ಹಿರಿಯ ನಟಿ ಲೀಲಾವತಿಯವರ ಭೇಟಿಯಾದ ಸಿಎಂ ಸಿದ್ದರಾಮಯ್ಯ

Leelavathi: ಕನ್ನಡದ ಹಿರಿಯ ನಟಿ ಲೀಲಾವತಿ ಅವರ ನೆಲಮಂಗಲದ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ, ಹಿರಿಯ ನಟಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

ಹಿರಿಯ ನಟಿ ಲೀಲಾವತಿಯವರ ಭೇಟಿಯಾದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us
ಮಂಜುನಾಥ ಸಿ.
|

Updated on: Dec 03, 2023 | 5:59 PM

ಹಿರಿಯ ನಟಿ ಲೀಲಾವತಿ (Leelavathi) ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪುತ್ರ ವಿನೋದ್ ರಾಜ್ ಆರೈಕೆಯಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿಯರ ಆರೋಗ್ಯ ಕ್ಷೀಣಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ಚಿತ್ರರಂಗದ ಹಲವು ಗಣ್ಯ ನಟ-ನಟಿಯರು ಲೀಲಾವತಿ ಅವರ ನಿವಾಸಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಇಂದು (ನವೆಂಬರ್ 03) ಸಿಎಂ ಸಿದ್ದರಾಮಯ್ಯ ಅವರು ಸಹ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ನೆಲಮಂಗಲದ ಬಳಿಯ ಸೋಲದೇವನಹಳ್ಳಿಯ ವಿನೋದ್ ರಾಜ್ ನಿವಾಸಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರು ಹಾಸಿಗೆ ಹಿಡಿದು ಮಲಗಿದ್ದ ಲೀಲಾವತಿ ಅವರನ್ನು ಭೇಟಿಯಾದರು. ‘ನಾನು ಸಿಎಂ ಸಿದ್ದರಾಮಯ್ಯ ಬಂದಿದ್ದೀನಿ’ ಎಂದು ಲೀಲಾವತಿ ಅವರೊಟ್ಟಿಗೆ ಮಾತನಾಡುವ ಪ್ರಯತ್ನವನ್ನೂ ಸಹ ಸಿದ್ದರಾಮಯ್ಯ ಮಾಡಿದರು. ಆದರೆ ಬಹುತೇಕ ನಿತ್ರಾಣ ಸ್ಥಿತಿಯಲ್ಲಿರುವ ಲೀಲಾವತಿ ಅವರು ಮಾತನಾಡಲಾಗಲಿಲ್ಲ. ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರು, ಲೀಲಾವತಿ ಅವರ ಆರೋಗ್ಯದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ:Leelavathi: ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

‘‘ಲೀಲಾವತಿ ಅವರಿಗೆ ಎಷ್ಟು ವಯಸ್ಸಾಯಿತು’’ ಇನ್ನಿತರೆ ಮಾಹಿತಿಗಳನ್ನು ವಿನೋದ್ ರಾಜ್ ಅವರನ್ನು ಕೇಳಿ ಮಾಹಿತಿ ಪಡೆದುಕೊಂಡರು ಸಿಎಂ ಸಿದ್ದರಾಮಯ್ಯ. ‘‘ಈಗ ಅಮ್ಮನಿಗೆ 87 ವರ್ಷ ವಯಸ್ಸಾಯಿತು. ನೀನು ಎಲ್ಲಿಯೇ ಇದ್ದರೂ ವ್ಯವಸಾಯ ಮಾಡುತ್ತಾ ಇರಬೇಕು ಎಂದು ಅಮ್ಮ ಹೇಳಿದ್ದಾರೆ. ಹಾಗಾಗಿ ನಾನು ವ್ಯವಸಾಯ ಮಾಡಿಕೊಂಡು ಇಲ್ಲಿಯೇ ಇದ್ದೀನಿ’’ ಎಂದು ಸಿದ್ದರಾಮಯ್ಯ ಅವರಿಗೆ ವಿನೋದ್ ರಾಜ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಅಲ್ಲದೆ ತಾವೂ ಸಹ ನಿರಂತರ ಜ್ಯೋತಿ ಸೇರಿದಂತೆ ಇನ್ನೂ ಕೆಲವು ಸರ್ಕಾರದ ಯೋಜನೆಗಳ ಫಲಾನಿಭವಿಗಳಾಗಿದ್ದು ಅದನ್ನೆಲ್ಲ ಬಳಸಿಕೊಂಡು ಕೃಷಿ ಮಾಡುತ್ತಿರುವುದಾಗಿಯೂ ಹೇಳಿದರು. ಲೀಲಾವತಿ ಅವರ ಆರೋಗ್ಯ ವಿಚಾರಿಸಿದ ಬಳಿಕ, ವಿನೋದ್ ರಾಜ್ ಅವರು ತಮ್ಮ ಮನೆಯನ್ನು, ಅಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಅಮ್ಮನವರ ಚಿತ್ರಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ತೋರಿಸಿದರು.

ಕೆಲವು ದಿನಗಳ ಹಿಂದಷ್ಟೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋಲದೇವನಹಳ್ಳಿಗೆ ಆಗಮಿಸಿ ಲೀಲಾವತಿ ಅವರ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿರುವ ಪಶು ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ ಜೊತೆಗೆ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿ ತೆರಳಿದ್ದಾರೆ.

ಇತ್ತೀಚೆಗೆ ಹಲವು ತಾರಾ ನಟರು ಆಗಮಿಸಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿ ತೆರಳಿದ್ದಾರೆ. ಶಿವರಾಜ್ ಕುಮಾರ್, ನಟ ದರ್ಶನ್, ಅಭಿಷೇಕ್ ಅಂಬರೀಶ್, ಶಶಿಕುಮಾರ್, ಅರ್ಜುನ್ ಸರ್ಜಾ ಇನ್ನೂ ಹಲವು ನಟರು ಬಂದು ಆರೋಗ್ಯ ವಿಚಾರಿಸಿ ತೆರಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