Dharma Censor Board: ‘ಧಾರ್ಮಿಕ ಸೆನ್ಸಾರ್ ಮಂಡಳಿ’; ಸಿನಿಮಾಗಳಲ್ಲಿ ಹಿಂದೂ ದೇವರ ಅಪಮಾನ ತಡೆಯಲು ಹೀಗೊಂದು ಪ್ರಯತ್ನ
Avimukteshwaranand Saraswati | Censor Board: ಸಿನಿಮಾ ಮತ್ತು ವೆಬ್ ಸೀರಿಸ್ಗಳಲ್ಲಿ ಹಿಂದೂ ದೇವರಿಗೆ ಅವಮಾನ ಆಗುತ್ತಿದೆ ಎಂಬ ಕೂಗು ಆಗಾಗ ಕೇಳಿಬರುತ್ತಿದೆ. ಅದರ ಬೆನ್ನಲ್ಲೇ ಧಾರ್ಮಿಕ ಸೆನ್ಸಾರ್ ಮಂಡಳಿ ಹುಟ್ಟಿಕೊಂಡಿದೆ.
ಸಿನಿಮಾಗಳಲ್ಲಿನ ವಿಚಾರ ಇಟ್ಟುಕೊಂಡು ಕಿರಿಕ್ ಮಾಡುವ ಟ್ರೆಂಡ್ ಇತ್ತೀಚೆಗೆ ಜಾಸ್ತಿ ಆಗಿದೆ. ಸಣ್ಣದೊಂದು ಟ್ರೇಲರ್ ರಿಲೀಸ್ ಆದರೂ ಸಾಕು, ಒಂದು ವರ್ಗದ ಮಂದಿ ಟೀಕೆ ಮಾಡಲು ರೆಡಿಯಾಗಿರುತ್ತಾರೆ. ಧಾರ್ಮಿಕ ವಿಚಾರಗಳನ್ನೇ ಹೈಲೈಟ್ ಮಾಡಿಕೊಂಡು ವಿವಾದ ಎಬ್ಬಿಸಲಾಗುತ್ತದೆ. ‘ಪಠಾಣ್’ ಸಿನಿಮಾದಲ್ಲಿ (Pathaan Movie) ದೀಪಿಕಾ ಪಡುಕೋಣೆ ಧರಿಸಿದ್ದ ಬಿಕಿನಿ ಬಣ್ಣ ‘ಕೇಸರಿ’ ಎಂಬ ಕಾರಣಕ್ಕೆ ಕೆಲವು ಹಿಂದೂ ಪರ ಸಂಘಟನೆಗಳು ತಕರಾರು ತೆಗೆದಿದ್ದೇ ಈ ಮಾತಿಗೆ ಲೇಟೆಸ್ಟ್ ಉದಾಹರಣೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಧಾರ್ಮಿಕ ಸೆನ್ಸಾರ್ ಮಂಡಳಿ’ (Dharma Censor Board) ಸ್ಥಾಪಿಸಲಾಗಿದೆ! ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಈಗಾಗಲೇ ಸರ್ಕಾರದ ವತಿಯಿಂದ ನೇಮಿಸಲಾಗಿರುವ ಸೆನ್ಸಾರ್ ಮಂಡಳಿ ಇರುವಾಗಲೇ ಈ ರೀತಿ ಹೊಸ ಸೆನ್ಸಾರ್ ಮಂಡಳಿಯನ್ನು ಹುಟ್ಟುಹಾಕಲಾಗಿದೆ. ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ (Avimukteshwaranand Saraswati) ಅವರಿಂದ ಈ ಪ್ರಯತ್ನ ನಡೆದಿದೆ.
ಇತ್ತೀಚೆಗೆ ‘ಪಠಾಣ್’ ಸಿನಿಮಾವನ್ನು ಅನೇಕ ಹಿಂದೂಪರ ಸಂಘಟನೆಗಳು ವಿರೋಧಿಸಿದವು. ಅದಕ್ಕೂ ಮುನ್ನ ‘ಕಾಳಿ’ ಸಾಕ್ಷ್ಯಚಿತ್ರದ ಪೋಸ್ಟರ್ ಕೂಡ ವಿವಾದ ಎಬ್ಬಿಸಿತ್ತು. ಈ ಎಲ್ಲ ಘಟನೆಗಳ ಪರಿಣಾಮವಾಗಿ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ‘ಧಾರ್ಮಿಕ ಸೆನ್ಸಾರ್ ಬೋರ್ಡ್’ ಮಾಡಿರುವುದಾಗಿ ತಿಳಿಸಿದ್ದಾರೆ. ಗುರುವಾರ (ಜ.19) ಈ ಸೆನ್ಸಾರ್ ಮಂಡಳಿಯ ನಿಯಮಾವಳಿಗಳನ್ನು ಅವರು ಬಹಿರಂಗಪಡಿಸಿದ್ದಾರೆ.
