‘ಉಗ್ರಂ’ನಿಂದ ‘ಸಲಾರ್’ ಚಿತ್ರದವರೆಗೆ: ಪ್ರಶಾಂತ್ ನೀಲ್ ಸಿನಿಮಾಗೆ ಈ ಹೀರೋ ಪಾತ್ರಗಳೇ ಸ್ಫೂರ್ತಿ
ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈ ಚಿತ್ರದ ಪಾತ್ರದ ಬಗ್ಗೆ ಪ್ರಶಾಂತ್ ನೀಲ್ ಮಾತನಾಡಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ ಸಿನಿಮಾಗಳಲ್ಲಿ ಹೀರೋ, ವಿಲನ್ ಪಾತ್ರಗಳಿಗೆ ಸಾಕಷ್ಟು ಪ್ರಾಮುಖ್ಯತೆ ಇರುತ್ತದೆ. ಅವರ ಎಲ್ಲಾ ಸಿನಿಮಾಗಳಲ್ಲಿ ಹೀರೋಗೆ ಒಂದು ವಿಲನ್ ಶೇಡ್ ಇರುತ್ತದೆ. ಹಾಗಂತ ಅದನ್ನು ವಿಲನ್ ಪಾತ್ರ ಎಂದು ಕರೆಯೋಕೆ ಸಾಧ್ಯವೇ ಇಲ್ಲ. ಈಗ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ. ಈ ಚಿತ್ರದ ಟ್ರೇಲರ್ ಡಿಸೆಂಬರ್ 1ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಗ್ಗೆ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. ತಮ್ಮ ಎಲ್ಲಾ ಸಿನಿಮಾಗಳಿಗೆ ಅಮಿತಾಭ್ ಬಚ್ಚನ್ ಪಾತ್ರಗಳೇ ಸ್ಫೂರ್ತಿ ಎಂದಿದ್ದಾರೆ.
‘ಉಗ್ರಂ’ ಸಿನಿಮಾದಲ್ಲಿ ಕಥಾ ನಾಯಕ ಕೊಲೆ, ಸುಲಿಗೆ ಮಾಡುತ್ತಾನೆ. ‘ಕೆಜಿಎಫ್’, ‘ಕೆಜಿಎಫ್ 2’ ಚಿತ್ರದಲ್ಲಿ ಹೀರೋ ಗ್ಯಾಂಗ್ಸ್ಟರ್. ಈಗ ‘ಸಲಾರ್’ ಚಿತ್ರದಲ್ಲೂ ಕಥಾ ನಾಯಕನಿಗೆ ಅದೇ ರೀತಿಯ ಪಾತ್ರ ಇರೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಈ ರೀತಿಯ ಪಾತ್ರಗಳನ್ನು ಸೃಷ್ಟಿ ಮಾಡಲು ಅಮಿತಾಭ್ ಅವರು ಮಾಡಿದ ಸಿನಿಮಾಗಳ ಪ್ರಭಾವ ಸಾಕಷ್ಟಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ನನ್ನ ಎಲ್ಲಾ ಸಿನಿಮಾಗಳಿಗೆ ಅಮಿತಾಭ್ ಬಚ್ಚನ್ ಅವರು ಸ್ಫೂರ್ತಿ. ಅವರು ಹಲವು ಸಿನಿಮಾಗಳಲ್ಲಿ ಹೀರೋ ಪಾತ್ರ ಮಾಡಿದ್ದಾರೆ. ಅದರಲ್ಲಿ ಅವರು ವಿಲನ್ ಕೂಡ ಹೌದು. ಅವರ ಕಾಲಘಟ್ಟದಲ್ಲಿ ಈ ರೀತಿಯ ಸಿನಿಮಾಗಳು ಅಲ್ಲೊಂದು ಇಲ್ಲೊಂದು ಬಂದಿವೆ. ಈ ರೀತಿಯ ಗ್ರೇ ಶೇಡ್ ಪಾತ್ರಗಳನ್ನು ಇನ್ಯಾರೂ ಮಾಡಿಲ್ಲ’ ಎಂದಿದ್ದಾರೆ ಪ್ರಶಾಂತ್ ನೀಲ್.
‘ವಿಲನ್ ಹೀರೋ ಆಗಿ ಕಾಣುವಂತೆ ಮಾಡುತ್ತಾರೆ. ನನ್ನ ಸಿನಿಮಾಗಳಲ್ಲೂ ಅದನ್ನು ಪ್ರಯತ್ನಿಸಿದೆ. ನಾನು ಸೃಷ್ಟಿಸುವ ಪಾತ್ರಗಳು ಸಾಕಷ್ಟು ನೆಗೆಟಿವ್ ಆಗಿ ಕಾಣುವಂತೆ ನಾನು ಮಾಡುತ್ತೇನೆ. ನನ್ನ ಸಿನಿಮಾಗಳಲ್ಲಿ ಹೀರೋಗಳೇ ದೊಡ್ಡ ವಿಲನ್ಗಳು’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಡಂಕಿ’ ಜೊತೆ ‘ಸಲಾರ್’ ಕ್ಲ್ಯಾಷ್: ಪ್ರಶಾಂತ್ ನೀಲ್ ಹೇಳಿದ್ದು ಹೀಗೆ
1990ರಲ್ಲಿ ಬಂದು ಅಮಿತಾಭ್ ನಟನೆಯ ‘ಅಗ್ನೀಪಥ್’ ರಿಲೀಸ್ ಆಗಿ ಗೆದ್ದಿತ್ತು. ಪ್ರಶಾಂತ್ ನೀಲ್ ಅವರ ಫೇವರಿಟ್ ಸಿನಿಮಾ ಇದು. ಇದು ರಿವೇಂಜ್ ಕಥೆಯನ್ನು ಹೊಂದಿತ್ತು. ಮುಕುಲ್ ಆನಂದ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ‘ನಾನು ಸಾಯುವುದಕ್ಕೂ ಮೊದಲು ಅಮಿತಾಭ್ ಬಚ್ಚನ್ ಜೊತೆ ಸಿನಿಮಾ ಮಾಡಬೇಕು. ಇದು ನನ್ನ ಜೀವನದ ದೊಡ್ಡ ಕನಸು. ನನ್ನ ಸಿನಿಮಾದಲ್ಲಿ ಅತಿ ದೊಡ್ಡ ವಿಲನ್ ಆಗಿ ಅವರನ್ನು ಮಾಡಬೇಕು. ಅವರು ಒಪ್ಪಿದರೆ ನಾನು ಸಿನಿಮಾ ಮಾಡುತ್ತೇನೆ. ಅದು ನನಗೆ ಸಿಗುವ ದೊಡ್ಡ ಗೌರವ’ ಎಂದಿದ್ದಾರೆ ಪ್ರಶಾಂತ್ ನೀಲ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:13 am, Thu, 30 November 23