಗ್ಗೆ ‘ಆ ದಿನಗಳು’ ನಟ ಚೇತನ್ ಕುಮಾರ್ (Chetan Kumar) ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಚೇತನ್ ಕುಮಾರ್ ಅವರು ತಮ್ಮ ಸಿದ್ಧಾಂತಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಈ ರೀತಿ ವಿಚಾರಗಳನ್ನು ಓಪನ್ ಆಗಿ ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ತೋರುವುದಿಲ್ಲ. ಇದರಿಂದ ಸಾಕಷ್ಟು ವಿವಾದಗಳು ಹುಟ್ಟಿಕೊಂಡ ಉದಾಹರಣೆ ಇದೆ. ಈಗ ಅವರ ಹೊಸ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
‘ವಿಕ್ರಾಂತ್ ರೋಣ ಚಿತ್ರ ತಾಂತ್ರಿಕವಾಗಿ ಮತ್ತು ಅಭಿನಯದ ದೃಷ್ಟಿಯಿಂದ ನೋಡಿದರೆ ಉತ್ತಮವಾಗಿದೆ. ಆದರೆ, ದಲಿತರನ್ನು-ಬಹುಜನರನ್ನು ದುಷ್ಟ, ಪೈಶಾಚಿಕರಂತೆ ಬಿಂಬಿಸಿ ಮುಸ್ಲಿಮರನ್ನು ಸ್ಟೀರಿಯೋಟೈಪ್ ಮಾಡಿದ್ದಾರೆ, ಈ ಸೂಕ್ಷ್ಮವಿಲ್ಲದ ಚಿತ್ರಣದಿಂದ ನಾನು ನಿರಾಶೆಗೊಂಡಿದ್ದೇನೆ. ಚಲನಚಿತ್ರ ನಿರ್ಮಾಣ ಮಾಡವವರು ಐತಿಹಾಸಿಕ ಅನ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸದೆ ಕೇವಲ ಲಾಭಕ್ಕಾಗಿ ಜಾತಿ/ಧರ್ಮವನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು’ ಎಂದಿದ್ದಾರೆ ಚೇತನ್ ಕುಮಾರ್.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 3, 2022
ಸಿನಿಮಾದಲ್ಲಿ ಫಕ್ರು ಹೆಸರಿನ ಮುಸ್ಲಿಂ ಪಾತ್ರ ಇದೆ. ಆತನಿಗೆ 11 ಮಕ್ಕಳು. ಈ ಕಾರಣಕ್ಕೆ ಮುಸ್ಲಿಮರನ್ನು ಸ್ಟಿರಿಯೋಟೈಪ್ನಲ್ಲಿ ತೋರಿಸಲಾಗಿದೆ ಎಂಬುದು ಚೇತನ್ ವಾದ ಇರಬಹುದು. ಇನ್ನು, ದಲಿತ ಸಮುದಾಯಕ್ಕೆ ಸಂಬಂಧಿಸಿದವರು ಎಂದು ಪರೋಕ್ಷವಾಗಿ ತೋರಿಸುವ ಕೆಲ ದೃಶ್ಯಗಳು ಬರುತ್ತವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚೇತನ್ ಕುಮಾರ್ ಧ್ವನಿ ಎತ್ತಿದ್ದಾರೆ ಎನ್ನಲಾಗುತ್ತಿದೆ.
‘Vikrant Rona’—good technically & in performances
I was disappointd in its insensitive portrayal of Dalit-Bahujans as vicious/diabolical & stereotyping of Muslims
Filmmakers must stop exploiting caste/religion for profits without nuanced understandings of historical in/justices
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 3, 2022
ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಸೂಪರ್ ಹಿಟ್; ಕಿಚ್ಚ ಸುದೀಪ್ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ
ಚೇತನ್ ಕುಮಾರ್ ಅವರ ಈ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಇದರಲ್ಲೂ ಜಾತಿ ಹುಡುಕುತ್ತಿರುವ ನಿಮ್ಮ ಮನಸ್ಸು ಮತ್ತು ನಿಮ್ಮ ಮಿದುಳು..’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ಚೇತನ್ ಕುಮಾರ್ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.