ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳಿರುವ ‘ಬ್ರಹ್ಮರಾಕ್ಷಸ’ ಟೀಸರ್; ಹೇಗಿದೆ ನೋಡಿ ಹೊಸಬರ ಪ್ರಯತ್ನ
ರೆಟ್ರೋ ಕಾಲದ ಕಥೆಯನ್ನು ‘ಬ್ರಹ್ಮರಾಕ್ಷಸ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಅಂಕುಶ್ ಏಕಲವ್ಯ ಮತ್ತು ಪಲ್ಲವಿ ಗೌಡ ಅವರು ಈ ಸಿನಿಮಾದಲ್ಲಿ ಪ್ರಮಖ ಪಾತ್ರಗಳನ್ನು ಮಾಡಿದ್ದಾರೆ. ಈ ಚಿತ್ರತಂಡದಿಂದ ಆ್ಯಕ್ಷನ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳಿರುವ ಟೀಸರ್ ಬಿಡುಗಡೆ ಮಾಡಲಾಗಿದೆ. ಹೊಸಬರ ಪ್ರಯತ್ನ ಗಮನ ಸೆಳೆಯುತ್ತಿದೆ.
ಕನ್ನಡ ಚಿತ್ರರಂಗದಲ್ಲಿ (Kannada Film Industry) ಈಗ ಹೊಸಬರು ಹೆಚ್ಚು ಸದ್ದು ಮಾಡುತ್ತಿದ್ದಾರೆ. ಹೊಸಬರು ಮಾಡಿದ ಸಿನಿಮಾಗಳಲ್ಲಿ ಹೊಸತನದ ಸ್ಪರ್ಶ ಇರುತ್ತದೆ. ಆ ರೀತಿಯ ಸಿನಿಮಾಗಳ ಸಾಲಿಗೆ ಈಗ ‘ಬ್ರಹ್ಮರಾಕ್ಷಸ’ ಸಿನಿಮಾ (Brahmarakshasa Movie) ಕೂಡ ಸೇರ್ಪಡೆ ಆಗುತ್ತಿದೆ. ಲೈಟ್‌ಮ್ಯಾನ್ ಆಗಿ ಚಿತ್ರರಂಗಕ್ಕೆ ಬಂದು, ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಿ ಅನುಭವ ಪಡೆದಿರುವ ಶಂಕರ್ ವಿ. ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾ ಕೌತುಕ ಮೂಡಿಸಿದೆ. ‘ಜ್ಯೋತಿ ಆರ್ಟ್ಸ್’ ಬ್ಯಾನರ್ ಮೂಲಕ ಕೆಎಂಪಿ ಶ್ರೀನಿವಾಸ್ ಅವರು ನಿರ್ಮಾಣ ಮಾಡಿರುವ ‘ಬ್ರಹ್ಮರಾಕ್ಷಸ’ ಸಿನಿಮಾದಲ್ಲಿ ಅಂಕುಶ್ ಏಕಲವ್ಯ (Ankush Ekalavya), ಪಲ್ಲವಿ ಗೌಡ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ವೈಜನಾಥ್ ಬಿರಾದಾರ್ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಸೆನ್ಸಾರ್ ಪರೀಕ್ಷೆಗೆ ಸಿದ್ಧವಾಗಿರುವ ಈ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ.
ನಿರ್ಮಾಪಕ ಶ್ರೀನಿವಾಸ್ ಅವರು ಈ ಮೊದಲು ‘ಕಲಿವೀರ’ ಸಿನಿಮಾ ಮಾಡಿದ್ದರು. ಅದು ತಪ್ಪಾದ ಸಮಯದಲ್ಲಿ ರಿಲೀಸ್ ಆಗಿದ್ದರಿಂದ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಆದರೆ ಈಗ ಅವರು ‘ಬ್ರಹ್ಮರಾಕ್ಷಸ’ ಮೂಲಕ ಗೆಲ್ಲುವ ಭರವಸೆಯಲ್ಲಿ ಇದ್ದಾರೆ. ‘ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಈ ಸಿನಿಮಾದಲ್ಲಿ ಇವೆ. ನಮ್ಮ ಸಿನಿಮಾದಲ್ಲಿ 5 ಸುಂದರ ಹಾಡುಗಳಿವೆ. ಕನ್ನಡದ ಸಿನಿಪ್ರಿಯರು ಈ ಸಿನಿಮಾವನ್ನು ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ. ಹೊಸಬರು ಗೆದ್ದರೆ ಇನ್ನೂ ಅನೇಕ ಸಿನಿಮಾಗಳು ಬರುತ್ತವೆ’ ಎಂದು ಅವರು ಹೇಳಿದ್ದಾರೆ. ಸ್ವಪ್ನ, ಅರವಿಂದ್ ರಾವ್, ಪುರುಷೋತ್ತಮ್, ರಥಾವರ ದೇವು, ಬಾಲ ರಾಜವಾಡಿ, ಭುವನ್‌ಗೌಡ, ಶಿವಾನಂದಪ್ಪ ಹಾವನೂರು ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.
