AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಂತ್​ನಾಗ್​ಗೆ ಸಿಟ್ಟು ಬರುತ್ತಾ? ಪತ್ನಿ ಗಾಯತ್ರಿ ಹೇಳಿದ ಅಪರೂಪದ ಸಂಗತಿ

Anant Nag: ಸ್ಪುರದ್ರೂಪಿ, ಶಾಂತಮೂರ್ತಿಯಂತೆ ಕಾಣುವ ಅನಂತ್​ ನಾಗ್​ಗೆ ವಿಪರೀತ ಕೋಪವಂತೆ, ಅವರಿಗೆ ಕೋಪ ಯಾವಾಗ ಬರುತ್ತೆ? ಯಾವ ಕಾರಣಕ್ಕೆ ಬರುತ್ತೆ ಪತ್ನಿ ಗಾಯತ್ರಿ ವಿವರಿಸಿದ್ದಾರೆ.

ಅನಂತ್​ನಾಗ್​ಗೆ ಸಿಟ್ಟು ಬರುತ್ತಾ? ಪತ್ನಿ ಗಾಯತ್ರಿ ಹೇಳಿದ ಅಪರೂಪದ ಸಂಗತಿ
ಅನಂತ್ ನಾಗ್
ಮಂಜುನಾಥ ಸಿ.
|

Updated on: Aug 13, 2023 | 6:22 PM

Share

ಹಿರಿಯ ನಟ ಅನಂತ್​ನಾಗ್ (Anant Nag)​ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಾರೆ. ಈ ಸಾಧನೆಯನ್ನು ಸಂಭ್ರಮಿಸಲು ‘ಸುವರ್ಣ ಅನಂತ ಅಭಿನಂದನೆ’ ಕಾರ್ಯಕ್ರಮ ಆಯೋಜಿತವಾಗಿತ್ತು. ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ (Ramesh Arvind) ಅವರು ಅನಂತ್​ ನಾಗ್ ಅವರೊಟ್ಟಿಗೆ ಸಂವಾದ ನಡೆಸಿದರು. ಈ ಸಂವಾದದಲ್ಲಿ ತಮ್ಮ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಅನಂತ್ ನಾಗ್ ಮಾತನಾಡಿದ್ದರು, ಸಂವಾದದ ನಡುವೆ ಅನಂತ್​ನಾಗ್​ರ ಪತ್ನಿ ಗಾಯತ್ರಿ ಅವರು ಅನಂತ್​ನಾಗ್​ರ ಸಿಟ್ಟಿನ ಬಗ್ಗೆ ಆಡಿದ ಮಾತುಗಳು ಆಸಕ್ತಿಕರವಾಗಿತ್ತು.

ಸ್ಪುರದ್ರೂಪಿ, ಶಾಂತಮೂರ್ತಿಯಂತೆ ಕಾಣುವ ಅನಂತ್​ನಾಗ್​ಗೆ ವಿಪರೀತ ಸಿಟ್ಟು ಬರುತ್ತದೆ ಎಂಬುದು ಗಾಯತ್ರಿ ಅವರ ಆರೋಪ. ಕಾರ್ಯಕ್ರಮದಲ್ಲಿ ಅವರೇ ಹೇಳಿದಂತೆ, ನೋಡಲು ಕೆಂಪಗೆ, ಬೆಳ್ಳಗೆ ಬಹಳ ಶಾಂತ ಸ್ವಭಾವದವರಂತೆ ಕಾಣುತ್ತಾರೆ ಆದರೆ ಅವರಿಗೆ ಬಹಳ ಸಿಟ್ಟು ಬರುತ್ತದೆ, ಒಮ್ಮೊಮ್ಮೆಯಂತೂ ಬಹಳ ಸಣ್ಣ-ಪುಟ್ಟ ವಿಷಯಗಳಿಗೂ ಬಹಳ ಸಿಟ್ಟು ಮಾಡಿಕೊಳ್ಳುತ್ತಾರೆ. ಸಜೀವ ಜ್ವಾಲಮುಖಿ ಅವರು” ಎಂದರು.

ಹೋಟೆಲ್ ಒಂದರಲ್ಲಿ ಒಮ್ಮೆ ನಡೆದ ಪ್ರಸಂಗವನ್ನು ತಮ್ಮ ಮಾತಿಗೆ ಸಾಕ್ಷಿಯಾಗಿ ನೀಡಿದ ಗಾಯತ್ರಿ, ”ಒಮ್ಮೆ ಹೋಟೆಲ್ ಒಂದಕ್ಕೆ ಹೋಗಿದ್ದೆವು, ತುಸು ದೊಡ್ಡ ಹೋಟೆಲ್, ಅಲ್ಲಿ ಸೌಥ್ ಇಂಡಿಯನ್ ಥಾಲಿ ಆರ್ಡರ್ ಮಾಡಿದರು ಅನಂತ್​ನಾಗ್ ಆದರೆ ವೇಟರ್ ಸೌಥ್ ಇಂಡಿಯನ್ ಥಾಲಿ ಇಲ್ಲ ಎಂದ, ಅಷ್ಟಕ್ಕೆ ಅನಂತ್​ನಾಗ್​ಗೆ ಸಿಟ್ಟು ಬಂತು, ಅಲ್ಲ ದಕ್ಷಿಣ ಭಾರತದಲ್ಲಿ ಹೋಟೆಲ್ ಇಟ್ಟುಕೊಂಡಿದ್ದೀರಿ, ಸೌಥ್ ಇಂಡಿಯನ್ ಥಾಲಿ ಇಲ್ವಾ ಎಂದು ಸಿಟ್ಟಿನಿಂದ ಕೂಗಾಡಿ ನನ್ನನ್ನು ಕರೆದುಕೊಂಡು ಬಂದುಬಿಟ್ಟರು” ಎಂದು ನೆನಪು ಮಾಡಿಕೊಂಡರು.

