
ನಟ ಸಿದ್ದು ಮೂಲಿಮನಿ (Siddu Moolimani) ಅವರು ಇತ್ತೀಚೆಗೆ ‘ಅಜ್ಞಾತವಾಸಿ’ ಸಿನಿಮಾದಲ್ಲಿ ಒಂದು ಮುಖ್ಯವಾದ ಪಾತ್ರ ಮಾಡುವ ಮೂಲಕ ಗಮನ ಸೆಳೆದರು. ಈಗ ಅವರು ‘ಸೀಟ್ ಎಡ್ಜ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಿದ್ದು ಮೂಲಿಮನೆ ಅವರು ಹೆಸರು ಮಾಡಿದ್ದಾರೆ. ಅವರು ಹೀರೋ ಆಗಿರುವ ‘ಸೀಟ್ ಎಡ್ಜ್’ (Seat Edge) ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಿಂದ ಎರಡನೇ ಹಾಡು ಬಿಡುಗಡೆ ಮಾಡಲಾಗಿದೆ. ಚೇತನ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ‘ಎನ್.ಆರ್. ಸಿನಿಮಾ ಪ್ರೊಡಕ್ಷನ್ಸ್’ ಮೂಲಕ ಗಿರಿಧರ ಟಿ. ವಸಂತಪುರ ಮತ್ತು ಸುಜಾತಾ ಗಿರಿಧರ ಬಂಡವಾಳ ಹೂಡಿದ್ದಾರೆ.
ನಿರ್ದೇಶಕ ಚೇತನ್ ಶೆಟ್ಟಿ ಅವರು ಈ ಮೊದಲು ‘ಕೆಮಿಸ್ಟ್ರೀ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆ ಅನುಭವದೊಂದಿಗೆ ಅವರು ಈಗ ‘ಸೀಟ್ ಎಡ್ಜ್’ ಸಿನಿಮಾಗೆ ಸ್ವತಂತ್ರ ನಿರ್ದೇಶಕರಾಗಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರಿಗೆ ರವೀಕ್ಷಾ ಶೆಟ್ಟಿ ನಾಯಕಿ ಆಗಿದ್ದಾರೆ.
‘ಸೀಟ್ ಎಡ್ಜ್’ ಸಿನಿಮಾದ ಪಾತ್ರವರ್ಗದಲ್ಲಿ ರಾಘು ರಾಮನಕೊಪ್ಪ, ಮಿಮಿಕ್ರಿ ಗೋಪಿ , ಗಿರೀಶ್ ಶಿವಣ್ಣ, ಲಕ್ಷ್ಮಿ ಸಿದ್ದಯ್ಯ, ಪುನೀತ್ ಬಾಬು, ಮನಮೋಹನ್ ರೈ, ತೇಜು ಪೊನ್ನಪ್ಪ ಮುಂತಾದವರು ನಟಿಸಿದ್ದಾರೆ. ಸದ್ಯಕ್ಕೆ ಈ ಸಿನಿಮಾಗೆ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆ. ಜುಲೈನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.
‘ಸೀಟ್ ಎಡ್ಜ್’ ಚಿತ್ರದಲ್ಲಿ ಡಾರ್ಕ್ ಕಾಮಿಡಿ ಜೊತೆಗೆ ಹಾರರ್, ಥ್ರಿಲ್ಲರ್ ಕಹಾನಿ ಇರಲಿದೆ. ಯೂಟ್ಯೂಬ್ ಬ್ಲಾಗರ್ ಆಗಿರುವ ಹುಡುಗನೊಬ್ಬನ ಘೋಸ್ಟ್ ಹಂಟಿಂಗ್ ಸಾಹಸವನ್ನು ತೋರಿಸಲಾಗುತ್ತದೆ. ಈ ಪ್ರಯತ್ನದಲ್ಲಿ ಆತ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದರ ಸುತ್ತ ಈ ಸಿನಿಮಾದ ಕಥೆ ಇದೆ. ಮೈಸೂರು, ಬೆಂಗಳೂರು, ಶಿವಮೊಗ್ಗ ಮುಂತಾದೆಡೆ 45 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ದೀಪಕ್ ಕುಮಾರ್ ಜೆ.ಕೆ. ಅವರು ಛಾಯಾಗ್ರಹಣ ಮಾಡಿದ್ದಾರೆ. ನಾಗೇಂದ್ರ ಉಜ್ಜನಿ ಅವರು ಸಂಕಲನ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಶಾಖಾಹಾರಿ’ ರೀತಿಯೇ ಗಮನ ಸೆಳೆದ ‘ಅಜ್ಞಾತವಾಸಿ’ ಈಗ ಒಟಿಟಿಗೆ; ಇಲ್ಲಿದೆ ವಿವರ
ಆಕಾಶ್ ಪರ್ವ ಅವರು ‘ಸೀಟ್ ಎಡ್ಜ್’ ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಈ ಹಿಂದೆ ಈ ಸಿನಿಮಾದ ಮೊದಲ ಸಾಂಗ್ ಬಿಡುಗಡೆ ಆಗಿತ್ತು. ಸಿದ್ದು ಕೊಡಿಪುರ ಸಾಹಿತ್ಯದ ‘ಸಾರಿ ಹೇಳುವೆ ಜಗಕ್ಕೆ…’ ಎಂಬ ರೊಮ್ಯಾಂಟಿಕ್ ಹಾಡಿಗೆ ಅರ್ಮಾನ್ ಮಲ್ಲಿಕ್ ಧ್ವನಿ ನೀಡಿದ್ದರು. ಈಗ ‘ಸೀಟ್ ಎಡ್ಜ್’ ಚಿತ್ರದ ‘ಹಂಗೋ ಹಿಂಗೋ…’ ಹಾಡು ಬಿಡುಗಡೆ ಆಗಿದೆ. ಲಕ್ಷ್ಮಿ ರಮೇಶ್ ಅವರು ಸಾಹಿತ್ಯ ಬರೆದಿದ್ದಾರೆ. ಟಿಪ್ಪು ಅವರ ಕಂಠದಲ್ಲಿ ಹಾಡು ಮೂಡಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.