ಆರ್ಜೆ ಪ್ರದೀಪ್ರ ‘ಮರ್ಯಾದೆ ಪ್ರಶ್ನೆ’ಗೆ ಆಲ್ ಓಕೆಯ ಹಾಡಿನ ಸಡಗರ
ಆರ್ಜೆ ಪ್ರದೀಪ್ ನಿರ್ಮಿಸುತ್ತಿರುವ ಮೊದಲ ಸಿನಿಮಾ ‘ಮರ್ಯಾದೆ ಪ್ರಶ್ನೆ’ ಭಿನ್ನವಾಗಿ ಸಿನಿಮಾದ ಪ್ರಚಾರದಲ್ಲಿ ತೊಡಗಿದೆ. ಈ ಹಿಂದೆ ಸೆಲೆಬ್ರಿಟಿಗಳಿಂದ ‘ಮರ್ಯಾದೆ ಪ್ರಶ್ನೆ’ ಪೋಸ್ಟ್ಗಳನ್ನು ಹಾಕಿಸಿದ್ದ ಪ್ರದೀಪ್, ಈಗ ಆಲ್ ಓಕೆ ಅವರಿಂದ ಹಾಡೊಂದನ್ನು ಮಾಡಿಸಿ ಬಿಡುಗಡೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ (Sandalwood) ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ ಆರ್ಜೆ ಪ್ರದೀಪ್ ಇದೀಗ ‘ಮರ್ಯಾದೆ ಪ್ರಶ್ನೆ’ ಎಂಬ ಹೊಸ ಸಿನಿಮಾದೊಂದಿಗೆ ಬರುತ್ತಿದ್ದಾರೆ. ಅಬ್ಬರದ ಕಮರ್ಶಿಯಲ್, ಮಾಸ್ ಸಿನಿಮಾಗಳ ನಡುವೆ ಕಂಟೆಂಟ್ ಹೊಂದಿರುವ ಸಿನಿಮಾ ನಿರ್ಮಾಣಕ್ಕೆ ಪ್ರದೀಪ್ ಕೈಹಾಕಿದ್ದು, ಆಲ್ ಓಕೆಯಿಂದ ಸಿನಿಮಾಕ್ಕಾಗಿ ಹಾಡೊಂದನ್ನು ಮಾಡಿಸಿದ್ದಾರೆ.
‘ಸಕ್ಕತ್ ಸ್ಟುಡಿಯೋ’ ಮೂಲಕ ಆರ್ ಜೆ ಪ್ರದೀಪ್ ಅವರು ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ‘ಮರ್ಯಾದೆ ಪ್ರಶ್ನೆ ’. ಭಿನ್ನ ಮಾದರಿಯ ಕಂಟೆಂಟ್ ಮೂಲಕ ಪ್ರೇಕ್ಷಕರ ಗಮನಸೆಳೆಯುತ್ತಿರುವ ಸಕ್ಕತ್ ಸ್ಟುಡಿಯೋ ನಮ್ಮ ಚಿತ್ರರಂಗದ ಸೆಲಿಬ್ರಿಟಿಸ್ ಅವರವರ ಜೀವನದ ‘ಮರ್ಯಾದೆ ಪ್ರಶ್ನೆ ’ ಬಗ್ಗೆ ಪೋಸ್ಟ್ ಮಾಡುವ ಮೂಲಕ ಶೀರ್ಷಿಕೆ ಬಿಡುಗಡೆ ಮಾಡಿದ್ದರು.
ಆರ್ ಜೆ ಪ್ರದೀಪ್ ಪ್ರದೀಪ್ ಒಡೆತನದ ಸಕ್ಕತ್ ಸ್ಟುಡಿಯೋ ಬಹಳ ಕ್ರಿಯೇಟಿವ್ ಆಗಿ ‘ಮರ್ಯಾದೆ ಪ್ರಶ್ನೆ’ ಸಿನಿಮಾವನ್ನು ಪ್ರಮೋಷನ್ ಮಾಡ್ತಿದೆ. RCB ಕಪ್ ಗೆಲ್ಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ ಈಗ ಆಲ್ ಓಕೆ ಕಡೆಯಿಂದಲೂ ಮರ್ಯಾದೆ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದೆ. ಕನ್ನಡದ ಖ್ಯಾತ ರ್ಯಾಪರ್ ಆಲ್ ಓಕೆ ಮಿಡ್ಡ್ಲ್ ಕ್ಲಾಸ್ ಮಂದಿಯ ಸಡಗರಗಳ ಬಗ್ಗೆ ಬಹಳ ಅರ್ಥಪೂರ್ಣವಾದ ಗೀತೆಯೊಂದನ್ನು ತಯಾರಿಸಿದ್ದು ಸಕ್ಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಿಸಿದೆ.
ಇದನ್ನೂ ಓದಿ:ಐಟಿ ಕೆಲಸ ಬಿಟ್ಟು ಸ್ಟಾರ್ಟ್ ಅಪ್ ಆರಂಭಿಸಿ ಬಾತ್ ರೂಂ ಸಿಂಗರ್ಸ್ಗೆ ಹಾಡುಗಾರಿಕೆ ಕಲಿಸಿದ ಸುನಿಲ್ ಕೋಶಿ
ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಎಲ್ರಿಗೂ “ಒಗ್ಗಟ್ಟಾಗಿ ದುಡಿಯುವ ಬೆಳೆಯುವ ಹಾಗೂ ಸ್ಟಾರ್ ಸಿನಿಮಾಗಳ ಜೊತೆಗೆ ಹೊಸ ಪ್ರಯತ್ನಗಳಿಗೂ ಜನ ಜೈ ಎನ್ನಬೇಕು. ಇದು ಬರೀ ಮರ್ಯಾದೆ ಪ್ರಶ್ನೆ ಅಲ್ಲಾ ನಮ್ಮೆಲ್ಲರ ಉಳಿವಿನ ಪ್ರಶ್ನೆ ” ಎಂಬ ಗಟ್ಟಿ ಕೂಗೊಂದನ್ನು ನೀಡಿದ್ದಾರೆ.
‘ಮರ್ಯಾದೆ ಪ್ರಶ್ನೆ’, ನಿರ್ಮಾಣದ ಜೊತೆಗೆ ಪ್ರದೀಪ್ ಕತೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಆಗಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸದೊಂದು ಕಥೆ ಕೊಡೊಕೆ ರೆಡಿ ಆಗಿದ್ದಾರೆ. ಮರ್ಯಾದೆ ಪ್ರಶ್ನೆ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಯಾರೆಲ್ಲ ಇದ್ದಾರೆ ಅನ್ನೋ ಕುತೂಹಲ ಇದೆ. ಕನ್ನಡದ ಅದ್ಭುತ ಕಲಾವಿದರ ದಂಡೇ ಇದರಲ್ಲಿದೆ ಎಂಬ ಮಾಹಿತಿಯಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