ನಿರೂಪಕಿ, ನಟಿ ಅನುಶ್ರೀ (Anchor Anushree) ಅವರು ಹಲವಾರು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ. ಆ ಪೈಕಿ ಅಪ್ಪು ಎಂದರೆ ಅನುಶ್ರೀಗೆ ವಿಶೇಷ ಗೌರವ. ಇಂದು ಅಪ್ಪು ಇಲ್ಲ ಎಂಬ ನೋವು ಅವರನ್ನು ಬಹುವಾಗಿ ಕಾಡುತ್ತಿದೆ. ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಇಂದಿಗೆ (ಅ.29) ಒಂದು ವರ್ಷ ಆಗಿದೆ. ಈ ವೇಳೆ ಅನೇಕರು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ. ನಿರೂಪಕಿ ಅನುಶ್ರೀ ಕೂಡ ಕಂಠೀರವ ಸ್ಟುಡಿಯೋ ಆವರಣಕ್ಕೆ ಬಂದು ಪುನೀತ್ ಸಮಾಧಿಗೆ (Puneeth Rajkumar Samadhi) ಆರತಿ ಬೆಳಗಿದ್ದಾರೆ. ಮಗುವಿನಂತಹ ಮನಸ್ಸು ಹೊಂದಿದ್ದ ನಟ ಈಗ ನಮ್ಮೊಂದಿಗೆ ಇಲ್ಲವಲ್ಲ ಎಂಬ ನೋವಿನಲ್ಲಿ ಕಣ್ಣೀರು ಹಾಕುತ್ತಲೇ ಅವರು ಪೂಜೆ ಸಲ್ಲಿಸಿದಾರೆ.
ಪುನೀತ್ ರಾಜ್ಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಹೊಸ್ತಿಲಿನಲ್ಲೇ ‘ಗಂಧದ ಗುಡಿ’ ರಿಲೀಸ್ ಆಯಿತು. ಇದು ಅವರ ಕನಸಿನ ಪ್ರಾಜೆಕ್ಟ್. ಹಾಗಾಗಿ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಇದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅಪ್ಪು ಜೊತೆಯೇ ಇಡೀ ಕರ್ನಾಟಕದ ಕಾಡುಗಳನ್ನು ಸುತ್ತಾಡಿದ ಅನುಭವ ಪಡೆಯುತ್ತಿದ್ದಾರೆ. ಇತ್ತೀಚೆಗೆ ಆಯೋಜನೆಗೊಂಡಿದ್ದ ಪ್ರೀಮಿಯರ್ ಶೋನಲ್ಲಿ ಅನುಶ್ರೀ ಕೂಡ ಭಾಗಿ ಆಗಿದ್ದರು. ಬಳಿಕ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.
‘ಗಂಧದ ಗುಡಿ’ ಬಗ್ಗೆ ಅನುಶ್ರಿ ಹೇಳಿದ್ದೇನು?
‘ಈ ಸಿನಿಮಾದಲ್ಲಿ ಅವರು ಹೇಳಿರುವ ಒಂದೊಂದು ಮಾತು ಕೂಡ ಕಾಡುತ್ತದೆ. ಅವರಿಗೆ ಎಲ್ಲವೂ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆ ಮೂಡುತ್ತದೆ. ನಾವು ಈ ಭೂಮಿಗೆ ಬಂದಾಗ ಮಗುವಾಗಿ ಬರುತ್ತೇವೆ. ಹೋಗುವಾಗಲೂ ಮಗುವಿನ ಮನಸ್ಥಿತಿಯಲ್ಲೇ ಎಲ್ಲವನ್ನೂ ಅನುಭವಿಸಿ ಅಪ್ಪು ಹೋಗಿದ್ದಾರೆ. ಅಪ್ಪು ರೀತಿ ಬಾಳುವ ಅವಕಾಶ ಎಷ್ಟು ಜನಕ್ಕೆ ಸಿಗುತ್ತೆ? ಇದನ್ನು ನೋಡಲು ಖುಷಿ ಮತ್ತು ಸಂಕಟ ಎರಡೂ ಆಗುತ್ತದೆ. ಪರಮಾತ್ಮನು ಪ್ರಾಣಿ, ಪಕ್ಷಿ, ಮನುಷ್ಯ, ನಿಸರ್ಗ ಹೀಗೆ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಆತ ಸೃಷ್ಟಿ ಮಾಡಿದ ಎಲ್ಲವನ್ನೂ ಸ್ಪರ್ಶಿಸಿ ಹೋಗೋಕೆ ಅಪ್ಪು ಅವರು ಜನ್ಮ ತಾಳಿದ್ದರು ಅಂತ ನನಗೆ ‘ಗಂಧದ ಗುಡಿ’ ನೋಡಿದ ಬಳಿಕ ಅನಿಸಿದು’ ಎಂದು ಅನುಶ್ರೀ ಹೇಳಿದ್ದಾರೆ.
‘ಪುನೀತ್ ರಾಜ್ಕುಮಾರ್ ಅವರು ‘ಪವರ್ ಸ್ಟಾರ್’. ಆದರೆ ಕಾಡಿಗೆ ಹೋಗಿ ಅಲ್ಲಿನ ಜನರ ಜೊತೆ ಬೆರೆತಿದ್ದರು. ಅಲ್ಲಿನ ಮಕ್ಕಳಿಗೆ ಪುನೀತ್ ಯಾರೆಂಬುದೇ ಗೊತ್ತಿಲ್ಲ. ಅದಕ್ಕೆ ಅವರು ಬೇಸರ ಮಾಡಿಕೊಳ್ಳದೇ, ‘ಓಹ್.. ಇಲ್ಲಿ ಕರೆಂಟ್ ಇಲ್ಲ, ಇಲ್ಲೆಲ್ಲ ಪ್ಲಾಸ್ಟಿಕ್ ಹಾಕಬಾರದು’ ಎಂಬಂತಹ ವಿಷಯಗಳನ್ನು ತುಂಬ ಸರಳವಾಗಿ ಹೇಳಿದ್ದಾರೆ. ಎಲ್ಲಾದರೂ ಇರು ಎಂಥಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಅಂತ ಅವರು ಹಾಡಿದ್ದು ಮನಸ್ಸಿಗೆ ಬಹಳ ಹತ್ತಿರ ಆಯ್ತು’ ಎಂದು ಅನುಶ್ರೀ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:23 pm, Sat, 29 October 22