ಚಿತ್ರೀಕರಣಕ್ಕೆ ಹೊಸ ನಿಯಮಾವಳಿ ರೂಪಿಸುವ ಸಂಬಂಧ ಇಂದು ಸಂಜೆ ಸಿಎಂ ಬೊಮ್ಮಾಯಿ ಸಭೆ
ಚಿತ್ರೀಕರಣಕ್ಕೆ ಹೊಸ ನಿಯಮಾವಳಿ ರೂಪಿಸುವ ಸಂಬಂಧ ಇಂದು ಸಂಜೆ ಚಲನಚಿತ್ರ ವಾಣಿಜ್ಯ ಮಂಡಳಿ, ಹಿರಿಯ ಕಲಾವಿದರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ಕೊರೊನಾದಿಂದ ನಲುಗಿರುವ ಚಲನಚಿತ್ರ ಉದ್ಯಮದ ಕುರಿತು ವಾಣಿಜ್ಯ ಮಂಡಳಿಯ ನಿಯೋಗ ಮಾತುಕತೆ ನಡೆಸಲಿದೆ.
‘ಲವ್ ಯೂ ರಚ್ಚು’ ಚಿತ್ರದ ಚಿತ್ರೀಕರಣದ ವೇಳೆ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಜತೆ ಇಂದು ಸಿಎಂ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಜೆ 4.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಚಿತ್ರೀಕರಣದ ವೇಳೆ ನಿಯಮಗಳನ್ನು ಪಾಲಿಸದ ಆರೋಪಕ್ಕೆ ಸಂಬಂಧಪಟ್ಟಂತೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿದುಬಂದಿದೆ. ಈ ಕುರಿತು ಹೊಸ ನಿಯಮ ಜಾರಿಗೆ ತರುವ ಸಂಬಂಧ ಹಿರಿಯ ಕಲಾವಿದರ ಅಭಿಪ್ರಾಯವನ್ನು ಸಿಎಂ ಪಡೆಯಲಿದ್ದಾರೆ. ನಂತರ ಚಿತ್ರೀಕರಣಕ್ಕೆ ಹೊಸ ನಿಯಮ ಜಾರಿ ಮಾಡುವ ಸಾಧ್ಯತೆ ಇದೆ.
ಇಂದು ಸಂಜೆ ಸಿಎಂ ಭೇಟಿ ಮಾಡಲಿರುವ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ:
ಸಿನಿಮಾ ಇಂಡಸ್ಟ್ರಿಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಇಂದು ಸಂಜೆ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಲಿದೆ. ಕೊರೊನಾ ಲಾಕ್ ಡೌನ್ ಹೊಡೆತಕ್ಕೆ ತತ್ತರಿಸಿರುವ ಚಲನಚಿತ್ರ ಉದ್ಯಮದ ಕುರಿತಂತೆ ಚರ್ಚೆ ಮಾಡಿ ಚಿತ್ರಮಂದಿರಗಳ ಕರೆಂಟ್ ಬಿಲ್ ಮನ್ನಾ ಮಾಡುವುದು, ಚಿತ್ರಮಂದಿರಗಳಲ್ಲಿ 100% ಆಕ್ಯೂಪೆನ್ಸಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ. ಇಂದು ಸಂಜೆ ಚಲನ ಚಿತ್ರ ವಾಣಿಜ್ಯ ಮಂಡಳಿಯ ಎಲ್ಲ ವಲಯಗಳ ಮುಖಂಡರು ಸಿಎಂ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.
ಸಿಎಂ ಮನೆಗೆ ಹಿರಿಯ ನಟ ಶ್ರೀನಾಥ್ ಭೇಟಿ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶ್ರೀನಾಥ್ ಆಗಮಿಸಿದ್ದಾರೆ. ಆರ್ ಟಿ ನಗರದ ಸಿಎಂ ಸ್ವಗೃಹಕ್ಕೆ ತೆರಳಿರುವ ಶ್ರೀನಾಥ್ ಭೇಟಿ, ಇಂದು ಸಂಜೆ ನಡೆಯಲಿರುವ ಚಲನ ಚಿತ್ರ ಮಂಡಳಿ ಮತ್ತು ಹಿರಿಯ ಕಲಾವಿದರ ಸಭೆಯ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
ಇದನ್ನೂ ಓದಿ:
ಫೈಟರ್ ಸಾವು: ರಚಿತಾ ರಾಮ್, ಅಜಯ್ ರಾವ್ ಬಂಧನಕ್ಕೆ ಎಐಸಿಸಿ ಹ್ಯುಮನ್ ರೈಟ್ಸ್ ಸಂಘಟನೆ ಒತ್ತಾಯ
(CM Basavaraj Bommai will Meet The Karnataka Film Chamber Of Commerce Officials and senior actors to make new law for shooting)