ಪೊಲೀಸ್ ಪ್ರೋಟೋಕಾಲ್ ಸರ್ವಿಸ್ ಸಹಾಯದಿಂದಲೇ ಗೋಲ್ಡ್ ಸ್ಮಗ್ಲಿಂಗ್: ಡಿಆರ್ಐ ಆರೋಪ
ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ರನ್ಯಾ ರಾವ್ ಅವರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ತನಿಖೆಯಲ್ಲಿ ಹಲವು ವಿಷಯಗಳು ಬಯಲಾಗುತ್ತಿವೆ. ಈ ನಡುವೆ ಜಾಮೀನು ಪಡೆಯಲು ರನ್ಯಾ ರಾವ್ ಅವರು ಪ್ರಯತ್ನಿಸುತ್ತಿದ್ದಾರೆ. ಬೇಲ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಡಿಆರ್ಐ ಪರ ವಕೀಲರು ರನ್ಯಾ ಬಂಧನದ ಪ್ರಕ್ರಿಯೆ ಬಗ್ಗೆ ಕೋರ್ಟ್ಗೆ ವಿವರ ನೀಡಿದ್ದಾರೆ.

ಬಹುಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ದುಬೈನಿಂದ ಅಕ್ರಮವಾಗಿ ಭಾರತಕ್ಕೆ ತರುವಾಗ ನಟಿ ರನ್ಯಾ ರಾವ್ (Ranya Rao) ಅವರು ಸಿಕ್ಕಿಬಿದ್ದರು. ಈ ಕೃತ್ಯದಲ್ಲಿ ಅವರಿಗೆ ಅನೇಕರು ಸಹಾಯ ಮಾಡಿರುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ, ಇತರರ ಶಾಮೀಲು ಇಲ್ಲದೇ ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲ ಆಯಾಮದಿಂದ ಡಿಆರ್ಐ (DRI) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ವೇಳೆ ಡಿಆರ್ಐ ಅಧಿಕಾರಿಗಳ ಪರ ವಕೀಲರು ಒಂದಷ್ಟು ಮಹತ್ವದ ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ.
ಡಿಆರ್ಐ ಅಧಿಕಾರಿಗಳ ಪರವಾಗಿ ಮಧು ಎನ್. ರಾವ್ ಅವರು ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ವಾದ ಮಾಡಿದ್ದಾರೆ. ‘ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೆ ಸಹಾಯ ಮಾಡಲು ಹೇಳಿದ್ದರು. ರಾಜ್ಯದ ಪೊಲೀಸ್ ಪ್ರೋಟೋಕಾಲ್ ಸರ್ವಿಸ್ ಸಹಾಯದಿಂದಲೇ ಸ್ಮಗ್ಲಿಂಗ್ ನಡೆದಿದೆ ಎಂಬುದು ನಮ್ಮ ಆರೋಪ. ಇಲ್ಲವಾದರೆ ರನ್ಯಾ ರಾವ್ ಗ್ರೀನ್ ಚಾನಲ್‌ವರೆಗೂ ಬರುವುದು ಅಸಾಧ್ಯವಾಗಿತ್ತು’ ಎಂದು ವಾದ ಮಾಡಲಾಗಿದೆ.
