‘ತೋತಾಪುರಿ ಮಗುವಿನ ಪ್ರಸವ ದಿನ ಸಮೀಪಿಸಿದೆ’ ಎಂದ ನಟ ಜಗ್ಗೇಶ್​

‘ತೋತಾಪುರಿ’ ಸಿನಿಮಾದಲ್ಲಿ ಜಗ್ಗೇಶ್​ ಜತೆಗೆ ಧನಂಜಯ ಮುಖ್ಯ ಪಾತ್ರದಲ್ಲಿ ಇದ್ದಾರೆ. ಅದಿತಿ ಪ್ರಭುದೇವ ನಾಯಕಿ. ಸುಮನ್​ ರಂಗನಾಥ್​, ವೀಣಾ ಸುಂದರ್​ ಮೊದಲಾದವರು ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ.

‘ತೋತಾಪುರಿ ಮಗುವಿನ ಪ್ರಸವ ದಿನ ಸಮೀಪಿಸಿದೆ’ ಎಂದ ನಟ ಜಗ್ಗೇಶ್​
ಜಗ್ಗೇಶ್​


ನಟ ಜಗ್ಗೇಶ್ (Actor Jaggesh)​ ಅವರು ಸ್ಯಾಂಡಲ್​ವುಡ್​ನಲ್ಲಿ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಟನೆಯ ‘ತೋತಾಪುರಿ’ ಚಿತ್ರದ (Totapuri ) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ವಿಜಯ ಪ್ರಸಾದ್​ ನಿರ್ದೇಶನ ಮಾಡಿರುವ ಈ ಚಿತ್ರ, ಪೋಸ್ಟರ್​ ಮೂಲಕ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಈ ಚಿತ್ರದ ಕೆಲಸಗಳು ಮುಗಿದಿದ್ದು, ರಿಲೀಸ್​ಗೆ ರೆಡಿ ಇದೆ. ಸದ್ಯ, ದೇಶದಲ್ಲಿ ಪರಿಸ್ಥಿತಿ ಸರಿಯಿಲ್ಲ. ಎಲ್ಲೆಲ್ಲೂ ಕೊವಿಡ್​ ಮೂರನೇ ಅಲೆಯ ಅಬ್ಬರ (Covid 3rd Wave)ಶುರುವಾಗಿದೆ. ಈ ಕಾರಣಕ್ಕೆ ಚಿತ್ರಮಂದಿರಗಳಲ್ಲಿ ಶೇ. 50 ಆಸನ ವ್ಯವಸ್ಥೆ, ರಾತ್ರಿ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಜಾರಿಗೆ ಬಂದಿದೆ. ಹೀಗಾಗಿ, ಸಿನಿಮಾ ರಿಲೀಸ್​ ಸದ್ಯದ ಮಟ್ಟಿಗಂತೂ ಅಸಾಧ್ಯ. ‘ತೋತಾಪುರಿ’ ಸಿನಿಮಾದ ಸ್ಥಿತಿಯೂ ಅದೇ ರೀತಿ ಇದೆ. ಈ ಬಗ್ಗೆ ಜಗ್ಗೇಶ್​ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ತುಂಬಾನೇ ಫನ್ನಿಯಾಗಿದೆ.

