‘ಒಪ್ಪಿಗೆ ಇಲ್ಲದೆ ವರಾಹ ರೂಪಂ.. ಹಾಡನ್ನು ಬಳಸುವಂತಿಲ್ಲ’; ಕೇರಳ ಕೋರ್ಟ್ ಆದೇಶ
‘ನವರಸಂ..’ ಹಾಡಿನ ಹಕ್ಕು ಹೊಂದಿರುವ ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ ತಂಡದವರು ಕೇಸ್ ಹಾಕಿದ್ದರು. ‘ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆ’ ಎಂದು ‘ತೈಕ್ಕುಡಂ ಬ್ರಿಡ್ಜ್’ ಹೇಳಿತ್ತು.
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿವೆ. ಅದರಲ್ಲೂ ‘ವರಾಹ ರೂಪಂ..’ ಹಾಡು ಚಿತ್ರದ ತೂಕವನ್ನು ಹೆಚ್ಚಿಸಿತ್ತು. ಈ ಹಾಡಿನ ಮೇಲೆ ಕೃತಿಚೌರ್ಯದ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದಲ್ಲಿ ಕೇರಳ ಕೋರ್ಟ್ ಆದೇಶ ಒಂದನ್ನು ಹೊರಡಿಸಿದೆ. ಈ ಹಾಡನ್ನು ಒಪ್ಪಿಗೆ ಇಲ್ಲದೆ ಎಲ್ಲಿಯೂ ಬಳಕೆ ಮಾಡುವಂತಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ. ಇದರಿಂದ ತಂಡಕ್ಕೆ ಹಿನ್ನಡೆ ಆಗಿದೆ.
ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಅವರು ‘ಕಾಂತಾರ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಮತ್ತು ‘ನವರಸಂ..’ ಹಾಡಿನ ನಡುವೆ ಇರುವ ಸಾಮ್ಯತೆ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಆದರೆ, ಇದನ್ನು ಅಜನೀಶ್ ಅವರು ತಳ್ಳಿ ಹಾಕಿದ್ದರು. ‘ನಾವು ನವರಸಂ ಹಾಡಿನಿಂದ ಸ್ಫೂರ್ತಿ ಪಡೆದಿದ್ದೇವೆ ಅಷ್ಟೇ’ ಎಂದು ಅಜನೀಶ್ ಲೋಕನಾಥ್ ಸ್ಪಷ್ಟನೆ ನೀಡಿದ್ದರು.
ಆದರೆ, ‘ನವರಸಂ..’ ಹಾಡಿನ ಹಕ್ಕು ಹೊಂದಿರುವ ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ ತಂಡದವರು ಕೇಸ್ ಹಾಕಿದ್ದರು. ‘ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆ’ ಎಂದು ‘ತೈಕ್ಕುಡಂ ಬ್ರಿಡ್ಜ್’ ಹೇಳಿತ್ತು. ಅಲ್ಲದೆ, ಈ ಸಂಬಂಧ ಕೋರ್ಟ್ನಲ್ಲಿ ‘ವರಾಹ ರೂಪಂ..’ ಹಾಡಿನ ಮೇಲೆ ನಿರ್ಬಂಧ ಹೇರುವಂತೆ ಮನವಿ ಸಲ್ಲಿಕೆ ಮಾಡಿತ್ತು.
ಇದನ್ನೂ ಓದಿ: ಪರಭಾಷೆಯಲ್ಲಿ 100 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಹಿಂದಿಯಲ್ಲಿ ನಿಂತಿಲ್ಲ ಅಬ್ಬರ
ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋಯಿಕ್ಕೋಡ್ನ ಕೋರ್ಟ್ ‘ವರಾಹ ರೂಪಂ..’ ಹಾಡಿನ ಮೇಲೆ ನಿರ್ಬಂಧ ಹೇರಿದೆ. ‘ನಿರ್ಮಾಪಕರು, ನಿರ್ದೇಶಕರು, ಸಂಗೀತ ಸಂಯೋಜಕರು, ಯೂಟ್ಯೂಬ್ ಸೇರಿ ಇತರ ಪ್ಲಾಟ್ಫಾರ್ಮ್ಗಳು ‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿದೆ. ಇದರಿಂದ ತಂಡಕ್ಕೆ ಹಿನ್ನಡೆ ಆಗಿದೆ.
‘ತೈಕ್ಕುಡಂ ಬ್ರಿಡ್ಜ್’ ಈ ಮೊದಲು ಹೇಳಿದ್ದೇನು?
‘ನಾವು ನಮ್ಮ ಕೇಳುಗರಿಗೆ ತಿಳಿಸುವುದೇನೆಂದರೆ, ಯಾವುದೇ ರೀತಿಯಲ್ಲೂ ‘ತೈಕ್ಕುಡಂ ಬ್ರಿಡ್ಜ್’ ತಂಡವು ‘ಕಾಂತಾರ’ ಸಿನಿಮಾ ಜೊತೆ ಸಹಯೋಗ ಹೊಂದಿಲ್ಲ. ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಹಾಡಿನ ಹಕ್ಕುಗಳನ್ನು ಕುರಿತಂತೆ ಕಾಂತಾರ ತಂಡದವರು ನಮಗೆ ಯಾವುದೇ ಕ್ರಿಡಿಟ್ ನೀಡಿಲ್ಲ ಹಾಗೂ ಈ ಹಾಡನ್ನು ತಮ್ಮ ಸ್ವಂತ ಸೃಷ್ಟಿ ಎಂಬಂತೆ ಪ್ರಚಾರ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ನಮಗೆ ಬೆಂಬಲ ನೀಡಬೇಕು ಎಂದು ನಮ್ಮ ಕೇಳುಗರಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ’ ಎಂದು ‘ತೈಕ್ಕುಡಂ ಬ್ರಿಡ್ಜ್’ ತಂಡ ಈ ಮೊದಲು ಪೋಸ್ಟ್ ಮಾಡಿತ್ತು.
Published On - 9:37 pm, Fri, 28 October 22