ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ಕನ್ನಡದ ಕಂಪು ಹರಡಿದ ದಿಶಾ ಮದನ್
ನಟಿ ದಿಶಾ ಮದನ್ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ಮಾಧ್ಯಮದ ಜೊತೆ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಕಾನ್ ನಗರದಲ್ಲಿ ಕೂಡ ಕನ್ನಡದಲ್ಲೇ ಮಾತನಾಡುವ ಮೂಲಕ ದಿಶಾ ಮದನ್ ಅವರು ಗಮನ ಸೆಳೆದಿದ್ದಾರೆ. ಅವರ ಈ ಗುಣಕ್ಕೆ ಕನ್ನಡಿಗರು ಭೇಷ್ ಎನ್ನುತ್ತಿದ್ದಾರೆ.

ಪರಭಾಷೆಯಲ್ಲಿ ಸಣ್ಣ ಅವಕಾಶ ಸಿಕ್ಕರೂ ಸಾಕು, ಕನ್ನಡವನ್ನೇ ಮರೆತವರಂತೆ ವರ್ತಿಸುವ ನಟಿಯರು ಅನೇಕರಿದ್ದಾರೆ. ಆದರೆ ಅಪ್ಪಟ ಕನ್ನಡತಿ ದಿಶಾ ಮದನ್ (Disha Madan) ಅವರು ಜಾಗತಿಕ ಮಟ್ಟದಲ್ಲಿ ಮಿಂಚುವ ಅವಕಾಶ ಸಿಕ್ಕಾಗಲೂ ಕನ್ನಡವನ್ನು ಮರೆತಿಲ್ಲ. 2025ನೇ ಸಾಲಿನ ಕಾನ್ ಫಿಲ್ಮ್ ಫೆಸ್ಟಿವಲ್ (Cannes 2025) ನಡೆಯುತ್ತಿದೆ. ಇದರಲ್ಲಿ ಹಲವು ದೇಶಗಳ ಸೆಲೆಬ್ರಿಟಿಗಳು ಬಂದಿದ್ದಾರೆ. ಕನ್ನಡದ ನಟಿ ದಿಶಾ ಮದನ್ ಅವರಿಗೂ ಈ ಚಿತ್ರೋತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಕಾನ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ನಲ್ಲಿ ಅವರು ಕನ್ನಡ (Kannada) ಮಾತನಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
‘ನಾನು ನನ್ನ ಭಾಷೆಯಲ್ಲಿ ಮಾತನಾಡುತ್ತೇನೆ. ಕರ್ನಾಟಕದ ಜನತೆ ನನ್ನನ್ನು ಪ್ರೋತ್ಸಾಹಿಸಿದ್ದಕ್ಕೆ ಇಂದು ನನ್ನ ಕನಸು ನನಸಾಗಿದೆ. ಧನ್ಯವಾದಗಳು’ ಎಂದು ದಿಶಾ ಮದನ್ ಅವರು ಕನ್ನಡದಲ್ಲೇ ಹೇಳಿದ್ದಾರೆ. ನಂತರ ಎಲ್ಲರಿಗೂ ಅರ್ಥವಾಗಲಿ ಎಂಬ ಕಾರಣಕ್ಕೆ ಇಂಗ್ಲಿಷ್ಗೂ ಭಾಷಾಂತರಿಸಿ ಹೇಳಿದ್ದಾರೆ. ವೈರಲ್ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
Kannada on the Cannes red carpet.
The Kannada identity is of at most significance in times of globalization.
Good on you, Disha Madan. 💪🏽 pic.twitter.com/mzATFeXdrx
— Harish Itagi (@HarishSItagi) May 18, 2025
ದಿಶಾ ಮದನ್ ಯಾರು:
ದಿಶಾ ಮದನ್ ಅವರು ಅಪ್ಪಟ ಕನ್ನಡದ ಹುಡುಗಿ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದವರು ಅವರು. ಚಿಕ್ಕ ವಯಸ್ಸಿನಿಂದಲೇ ಅವರು ಡ್ಯಾನ್ಸ್ ಕಲಿತರು. ಮನೆಯಲ್ಲಿ ಅದಕ್ಕೆ ಪೂರಕವಾದ ವಾತಾವರಣ ಇತ್ತು. ಕನ್ನಡದ ಕಿರುತೆರೆ ಲೋಕದಲ್ಲಿ ದಿಶಾ ಮದನ್ ಫೇಮಸ್ ಆಗಿದ್ದಾರೆ. ‘ಡ್ಯಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಅವರು ವಿನ್ನರ್ ಆದರು. ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ವೆಬ್ ಸಿರೀಸ್, ‘ಫ್ರೆಂಚ್ ಬಿರಿಯಾನಿ’ ಸಿನಿಮಾದಲ್ಲಿ ನಟಿಸಿ ಜನರನ್ನು ರಂಜಿಸಿದರು. ಈಗ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ಮಿಂಚಿದ್ದಾರೆ.
ದಿಶಾ ಮದನ್ ವಿಶೇಷ ಸೀರೆ:
ವಿಶೇಷ ಏನೆಂದರೆ ದಿಶಾ ಮದನ್ ಅವರು 70 ವರ್ಷಗಳ ಹಳೆಯ ಸೀರೆಯನ್ನು ಧರಿಸಿದ್ದಾರೆ. 7 ದಶಕದಷ್ಟು ಹಳೆಯ ಕಾಂಚಿವರಂ ಸೀರೆಗೆ ಅವರು ಮಾಡರ್ನ್ ಸ್ಪರ್ಶ ನೀಡಿದ್ದಾರೆ. ಅವರು ಧರಿಸಿರುವ ಆಭರಣಗಳು ಕೂಡ ದಶಕಗಳಷ್ಟು ಹಳೆಯವು. ಸೀರೆ ಧರಿಸಿಯೂ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








