Banaras Movie: ಬಹುನಿರೀಕ್ಷಿತ ‘ಬನಾರಸ್’ ಸಿನಿಮಾದ ವಿತರಣಾ ಹಕ್ಕು ‘ಡಿ ಬೀಟ್ಸ್’ ತೆಕ್ಕೆಗೆ
D Beats | Banaras: ‘ಬನಾರಸ್’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಚಿತ್ರವನ್ನು ನವೆಂಬರ್ 4ರಂದು ರಾಜ್ಯದಲ್ಲಿ ವ್ಯವಸ್ಥಿತವಾಗಿ ರಿಲೀಸ್ ಮಾಡುವ ಕೆಲಸವನ್ನು ‘ಡಿ ಬೀಟ್ಸ್’ ವಹಿಸಿಕೊಂಡಿದೆ.

ಕನ್ನಡದ ಮತ್ತೊಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಬನಾರಸ್’ (Banaras Movie) ಇದೀಗ ಸಮಸ್ತ ಪ್ರೇಕ್ಷಕರ ಕುತೂಹಲದ ಕೇಂದ್ರ ಬಿಂದುವಾಗಿದೆ. ಟೀಸರ್, ಟ್ರೇಲರ್, ಹಾಡುಗಳಿಂದ ಗಮನ ಸೆಳೆಯುತ್ತಿರುವ ಚಿತ್ರ ಬಿಡುಗಡೆಗೆ ಸಕಲ ರೀತಿಯಿಂದ ಅಣಿಯಾಗಿದೆ. ನವೆಂಬರ್ 4ರಂದು ವಿಶ್ವಾದ್ಯಂತ ತೆರೆ ಕಾಣ್ತಿರುವ ‘ಬನಾರಸ್’ ಅಂಗಳದಿಂದ ದಿನಕ್ಕೊಂದು ಹೊಸ ಹೊಸ ಸಮಾಚಾರ ಹೊರಬೀಳುತ್ತಿದೆ. ಕೇರಳದ ಖ್ಯಾತ ವಿತರಣಾ ಸಂಸ್ಥೆಯಾಗಿರುವ ಮಲಕುಪ್ಪಡಮ್ ಫಿಲಂಸ್ ಈ ಚಿತ್ರವನ್ನು ವಿಶಾಲ ಕೇರಳಕ್ಕೆ ವಿತರಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದೆ. ಅದೇ ರೀತಿ ಸಮಸ್ತ ಕರ್ನಾಟಕಕ್ಕೆ ಬನಾರಸ್ ಸಿನಿಮಾವನ್ನು ವಿತರಿಸುವ ಹಕ್ಕನ್ನು ‘ಡಿ ಬೀಟ್ಸ್’ (D Beats) ಸಂಸ್ಥೆ ತನ್ನದಾಗಿಸಿಕೊಂಡಿದೆ.
ಖ್ಯಾತ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಬಿ. ಸುರೇಶ್ ಒಡೆತನದ ‘ಡಿ ಬೀಟ್ಸ್’ ಸಂಸ್ಥೆ ಗುಣಮಟ್ಟದ ಹಾಗೂ ಹಲವು ಹಿಟ್ ಚಿತ್ರಗಳನ್ನು ವಿತರಣೆ ಮಾಡಿ ಯಶಸ್ಸು ಗಳಿಸಿದೆ. ಇಂತಹ ಸಂಸ್ಥೆ ವಿತರಣೆ ಹಕ್ಕು ಖರೀದಿಸಿದೆ ಎಂದರೆ ಸಹಜವಾಗಿ ಕುತೂಹಲ ಇಮ್ಮಡಿಗೊಳ್ಳುತ್ತದೆ. ಈಗ ‘ಬನಾರಸ್’ ಸಿನಿಮಾವನ್ನು ಕರ್ನಾಟಕದ ಸಿನಿಮಂದಿಗೆ ಹಂಚುವ ಜವಾಬ್ದಾರಿಯನ್ನು ‘ಡಿ ಬೀಟ್ಸ್’ ಅಚ್ಚುಕಟ್ಟಾಗಿ ನಿಭಾಯಿಸುವ ತಯಾರಿ ಮಾಡಿಕೊಂಡಿದೆ. ಆರಂಭದಿಂದಲ್ಲಿಯೇ ಸಿನಿಮಾಗೆ ಸಿಕ್ಕುತ್ತಿರುವ ಬೇಡಿಕೆ ಹಾಗೂ ರೆಸ್ಪಾನ್ಸ್ ಕಂಡು ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಖುಷಿಯಲ್ಲಿದ್ದಾರೆ. ನಾಯಕ ಝೈದ್ ಖಾನ್ ತಮ್ಮ ಚೊಚ್ಚಲ ಸಿನಿಮಾದಲ್ಲಿಯೇ ಹಲವು ದಾಖಲೆ ಬರೆಯುವ ಸೂಚನೆ ನೀಡಿದ್ದಾರೆ.
ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿರುವುದರಿಂದ ಚಿತ್ರತಂಡ ಕೂಡ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿದೆ. ಎಡಬಿಡದೆ ಪ್ರಮೋಷನ್ ಮಾಡ್ತಿರುವ ‘ಬನಾರಸ್’ ಸಿನಿಮಾವನ್ನು ನವೆಂಬರ್ 4ರಂದು ರಾಜ್ಯದಲ್ಲಿ ವ್ಯವಸ್ಥಿತವಾಗಿ ಹಬ್ಬಿಸುವ ಕೆಲಸವನ್ನು ‘ಡಿ ಬೀಟ್ಸ್’ ಮಾಡಲಿದೆ. ಝೈದ್ ಖಾನ್ಗೆ ಜೋಡಿಯಾಗಿ ಸೋನಲ್ ಮೊಂಥೆರೋ ನಟಿಸಿದ್ದು, ಉಳಿದಂತೆ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನಾ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಅಜನೀಶ್ ಬಿ. ಲೋಕನಾಥ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:23 pm, Sun, 9 October 22