‘ತೋತಾಪುರಿ ಮಗುವಿನ ಪ್ರಸವ ದಿನ ಸಮೀಪಿಸಿದೆ’ ಎನ್ನುವ ಸಾಲಿನಿಂದ ಈ ಪೋಸ್ಟ್ ಆರಂಭವಾಗುತ್ತದೆ. ‘ಗಾಂಧಿನಗರದ ಡಾ: ತೇಟ್ರಮ್ಮ ಪ್ರಸವದಿನ ಹತ್ತಿರ ಬಂದಿದೆ. ಕೊರೊನಾ ಕಾಟಕ್ಕೆ ಬೆಡ್ಡಿಲ್ಲಾ ಸ್ವಲ್ಪ ತಾಳ್ಮೆಯಿಂದ ಇರಿ ಎಂದು ಮಗುವಿನ ತಾಯಿ ಸುರೇಶ್ ಅಮ್ಮನಿಗೆ ಸಮಾಧಾನ ಹೇಳುತ್ತಿದ್ದಾಳೆ. ಆದರೆ ‘ತೋತಾಪುರಿ’ ಎಂಬ ಮಗು ಹೊಟ್ಟೆಯಲ್ಲೆ ಊರಗಲ ಬೆಳೆದು ತಾಯಿ ಒಡಲು ಡ್ರಮ್ ಆಗಿದೆ. ಹುಟ್ಟುವ ಮಗು ‘ತೋತಾಪುರಿ’ ಗಂಡಾಗಲಿ ಎಂದು ಆಸ್ಪತ್ರೆಯ ಸಿಬ್ಬಂದಿ, ಕರ್ನಾಟಕ ಜನ ಹರಸುತ್ತಿದ್ದಾರೆ’ ಎಂದಿದ್ದಾರೆ ಜಗ್ಗೇಶ್​.

‘ಮಗುವಿನ ತಂದೆ ವಿಜಯಪ್ರಸಾದ್ ಮಾತ್ರ ಆಸ್ಪತ್ರೆಯ ಜಗಲಿಯ ಮೇಲೆ ಕುಳಿತು, ಹೊರಗೆ ಸ್ನೇಹಿತರೊಂದಿಗೆ ‘ನರಸಮ್ಮನ ಜೊತೆ ಏನ್ ನರಸಮ್ಮ ಸಮಾಚಾರ? ಯಾವ ಊರು? ಸಂಬಳ ಎಷ್ಟು? ಮದುವೆ ಆಗಿದೆಯಾ? ಮತ್ತೆ ವಿಷಯ?’ ಎಂದು ಆಕೆಯ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಲೇಬರ್ ವಾರ್ಡ್ ಒಳಗಿಂದ ತಾಯಿ ರೀ, ಬನ್ರೀ ಆಗ್ತಾ ಇಲ್ಲಾ ಎಂದು ಚೀರುತ್ತಿದ್ದಾಳೆ. ‘ತೋತಾಪುರಿ’ ಬೇಗ ಜನಿಸಲಿ ಎಂದು ಹರಸಿ ಬಂಧುಗಳೇ. ನಿಮ್ಮ ಖುಷಿಪಡಿಸಲು ಸಣ್ಣ ಹಾಸ್ಯ ಬರಹ’ ಎಂದು ಅವರು ಬರೆದುಕೊಂಡಿದ್ದಾರೆ.

‘ತೋತಾಪುರಿ’ ಸಿನಿಮಾದಲ್ಲಿ ಜಗ್ಗೇಶ್​ ಜತೆಗೆ ಧನಂಜಯ ಮುಖ್ಯ ಪಾತ್ರದಲ್ಲಿ ಇದ್ದಾರೆ. ಅದಿತಿ ಪ್ರಭುದೇವ ನಾಯಕಿ. ಸುಮನ್​ ರಂಗನಾಥ್​, ವೀಣಾ ಸುಂದರ್​ ಮೊದಲಾದವರು ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ‘ತೋತಾಪುರಿ 2’ ಸಿನಿಮಾ ಕೂಡ ಸಿದ್ಧಗೊಳ್ಳುತ್ತಿದೆ.

ಇದನ್ನೂ ಓದಿ: ಅಪ್ಪು​ ಜತೆಗಿನ ಕೊನೆಯ ಭೇಟಿ ಬಗ್ಗೆ ‘ಪುನೀತ ನಮನ’ ವೇದಿಕೆಯಲ್ಲಿ ಜಗ್ಗೇಶ್​ ಹೇಳಿದ್ದೇನು?

ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾದ ಸಂತೋಷ್​ ಆನಂದ್​ರಾಮ್​, ಜಗ್ಗೇಶ್​; ಮೈಸೂರಿನಲ್ಲಿ ಶೂಟಿಂಗ್​

Click on your DTH Provider to Add TV9 Kannada