‘ಬ್ರಹ್ಮರಾಕ್ಷಸ’ ಸಿನಿಮಾದಲ್ಲಿ ನಾಯಕನ ತಾಯಿಯಾಗಿ ಭವ್ಯ ನಟಿಸಿದ್ದಾರೆ. ‘ಚಿಕ್ಕ ಹೀರೋಗೆ ನಾನು ತಾಯಿಯ ಪಾತ್ರ ಮಾಡಿದ್ದೇನೆ. ನಿರ್ದೇಶಕ ಶಂಕರ್ ಅವರು ಎಲ್ಲ ವಿಭಾಗದಲ್ಲಿ ಪರಿಣತಿ ಪಡೆದುಕೊಂಡು ಬಂದಿದ್ದಾರೆ. ಏಕಲವ್ಯ ಕೂಡ ತುಂಬ ಪ್ರತಿಭಾವಂತ ಕಲಾವಿದ. ಸಂಗೀತ ನಿರ್ದೇಶನ, ಛಾಯಾಗ್ರಹಣ ಸೇರಿದಂತೆ ಈ ಚಿತ್ರದ ತಾಂತ್ರಿಕ ಅಂಶಗಳು ಚೆನ್ನಾಗಿವೆ’ ಎಂದು ಭವ್ಯ ಹೇಳಿದ್ದಾರೆ. ಈ ಸಿನಿಮಾದಲ್ಲಿ ಒಂದು ಡಿಫರೆಂಟ್ ಪಾತ್ರ ಮಾಡಿದ ಖುಷಿ ವೈಜನಾಥ್ ಬಿರಾದಾರ್ ಅವರಿಗೆ ಇದೆ.
ಇದನ್ನೂ ಓದಿ: ‘ಸಲಾರ್’ ಚಿತ್ರದ ಟಿಕೆಟ್ ಬೇಕಾ? ಈ ಸಿಂಪಲ್ ಕೆಲಸ ಮಾಡಿದರೆ ಸಿಗುತ್ತೆ ಮೊದಲ ದಿನದ ಫ್ರೀ ಟಿಕೆಟ್
ಥ್ರಿಲ್ಲರ್ ಮಂಜು ಅವರು ‘ಬ್ರಹ್ಮರಾಕ್ಷಸ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ‘ಇಷ್ಟು ಚೆನ್ನಾಗಿ ಸಿನಿಮಾ ಮೂಡಿಬರಲು ನಿರ್ಮಾಪಕರೇ ಕಾರಣ. ಯಾವುದೇ ಹಾಲಿವುಡ್ ಸಿನಿಮಾಗೂ ಈ ಚಿತ್ರ ಕಮ್ಮಿಯಿಲ್ಲ. ಏಕಲವ್ಯ ಪರ್ಫಾರ್ಮೆನ್ಸ್ ನೋಡಿದಾಗ ನನಗೆ ಜಾಕಿಚಾನ್ ನೆನಪಾದರು’ ಎಂದು ಥ್ರಿಲ್ಲರ್ ಮಂಜು ಹೊಗಳಿದ್ದಾರೆ. 80ರ ದಶಕದಲ್ಲಿ ನಡೆಯುವ ಕಥೆಯನ್ನು ‘ಬ್ರಹ್ಮರಾಕ್ಷಸ’ ಚಿತ್ರ ಹೊಂದಿರಲಿದೆ. ಇಡೀ ಸಿನಿಮಾ ರಾತ್ರಿಯಲ್ಲಿ ನಡೆಯುತ್ತದೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ರಿವೇಂಜ್ ಕಥೆಯ ಜೊತೆಗೆ ಒಂದು ಸಂದೇಶವನ್ನೂ ನೀಡಲಾಗಿದೆಯಂತೆ. ಅನಿರುದ್ಧ ಅವರು ಛಾಯಾಗ್ರಹಣ, ಎಂ.ಎಸ್. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.