
ನಟ ದರ್ಶನ್ ಮೇಲೆ ರಚಿತಾ ರಾಮ್ (Rachita Ram) ಅವರಿಗೆ ಅಪಾರ ಗೌರವ ಇದೆ. ಚಿತ್ರರಂಗದಲ್ಲಿ ರಚಿತಾ ರಾಮ್ ಅವರಿಗೆ ಮೊದಲು ಅವಕಾಶ ನೀಡಿದ್ದೇ ದರ್ಶನ್. ರಚಿತಾ ನಟಿಸಿದ ಮೊದಲ ಸಿನಿಮಾ ‘ಬುಲ್ಬುಲ್’. ಆ ಸಿನಿಮಾ 2013ರಲ್ಲಿ ತೆರೆಕಂಡಿತು. ಮೊದಲ ಸಿನಿಮಾದಲ್ಲೇ ದರ್ಶನ್ (Darshan) ಜೊತೆ ನಾಯಕಿಯಾಗಿ ನಟಿಸುವ ಅವಕಾಶ ರಚಿತಾ ರಮ್ ಅವರಿಗೆ ಸಿಕ್ಕಿತು. ಆ ಅವಕಾಶ ನೀಡಿದ್ದಕ್ಕೆ ತಾವು ಕೊನೆವರೆಗೂ ದರ್ಶನ್ ಅವರಿಗೆ ಚಿರಋಣಿ ಆಗಿರುವುದಾಗಿ ರಚಿತಾ ರಾಮ್ ಹೇಳಿದ್ದಾರೆ. ‘ಜೀ ಕನ್ನಡ’ ವಾಹಿನಿಯ ‘ಭರ್ಜರಿ ಬ್ಯಾಚುಲರ್ಸ್’ (Bharjari Bachelors) ಶೋನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
‘ದರ್ಶನ್ ಸರ್ ಒಂದು ಮಾತು ಹೇಳುತ್ತಿದ್ದರು. ಅವರ ವೃತ್ತಿ ಜೀವನದಲ್ಲಿ ಹೀರೋಯಿನ್ ಹೆಸರೇ ಶೀರ್ಷಿಕೆ ಆದಂತಹ ಸಿನಿಮಾವನ್ನು ಮಾಡಿಲ್ಲ. ಎಲ್ಲ ಸಿನಿಮಾಗೂ ಹೀರೋ ಕೇಂದ್ರಿತ ಟೈಟಲ್ ಇರುತ್ತಿತ್ತು. ಮೊದಲ ಬಾರಿಗೆ ಬುಲ್ಬುಲ್ ಅಂತ ಹೀರೋಯಿನ್ ಸೆಂಟ್ರಿಕ್ ಟೈಟಲ್ ಇದೆ. ಹಾಗಾಗಿ ನೀನು ಎಷ್ಟೊಂದು ಲಕ್ಕಿ ಅಂತ ನನಗೆ ಹೇಳುತ್ತಿದ್ದರು’ ಎಂದಿದ್ದಾರೆ ರಚಿತಾ ರಾಮ್.
‘ಒಂದಷ್ಟು ವರ್ಷಗಳ ತನಕ ನನ್ನನ್ನು ಬುಲ್ಬುಲ್ ಅಂತ ಕರೆಯುತ್ತಿದ್ದರು ಅಂತ ನೀವು ಹೇಳಿದ್ರಿ. ಇಲ್ಲ.. ಈಗಲೂ ಕೂಡ ಜನರು ನನ್ನನ್ನು ಬುಲ್ಬುಲ್ ಅಂತಾನೇ ಕರೆಯುವುದು. ಉಸಿರು ಇರುವವರೆಗೂ ನನಗೆ ಬುಲ್ಬುಲ್ ಅಂತಾನೇ ಕರೆದರೆ ಖುಷಿ. ನನ್ನ ತಂಡಕ್ಕೆ, ದರ್ಶನ್ ಸರ್ಗೆ, ದರ್ಶನ್ ಅವರ ಅಭಿಮಾನಿಗಳಿಗೆ ನಾನು ಯಾವಾಗಲೂ ಚಿರಋಣಿ ಆಗಿರುತ್ತೇನೆ’ ಎಂದು ರಚಿತಾ ರಾಮ್ ಅವರು ಹೇಳಿದ್ದಾರೆ.
‘ನಾನು ಪುಣ್ಯವಂತೆ. ನನ್ನ ಗಾಡ್ಫಾದರ್ಗೆ ನಾನು ಧನ್ಯವಾದ ಹೇಳುತ್ತಾನೆ’ ಎಂದು ರಚಿತಾ ರಾಮ್ ಅವರು ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆಯಿಂದಲೇ ದರ್ಶನ್ ಅವರಿಗೆ ನಮಸ್ಕಾರ ಮಾಡಿದ್ದಾರೆ. ರಚಿತಾ ರಾಮ್ ಅವರ ಮಾತು ಕೇಳಿ ದರ್ಶನ್ ಅಭಿಮಾನಿಗಳಿಗೆ ಖುಷಿ ಆಗಿದೆ. ಅವಕಾಶ ಕೊಟ್ಟವರನ್ನು ಎಂದಿಗೂ ಮರೆಯದ ರಚಿತಾ ಗುಣವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ‘ಬುಲ್ಬುಲ್’ ಬಳಿಕ ‘ಅಂಬರೀಶ’, ‘ಕ್ರಾಂತಿ’, ‘ಜಗ್ಗುದಾದ’ ಸಿನಿಮಾಗಳಲ್ಲಿ ದರ್ಶನ್ ಜೊತೆ ರಚಿತಾ ರಾಮ್ ತೆರೆ ಹಂಚಿಕೊಂಡರು.
ಇದನ್ನೂ ಓದಿ: ಅಕ್ಕನ ಮಗನನ್ನೇ ‘ಡೆವಿಲ್’ ಚಿತ್ರದಿಂದ ಹೊರಗಿಟ್ಟ ದರ್ಶನ್; ಕಾರಣ ನೀಡಿದ ಡಿ ಬಾಸ್
ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾಗ ರಚಿತಾ ರಾಮ್ ಅವರು ಹೋಗಿ ಮಾತನಾಡಿಸಿಕೊಂಡು ಬಂದಿದ್ದರು. ಆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದಾಗಲೂ ಕೂಡ ಅವರು ದರ್ಶನ್ ಕೊಟ್ಟ ಅವಕಾಶವನ್ನು ಸ್ಮರಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.