‘ಐ ಆ್ಯಮ್ ಗಾಡ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರು ‘ಐ ಆ್ಯಮ್ ಗಾಡ್’ ಸಿನಿಮಾದ ಶೀರ್ಷಿಕೆ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಈ ಸಿನಿಮಾಗೆ ರವಿ ಗೌಡ ನಾಯಕನಾಗಿದ್ದಾರೆ. ಜೊತೆಗೆ, ನಿರ್ಮಾಣ ಮತ್ತು ನಿರ್ದೇಶನ ಕೂಡ ಅವರೇ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದ ಪೋಸ್ಟರ್ ಬಿಡುಗಡೆ ಮಾಡಿಸಿ ಚಿತ್ರತಂಡ ಖುಷಿಪಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯದ ಚಟುವಟಿಕೆಗಳಲ್ಲಿ ಬ್ಯುಸಿ. ಅದರ ನಡುವೆಯೂ ಅವರು ಬಿಡುವು ಮಾಡಿಕೊಂಡು ಸಿನಿಮಾಗೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡುತ್ತಾರೆ. ಈಗ ಅವರು ತಮ್ಮ ಸ್ನೇಹಿತ, ಮುಡಾ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರ ಪುತ್ರನ ಹೊಸ ಸಿನಿಮಾಗೆ ಶುಭ ಹಾರೈಸಿದ್ದಾರೆ. ‘ಧ್ವಜ’ ಚಿತ್ರದ ಮೂಲಕ ಹೀರೋ ಆಗಿದ್ದ ರವಿ ಗೌಡ ಈಗ ‘ಐ ಆ್ಯಮ್ ಗಾಡ್’ ಸಿನಿಮಾದಿಂದ ನಿರ್ದೇಶಕನಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
‘ಐ ಆ್ಯಮ್ ಗಾಡ್’ ಸಿನಿಮಾದಲ್ಲಿ ರವಿ ಗೌಡ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕೂಡ ಅವರೇ ನಿಭಾಯಿಸುತ್ತಿದ್ದಾರೆ. ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಸಿದ್ದರಾಮಯ್ಯ ಮಾತನಾಡಿದರು.
‘ಬಸವೇಗೌಡರ ಮಗ ಸಿನಿಮಾದಲ್ಲಿ ನಟಿಸುತ್ತಾನೆ, ನಿರ್ಮಾಪಕ/ನಿರ್ದೇಶಕ ಆಗ್ತಾನೆ ಅಂತ ಅಂದುಕೊಂಡಿರಲಿಲ್ಲ. ಸಿನಿಮಾ ಕ್ಷೇತ್ರಗಳಲ್ಲಿ ಒಳ್ಳೆಯ ನಟನಾಗಿ, ನಿರ್ದೇಶಕನಾಗಿ ಹೊರಹೊಮ್ಮಲಿ. ದುಡ್ಡು ಇದ್ದರೆ ಯಾರಾದರೂ ನಿರ್ಮಾಪಕ ಆಗಬಹುದು. ಆದರೆ ನಟನೆ ಮತ್ತು ನಿರ್ದೇಶನ ರಕ್ತದಲ್ಲಿ ಬಂದಾಗ ಮಾತ್ರ ಸಾಧ್ಯ ಆಗುತ್ತದೆ. ಬಸವೇಗೌಡ ಮಗ ಚಿತ್ರರಂಗದಲ್ಲಿ ತೊಡಗಿಕೊಂಡಿರುವುದು ಖುಷಿ. ಅವನು ಈ ರಂಗದಲ್ಲಿ ಪ್ರಬುದ್ಧವಾಗಿ ಬೆಳೆಯಬೇಕು ಎಂದು ಆಶಿಸುತ್ತೇನೆ. ನಾನು ಸಹ ಸಿನಿಮಾ ನೋಡುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾದ ಓವರ್ಸೀಸ್ ವಿತರಣೆ ಹಕ್ಕು ‘ಪಿಹೆಚ್ಎಫ್ ಫಿಲ್ಮ್’ ತಕ್ಕೆಗೆ
ಅಂದಹಾಗೆ, ‘ಐ ಆ್ಯಮ್ ಗಾಡ್’ ಸಿನಿಮಾದಲ್ಲಿ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆ ಇರಲಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಮುಕ್ತಾಯ ಆಗಿದೆ. ಬೆಂಗಳೂರು ಮತ್ತು ಕೇರಳದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ‘ಸಿಬಿಜಿ ಪ್ರೊಡಕ್ಷನ್ಸ್’ ಮೂಲಕ ‘ಐ ಆ್ಯಮ್ ಗಾಡ್’ ಸಿನಿಮಾಗೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡುತ್ತಿದ್ದಾರೆ. ಜಿತಿನ್ ದಾಸ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸುರೇಶ್ ಅರುಮುಗಂ ಅವರ ಸಂಕಲನ ಈ ಸಿನಿಮಾಗೆ ಇದೆ. ರವಿ ವರ್ಮಾ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.