ಇದನ್ನೂ ಓದಿ:‘ನನ್ನ ಸಿನಿಮಾಗಳನ್ನೂ ನಾನು ನೋಡುವುದಿಲ್ಲ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ಅನಂತ್ ನಾಗ್

ಯಾವ ಯಾವ ವಿಷಯಕ್ಕೆ ಅನಂತ್​ನಾಗ್ ಅವರಿಗೆ ಸಿಟ್ಟು ಬರುತ್ತದೆ ಎಂಬ ರಮೇಶ್ ಅರವಿಂದ್ ಪ್ರಶ್ನೆಗೆ, ”ಬಹಳ ಸಣ್ಣ ವಿಷಯಗಳಿಗೆ ಸಿಟ್ಟು ಮಾಡಿಕೊಳ್ಳುತ್ತಾರೆ. ಅಡುಗೆ ಸರಿಯಾಗಿ ಆಗಿಲ್ಲವೆಂದು, ತಾವು ಹೇಳಿದಂತೆ ಕೆಲಸ ಆಗಿಲ್ಲವೆಂದು, ಪುಸ್ತಕಗಳನ್ನು ಸರಿಯಾಗಿ ಜೋಡಿಸಿಲ್ಲ, ಕೆಲಸದಲ್ಲಿ ಸಣ್ಣ-ಪುಟ್ಟ ತಪ್ಪುಗಳಾದಾಗ ಹೀಗೆ ಅನೇಕ ಕಾರಣಗಳಿಗೆ ಅನಂತ್​ಗೆ ಸಿಟ್ಟು ಬರುತ್ತದೆ” ಎಂದು ಪಟ್ಟಿ ಕೊಟ್ಟರು ಗಾಯತ್ರಿ. ಸಿಟ್ಟು ಬಂದಾಗ ಏನೇನು ಬೈಗುಳಗಳು ಅನಂತ್​ನಾಗ್ ಅವರ ಬಾಯಿಂದ ಬರುತ್ತದೆ ಎಂಬ ಪ್ರಶ್ನೆಗೆ ಮಾತ್ರ ಉತ್ತರಿಸದೇ ಅವರ ಬಳಿಯೇ ಕೇಳಿ ಎಂದು ಚೆಂಡನ್ನು ಪತಿ ಅನಂತ್​ನಾಗ್ ಅಂಗಳಕ್ಕೆ ಒಗೆದರು.

ಪತ್ನಿಯ ಆರೋಪಕ್ಕೆ ತಣ್ಣಗೆ ಪ್ರತಿಕ್ರಿಯಿಸಿದ ಅನಂತ್​ನಾಗ್, ಸಲುಗೆ ಎಲ್ಲಿ ಇರುತ್ತದೆಯೋ ಅಲ್ಲಿ ಸಿಟ್ಟು ಬರುವುದು ಸಹಜ, ಸಲುಗೆ ಇಲ್ಲದೇ ಹೋದರೆ ಸಿಟ್ಟು ಮಾಡಿಕೊಳ್ಳುವುದು ಹೇಗೆ? ಹೋಟೆಲ್​ನಲ್ಲಿ ಸಿಟ್ಟು ಮಾಡಿಕೊಂಡಿದ್ದು ಸಹ ಸಹಜ ಏಕೆಂದರೆ ಅಲ್ಲಿ ಹಣ ಕೊಟ್ಟಿರುತ್ತೇವೆ, ಅದಕ್ಕೆ ತಕ್ಕನಾದ ಸೇವೆಯನ್ನು ನಿರೀಕ್ಷಿಸುವುದು ಅದು ಸಿಗದೇ ಹೋದಾಗ ಸಿಟ್ಟು ಬರುವುದು ಸಹಜ. ಆದರೆ ಯಾರೋ ಅನ್ಯರ ಮೇಲೆ ಸುಮ್ಮನೆ ಸಿಟ್ಟು ಮಾಡಿಕೊಳ್ಳಲಾಗುತ್ತದೆಯೇ? ಈಗ ಸುಧೀಂದ್ರ ವೆಂಕಟೇಶ್ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ, ಇಲ್ಲಿ ನನಗೆ ಇದು ಸರಿ ಎನಿಸಲಿಲ್ಲ, ಅದು ಸರಿ ಎನಿಸಲಿಲ್ಲ ಎಂದು ಸಿಟ್ಟು ಮಾಡಿಕೊಳ್ಳಲಾಗುತ್ತದೆಯೇ?” ಎಂದು ಸಮಜಾಯಿಷಿ ಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