CCL 2023: ರೋಚಕ ಪಂದ್ಯದಲ್ಲಿ ತೆಲುಗು ವಾರಿಯರ್ಸ್ಗೆ ಮಣಿದ ಕರ್ನಾಟಕ ಬುಲ್ಡೋಜರ್ಸ್
CCL 2023: ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ರ ಸೆಮಿಫೈನಲ್ ಪಂದ್ಯ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ನಡುವೆ ವಿಶಾಖಪಟ್ಟಣಂ ನಲ್ಲಿ ನಡೆಯಿತು.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 (CCL 2023) ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಗಳು ಇಂದು ಆಂಧ್ರದ ವಿಶಾಖಪಟ್ಟಣಂ ನಲ್ಲಿ ನಡೆದಿದ್ದು, ಕರ್ನಾಟಕ ಸಿನಿಮಾ ಸೆಲೆಬ್ರಿಟಿಗಳ ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ತಂಡವು ತೆಲುಗು ಸಿನಿಮಾ ರಂಗದ ತೆಲುಗು ವಾರಿಯರ್ಸ್ (Telugu Warriors) ಅನ್ನು ಎದುರಿಸಿತು. ರೋಚಕ ಹಣಾ-ಹಣಿಯಿದ್ದ ಈ ಎರಡನೇ ಸೆಮಿಫೈನಲ್ ಪಂದ್ಯದ ಕೊನೆಯವರೆಗೆ ಚಂಚಲೆಯಾಗಿದ್ದ ವಿಜಯಲಕ್ಷ್ಮಿ ಕೊನೆಯ ಎರಡು ಎಸೆತ ಬಾಕಿ ಇದ್ದಾಗ ತೆಲುಗು ವಾರಿಯರ್ಸ್ ಪರವಾದಳು.
ಮೊದಲ ಇನ್ನಿಂಗ್ಸ್ ಆಡಿದ ಕರ್ನಾಟಕ ತಂಡ ನಾಯಕ ಪ್ರದೀಪ್ ಅವರ ಅರ್ಧಶಕತದ ನೆರವಿನಿಂದ 10 ಓವರ್ಗಳಲ್ಲಿ 99 ರನ್ ಗಳಿಸಿತು. ಡಾರ್ಲಿಂಗ್ ಕೃಷ್ಣ ಸಹ ಉತ್ತಮವಾಗಿ ಬ್ಯಾಟ್ ಬೀಸಿ 30 ರನ್ ಗಳಿಸಿದರು. ನಂತರ ಬ್ಯಾಟಿಂಗ್ಗೆ ಇಳಿದ ತೆಲುಗು ವಾರಿಯರ್ಸ್ ಸಹ ಚೆನ್ನಾಗಿಯೇ ಬ್ಯಾಟಿಂಗ್ ಮಾಡಿ 10 ಓವರ್ಗಳಿಗೆ 95 ರನ್ ಗಳಿಸಿ ಕೇವಲ ನಾಲ್ಕು ರನ್ಗಳಿಂದಷ್ಟೆ ಹಿಂದುಳಿಯಿತು. ತೆಲುಗು ವಾರಿಯರ್ಸ್ ಪರವಾಗಿ ಅಶ್ವಿನ್ ಬಾಬು ಉತ್ತಮವಾಗಿ ಆಡಿ 36 ರನ್ ಗಳಿಸಿದರು.
ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ನಿಧಾನದ ಆರಂಭ ಪಡೆಯಿತು. ಓಪನಿಂಗ್ ಬ್ಯಾಟ್ಸ್ಮ್ಯಾನ್ ಆಗಿ ಸ್ಕ್ರೀಜ್ಗೆ ಬಂದ ಸುದೀಪ್ ಬಹುಬೇಗನೆ ರನ್ ಔಟ್ ಆಗಿ ಮರಳಿದರು. ಆ ಬಳಿಕ ರಾಜೀವ್ ಹಾಗೂ ಜೆಕೆ ಉತ್ತಮವಾಗಿ ಆಡಿ ಉತ್ತಮ ಮೊತ್ತ ಕಲೆಹಾಕುವತ್ತ ದಾಪುಗಾಲು ಹಾಕಿದರು ಆದರೆ ರಾಜೀವ್ ಹಾಗೂ ಜೆಕೆ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ಗೆ ಮರಳಿದರು. ಎಂಟು ಓವರ್ಗೆ ಕರ್ನಾಟಕ ತಂಡದ ಮೊತ್ತ 70 ಆಗಿತ್ತು ನಾಲ್ಕು ವಿಕೆಟ್ ಉರುಳಿದ್ದವು. ಅದೇ ಸಮಯದಲ್ಲಿ ಸ್ಕ್ರೀಜ್ಗೆ ಬಂದ ಬಚ್ಚನ್ ಹಾಗೂ ಡಾರ್ಲಿಂಗ್ ಕೃಷ್ಣ ಅದ್ಭುತವಾಗಿ ಆಡಿ ಕೇವಲ ಎರಡು ಓವರ್ನಲ್ಲಿ 28 ರನ್ ಭಾರಿಸಿ ತಂಡದ ಮೊತ್ತವನ್ನು 98 ರನ್ಗಳಿಗೆ ಕೊಂಡೊಯ್ದರು. ಮೊದಲ ಇನ್ನಿಂಗ್ಸ್ನ ನಾಲ್ಕು ರನ್ ಸೇರಿಸಿ 102 ರನ್ಗಳ ಬೃಹತ್ ಮೊತ್ತವನ್ನು ತೆಲುಗು ವಾರಿಯರ್ಸ್ ಮುಂದಿಟ್ಟಿತು ಕರ್ನಾಟಕ ಬುಲ್ಡೋಜರ್ಸ್ ತಂಡ.
ಚೇಸಿಂಗ್ ಆರಂಭಿಸಿದ ತೆಲುಗು ವಾರಿಯರ್ಸ್ ತಂಡ ಒಂದು ವಿಕೆಟ್ ಕಳೆದುಕೊಂಡರೂ ಉತ್ತಮ ರನ್ ಸರಾಸರಿ ಕಾಯ್ದುಕೊಂಡು ಕೊನೆಯ ಓವರ್ ವರೆಗೆ ಪಂದ್ಯವನ್ನು ಎಳೆದು ತಂದಿತು. ಎರಡು ಓವರ್ಗೆ 28 ರನ್ಗಳ ಅವಶ್ಯಕತೆ ಇದ್ದಾಗ ಸ್ಕ್ರೀಜ್ನಲ್ಲಿದ್ದ ಸಂಗೀತ ನಿರ್ದೇಶಕ ತಮನ್ ಹಾಗೂ ನಟ ಪ್ರಿನ್ಸ್ ಅವರುಗಳು ಭರ್ಜರಿ ಬ್ಯಾಟಿಂಗ್ ಮಾಡಿ ಕೊನೆಯ ಒಂದು ಓವರ್ಗೆ ಕೇವಲ ಎಂಟು ರನ್ ಗಳಷ್ಟೆ ಬೇಕಾಗುವಂತೆ ಮಾಡಿದರು. ಕೊನೆಯ ಓವರ್ ಬೌಲಿಂಗ್ ಮಾಡಿದ ಸುನಿಲ್ ರಾವ್ ರ ಮೊದಲ ಬಾಲಿನಲ್ಲೇ ಬೌಂಡರಿ ಭಾರಿಸಿದ ತಮನ್ ಗೆಲುವನ್ನು ಬಹಳ ಸರಳ ಮಾಡಿಬಿಟ್ಟರು. ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ತೆಲುಗು ವಾರಿಯರ್ಸ್ ಪಂದ್ಯವನ್ನು ಗೆದ್ದು ಫೈನಲ್ ಪ್ರವೇಶಿಸಿತು. ಫೈನಲ್ನಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಭೋಜ್ಪುರಿ ತಂಡ ಎದುರಿಸಲಿದೆ.
ಕರ್ನಾಟಕ ಬುಲ್ಡೋಜರ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿತಾದರೂ ಮೈದಾನದಲ್ಲಿ ಮಾಡಿದ ಸಣ್ಣ-ಸಣ್ಣ ತಪ್ಪುಗಳಿಂದಾಗಿ ಪಂದ್ಯ ಸೋಲಬೇಕಾಯಿತು.