‘ಮತ್ತೊಬ್ಬ ವ್ಯಕ್ತಿಗೆ ಸಮನ್ಸ್ ಜಾರಿ ಮಾಡಿ ಹೇಳಿಕೆ ಪಡೆಯಲಾಗಿದೆ. ಗ್ರೀನ್ ಚಾನಲ್ ದಾಟಿದ ಬಳಿಕ ಆಕೆಯ ಶೋಧನೆ ನಡೆದ ಬಗ್ಗೆ ಹೇಳಿಕೆಯಿದೆ. ಗ್ರೀನ್ ಚಾನಲ್ ಆದ ಮೇಲೆಯೇ ಮೆಟಲ್ ಡಿಟೆಕ್ಟರ್ ಮೂಲಕ ಹೊರಬರುತ್ತಾರೆ. ಹೀಗಾಗಿ ಡಿಎಫ್‌ಎಂಡಿ ಯಂತ್ರದಲ್ಲಿ ಚಿನ್ನ ಪತ್ತೆಯಾಗಿಲ್ಲ ಎಂಬುದು ನಿಜವಲ್ಲ. ಮಾರ್ಚ್ 4ರಂದು ಸಂಜೆ 4 ಗಂಟೆಗೆ ರನ್ಯಾಳನ್ನು ಬಂಧಿಸಲಾಯಿತು. ಬಂಧನದ ವೇಳೆ ಅರೆಸ್ಟ್ ಮೆಮೋ, ಕಾರಣಗಳನ್ನೂ ನೀಡಲಾಯಿತು. ಯಾಕೆ ಬಂಧಿಸಲಾಗಿದೆ ಎಂಬುದಕ್ಕೆ ಕಾರಣಗಳನ್ನೂ ನೀಡಲಾಗಿದೆ’ ಎಂದು ಡಿಆರ್ಐ ಅಧಿಕಾರಿಗಳ ಪರ ವಕೀಲರು ವಾದ ಮಂಡಿಸಿದ್ದಾರೆ.
ರನ್ಯಾ ಬಂಧನದ ಪ್ರಕ್ರಿಯೆ ಹೇಗೆ ನಡೆದಿತ್ತು ಎಂಬುದನ್ನು ಡಿಆರ್ಐ ಪರ ವಕೀಲರು ನ್ಯಾಯಾಲಯದಲ್ಲಿ ವಿವರಿಸಿದ್ದಾರೆ. ‘ದುಬೈನಿಂದ ವಿಮಾನ ಬಂದು ಏರ್‌ಪೋರ್ಟ್‌ನಲ್ಲಿ ನಿಂತಿತು. ಏರೋಬ್ರಿಡ್ಜ್ ದಾಟಿದ ಬಳಿಕ ಇಮ್ಮಿಗ್ರೇಷನ್ ಡ್ಯೂಟಿ ಫ್ರೀ ದಾಟಿ ಕಸ್ಟಮ್ಸ್‌ಗೆ ಬರಬೇಕು. ರಾಜ್ಯದ ಪ್ರೋಟೋಕಾಲ್ ಆಫೀಸರ್ ನೆರವು ಪಡೆದಿದ್ದರು. ಎಲ್ಲವನ್ನೂ ದಾಟಿ ಕಸ್ಟಮ್ಸ್ ನಂತರ ಗ್ರೀನ್ ಏರಿಯಾ ದಾಟಿದ ಬಳಿಕ ಶೋಧನೆ ನಡೆಯಿತು. ರನ್ಯಾ ರಾವ್ ಶೋಧನೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಗ್ರೀನ್ ಚಾನಲ್ ದಾಟಿದ ಬಳಿಕ ಆಕೆಯನ್ನು ವಶಕ್ಕೆ ಪಡೆಯಲಾಯಿತು. ಗ್ರೀನ್ ಚಾನಲ್ ದಾಟುವ ಮುನ್ನ ನಾವು ವಶಕ್ಕೆ ಪಡೆದಿಲ್ಲ. ಗ್ರೀನ್ ಚಾನಲ್ ದಾಟಿದ್ದಾರೆಂದರೆ ಚಿನ್ನ ಘೋಷಿಸುವ ಉದ್ದೇಶವಿರಲಿಲ್ಲ ಎಂದೇ ಅರ್ಥ. ಸ್ಟೇಟ್ ಪೊಲೀಸ್ ಪ್ರೋಟೋಕಾಲ್ ಅಧಿಕಾರಿ ಹಾಜರಿದ್ದರು. ಘೋಷಿಸಬೇಕಾದ ವಸ್ತು ನಿಮ್ಮ ಬಳಿ ಇದೆಯೇ ಎಂದು ಪ್ರಶ್ನಿಸಲಾಗಿತ್ತು. ರನ್ಯಾ ಇಲ್ಲ ಎಂದು ಉತ್ತರಿಸಿದ್ದರು. ಬ್ಯಾಗ್ ಶೋಧಿಸಿದಾಗ ಏನೂ ಸಿಗಲಿಲ್ಲ. ಆ ಬಳಿಕ ಆಕೆಯ ವೈಯಕ್ತಿಕ ಶೋಧನೆ ನಡೆಸಲಾಯಿತು. ಸೆಕ್ಷನ್ 102ರಡಿಯಲ್ಲಿ ಶೋಧನೆಗೆ ಒಳಪಡಿಸಲಾಯಿತು. ಇದಕ್ಕೆ ಆಕೆ ಬರವಣಿಗೆಯ ಮೂಲಕ ಒಪ್ಪಿಗೆ ನೀಡಿದ್ದಾರೆ’ ಎಂದು ವಕೀಲರು ಹೇಳಿದ್ದಾರೆ.
