ಯುರೋಪ್​ನಲ್ಲಿ ಚಿತ್ರೀಕರಣಗೊಂಡ ‘ಹನಿ ಹನಿ’ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ ಅಶ್ವಿನಿ

ಜರ್ಮನಿಯಲ್ಲಿರುವ ಅನಿವಾಸಿ ಕನ್ನಡಿಗರು ‘ಹನಿ ಹನಿ’ ಮ್ಯೂಸಿಕ್​ ವಿಡಿಯೋ ನಿರ್ಮಾಣ ಮಾಡಿದ್ದಾರೆ. ಅಣ್ಣಾವ್ರ ಫ್ಯಾಮಿಲಿಗೆ ಆಪ್ತರಾದ ರಕ್ಕಿ ಸುರೇಶ್ ಅವರು ಈ ಹಾಡಿನಲ್ಲಿ ನಟಿಸಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಸಾಂಗ್​ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಯುರೋಪ್​ನಲ್ಲಿ ಹಾಡಿನ ಶೂಟಿಂಗ್​ ಮಾಡಲಾಗಿದೆ.

ಯುರೋಪ್​ನಲ್ಲಿ ಚಿತ್ರೀಕರಣಗೊಂಡ ‘ಹನಿ ಹನಿ’ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ ಅಶ್ವಿನಿ
‘ಹನಿ ಹನಿ’ ಮ್ಯೂಸಿಕ್​ ವಿಡಿಯೋ ಬಿಡುಗಡೆ ಸಮಾರಂಭ
Follow us
|

Updated on:Aug 17, 2024 | 10:14 PM

ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಅನೇಕ ಹೊಸ ತಂಡಗಳ ಬೆನ್ನು ತಟ್ಟುತ್ತಾರೆ. ಈಗ ಅವರು ಹೊಸದೊಂದು ಆಲ್ಬಂ ಸಾಂಗ್​ ಬಿಡುಗಡೆ ಮಾಡಿದ್ದಾರೆ. ‘ಪಾಯಿಂಟ್ ಬ್ಲಾಂಕ್ ಕ್ರಿಯೇಷನ್ಸ್ ಜರ್ಮನಿ’ ಪ್ರಸ್ತುತಪಡಿಸಿದ ‘ಹನಿ ಹನಿ’ ಮ್ಯೂಸಿಕ್​ ವಿಡಿಯೋ ಇತ್ತೀಚೆಗೆ ಬಿಡುಗಡೆ ಆಯಿತು. ರಾಘವ ರೆಡ್ಡಿ ಅವರು ಇದಕ್ಕೆ ನಿರ್ದೇಶನ ಮಾಡಿದ್ದಾರೆ. ವಿಶಾಲ್ ನೈದೃವ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ರಕ್ಕಿ ಸುರೇಶ್ ಅಭಿನಯಿಸಿದ್ದಾರೆ. ‘ಈ ಹಾಡಿನಲ್ಲಿ ನಟಿಸಿರುವ ರಕ್ಕಿ ಸುರೇಶ್ ನಮ್ಮ ಫ್ಯಾಮಿಲಿಗೆ ಆಪ್ತರು. ಈ ಸಾಂಗ್​ನಲ್ಲಿ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ. ಹಾಡು ಚೆನ್ನಾಗಿ ಮೂಡಿ ಬಂದಿದೆ. ಯಶಸ್ವಿಯಾಗಲಿ’ ಎಂದು ಅಶ್ವಿನಿ ಪುನೀತ್ ರಾಜ್​ಕುಮಾರ್ ವಿಶ್​ ಮಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ಈ ಸಾಂಗ್​ ರಿಲೀಸ್​ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಮಂಡಳಿಯ ಗೌರವ ಕಾರ್ಯದರ್ಶಿ ಭಾ.ಮ. ಗಿರೀಶ್ ಮತ್ತು ಹಿರಿಯ ನಿರ್ಮಾಪಕರಾದ ಎಸ್.ಎ. ಚಿನ್ನೇಗೌಡ ಕೂಡ ಉಪಸ್ಥಿತರಿದ್ದರು. ರಕ್ಕಿ ಸುರೇಶ್ ಜೊತೆ ಅನಾಮಿಕ ಸ್ಟಾರ್ಕ್ ದತ್ತ‌ ಮತ್ತು ಅಮೃತಾ ಮಂಡಲ್ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ಹಾಡಿನ ಬಗ್ಗೆ ಮತ್ತು ತಮ್ಮ ಪರಿಚಯದ ಬಗ್ಗೆ ರಕ್ಕಿ ಸುರೇಶ್​ ಮಾತನಾಡಿದರು. ‘ನಾನು ಹುಟ್ಟಿದ್ದು ಇಲ್ಲಿ. ಆದರೆ ಬೆಳೆದದ್ದು ಜರ್ಮನಿಯಲ್ಲಿ. ಮೈಸೂರು ಬಳಿಯ ಸಾಲಿಗ್ರಾಮ ನಮ್ಮ ಮೂಲ ಊರು. ಡಾ. ರಾಜ್​ಕುಮಾರ್ ನಟನೆಯ ಹೊಸಬೆಳಕು ಸಿನಿಮಾವನ್ನು ನಿರ್ಮಾಣ ಮಾಡಿದ್ದ ರಾಜಶೇಖರ್ ಅವರು ನನ್ನ ಅಜ್ಜ’ ಎಂದು ಮಾಹಿತಿ ಹಂಚಿಕೊಂಡರು. ಜರ್ಮನಿಯಲ್ಲಿ ಎಂಜಿನಿಯರಿಂಗ್ ಮತ್ತು ಮಾಸ್ಟರ್ಸ್ ಪದವಿ ಪಡೆದ ರಕ್ಕಿ ಸುರೇಶ್ ಅವರು ಐಟಿ ಉದ್ಯೋಗ ಮಾಡುತ್ತಿದ್ದಾರೆ. ಅವರಿಗೆ ನಟನೆ ಎಂಬುದು ಹವ್ಯಾಸ ಆದ್ದರಿಂದ ‘ಹನಿ ಹನಿ’ ಮ್ಯೂಸಿಕ್​ ವಿಡಿಯೋದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