ಸಿನಿಮಾ, ವೆಬ್ ಸಿರೀಸ್ ಮುಂತಾದ ಮನರಂಜನಾ ಕಂಟೆಂಟ್ಗಳಲ್ಲಿ ಹಿಂದೂ ದೇವರನ್ನು ಅಪಮಾನಿಸುವಂತಹ ದೃಶ್ಯಗಳು ಇದ್ದರೆ ಅದನ್ನು ತಡೆಯುವ ನಿಟ್ಟಿನಲ್ಲಿ ‘ಧಾರ್ಮಿಕ ಸೆನ್ಸಾರ್ ಮಂಡಳಿ’ಯನ್ನು ತಾವು ಆರಂಭಿಸಿರುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ. ಸಿನಿಮಾ ಬಿಡುಗಡೆ ಆದ ಬಳಿಕ ಅದನ್ನು ನೋಡಿ ತಮ್ಮ ಸೆನ್ಸಾರ್ ಮಂಡಳಿಯಿಂದ ಒಂದು ಪ್ರಮಾಣ ಪತ್ರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: OTT Censorship: ಒಟಿಟಿ ಸೆನ್ಸಾರ್ಶಿಪ್ ಬಗ್ಗೆ ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್
‘ಧಾರ್ಮಿಕ ಸೆನ್ಸಾರ್ ಮಂಡಳಿ’ ನಿಯಮಗಳನ್ನು ಎಲ್ಲ ಸಿನಿಮಾ ನಿರ್ಮಾಪಕರಿಗೆ ಕಳಿಸಿಕೊಡಲಾಗುವುದು. ಸನಾತನ ಧರ್ಮವನ್ನು ಟೀಕಿಸಲು, ಅಪಮಾನ ಮಾಡಲು, ಅಗೌರವದಿಂದ ಕಾಣಲು ಬಿಡುವುದಿಲ್ಲ. ಈ ನಿಯಮಗಳನ್ನು ಪಾಲಿಸದಿದ್ದರೆ ಕಾನೂನಿನ ಮೂಲಕ ಉತ್ತರ ನೀಡಲಾಗುವುದು. ಅದಕ್ಕಾಗಿ ಪ್ರತ್ಯೇಕ ಘಟಕ ಸ್ಥಾಪಿಸಲಾಗಿದೆ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ. ಈಗಾಗಲೇ ಇರುವ ಸೆನ್ಸಾರ್ ಮಂಡಳಿಗೆ ಸಹಾಯವಾಗುವ ರೀತಿಯಲ್ಲಿ ಧಾರ್ಮಿಕ ಸೆನ್ಸಾರ್ ಮಂಡಳಿ ಕೆಲಸ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಆದಿಪುರುಷ್’ ಚಿತ್ರಕ್ಕೆ ಮುಳುವಾದ ವಿವಾದ; ಉತ್ತರಿಸಲು ಸೆನ್ಸಾರ್ ಮಂಡಳಿಗೆ ಕೋರ್ಟ್ ಆದೇಶ
ಸಿನಿಮಾ, ವೆಬ್ ಸೀರಿಸ್ ಮಾತ್ರವಲ್ಲದೇ ಶಾಲೆ-ಕಾಲೇಜುಗಳಲ್ಲಿ ನಡೆಯುವ ನಾಟಕಗಳನ್ನು ಕೂಡ ಈ ಮಂಡಳಿಯು ಸೆನ್ಸಾರ್ ಮಾಡಲಿದೆ. ಸಿನಿಮಾ ಶೀರ್ಷಿಕೆಗಳ ಮೇಲೂ ಈ ಮಂಡಳಿ ಕಣ್ಣಿಡಲಿದೆ. ಸರ್ಕಾರದ ಸೆನ್ಸಾರ್ ಮಂಡಳಿಯಲ್ಲಿ ಓರ್ವ ಧಾರ್ಮಿಕ ವ್ಯಕ್ತಿ ಇರಬೇಕು ಎಂಬ ಬೇಡಿಕೆ ಈಡೇರಿಲ್ಲದ ಕಾರಣದಿಂದ ಈಗ ಧಾರ್ಮಿಕ ಸೆನ್ಸಾರ್ ಮಂಡಳಿ ಶುರು ಮಾಡಿರುವುದಾಗಿ ಅವಿಮುಕ್ತೇಶ್ವರಾನಂದ ಸರಸ್ವತಿ ತಿಳಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:30 pm, Fri, 20 January 23