ಇದನ್ನೂ ಓದಿ: ‘ರನ್ಯಾ ಮನಸ್ಥಿತಿ ನೋಡಿದರೆ ಜೈಲಿನಲ್ಲಿ ಇರುವುದು ಸೂಕ್ತ’: ಡಿಆರ್ಐ ಪರ ವಕೀಲರ ವಾದ
‘ನಿಮ್ಮ ಹಾಗೂ ನಿಮ್ಮ ಬ್ಯಾಗ್ ತಪಾಸಣೆ ನಡೆಸಬೇಕೆಂದು ತಿಳಿಸಲಾಯಿತು. ಸೆಕ್ಷನ್ 102ರಡಿಯ ನಿಯಮ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಬಳಿಕವೇ ವೈಯಕ್ತಿಕ ಶೋಧನೆ ನಡೆಸಲಾಯಿತು. ದೇಹದಲ್ಲಿ ಏನಾದರೂ ನಿರ್ಬಂಧಿತ ವಸ್ತುಗಳಿವೆಯೇ ಎಂದು ಕೇಳಲಾಯಿತು. ಇದಕ್ಕೆ ಆಕೆ ಚಿನ್ನದ ಬಾರ್ಗಳಿರುವುದನ್ನು ಒಪ್ಪಿಕೊಂಡರು. ಮೌಲ್ಯಮಾಪನ ನಡೆಸಿದ ವ್ಯಕ್ತಿ ಬಳಿ ಏರ್‌ಪೋರ್ಟ್ ಎಂಟ್ರಿ ಪಾಸ್ ಇತ್ತು. ಸೀಜ್ ಮಾಡಿದ ಬಾರ್‌ಗಳು ಮಹಜರ್‌ನಲ್ಲಿರುವುದು ಒಂದೇ ಚಿನ್ನ. ಚಿನ್ನದ ಬಾರ್‌ಗಳ ನೈಜತೆ ಚೆಕ್ ಮಾಡಲು ಕರೆಯಲಾಗಿತ್ತು. ದೇಹದಲ್ಲಿ ಬಚ್ಚಿಟ್ಟು ಆ ಚಿನ್ನ ತಂದಿರುವುದರಿಂದ ರನ್ಯಾ ವಶಕ್ಕೆ ಪಡೆಯಲಾಯಿತು. ಮಾರ್ಚ್ 4ರಂದು ಮಧ್ಯರಾತ್ರಿ 1.35ರವರೆಗೂ ಈ ಪ್ರಕ್ರಿಯೆ ನಡೆದಿದೆ. ವಿಮಾನ ಬೆಳಗಿನ ಜಾವ 4 ಗಂಟೆಗೆ ಬಂದರೂ ತಪಾಸಣೆ ನಡೆಸಬೇಕು. ಇದರಲ್ಲಿ ಯಾವುದೇ ವಿನಾಯಿತಿ ಕೇಳುವಂತಿಲ್ಲ’ ಎಂದು ಡಿಆರ್ಐ ಪರ ವಕೀಲರು ವಾದ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.