ನಿರ್ದೇಶಕ ರಾಘವ ರೆಡ್ಡಿ ಮಾತನಾಡಿ, ‘ನಾನು 5 ವರ್ಷಗಳಿಂದ ಜರ್ಮನಿಯಲ್ಲಿದ್ದೇನೆ. ಅನಿವಾಸಿ ಕನ್ನಡಿಗರು ಸೇರಿಕೊಂಡು ಈ ಗೀತೆಯನ್ನು ನಿರ್ಮಿಸಿದ್ದೇವೆ. ನಾನೇ ನಿರ್ದೇಶನ ಮಾಡಿದ್ದೇನೆ. 15 ಲಕ್ಷ ರೂಪಾಯಿ ಬಜೆಟ್​ನಲ್ಲಿ ಈ ಸಾಂಗ್​ ಯೂರೋಪ್​ನಲ್ಲಿ ಚಿತ್ರೀಕರಣಗೊಂಡಿದೆ. ವಿಶಾಲ್ ನೈದೃವ್ ಸಂಗೀತ ನೀಡಿ, ಹಾಡಿದ್ದಾರೆ. ಆಲ್ಬರ್ಟ್ ಜೊಸ್ ಮತ್ತು ತೇಜಸ್ ಅಹೋಬಲ ಅವರು ಛಾಯಾಗ್ರಹಣ ಮಾಡಿದ್ದಾರೆ. ಪಾಯಿಂಟ್ ಬ್ಲಾಂಕ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್​ನಲ್ಲಿ ಹಾಡು ವೀಕ್ಷಿಸಬಹುದು’ ಎಂದು ಮಾಹಿತಿ ನೀಡಿದರು. ನಿರ್ದೇಶಕ ವಿಶಾಲ್ ನೈದೃವ್ ಅವರು ಮಾತನಾಡಿ, ‘ನಾನು 23 ವರ್ಷಗಳಿಂದ ಕೀ ಬೋರ್ಡ್ ಪ್ಲೇಯರ್ ಆಗಿದ್ದೇನೆ. ಖ್ಯಾತ ಸಂಗೀತ ನಿರ್ದೇಶಕರ ಜೊತೆಗೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:13 pm, Sat, 17 August 24