Hoysala Trailer: ಹೊಯ್ಸಳ ಟ್ರೈಲರ್ ಬಿಡುಗಡೆ, ವಿಲನ್ ಆವೇಷದ ಹೀರೋ ಕತೆ
ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ ಹೊಯ್ಸಳ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಖಡಕ್ ಪೊಲೀಸ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಂಡಿದ್ದಾರೆ.
ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ ಹೊಯ್ಸಳ ಟ್ರೈಲರ್ ಇಂದು ಬಿಡುಗಡೆ ಆಗಿದೆ. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಸುದೀಪ್ ಹಾಗೂ ಇತರೆ ಗಣ್ಯರು ಟ್ರೈಲರ್ ಬಿಡುಗಡೆ ಮಾಡಿದ್ದು, ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಟ್ರೈಲರ್ ವೀಕ್ಷಣೆಗೆ ಲಭ್ಯವಿದೆ. ಈ ಮೊದಲೇ ಬಿಡುಗಡೆ ಆಗಿದ್ದ ಪೋಸ್ಟರ್, ಟೀಸರ್ಗಳಿಂದ ಇದೊಂದು ಪೊಲೀಸ್ ಅಧಿಕಾರಿಯ ಕತೆ ಎಂಬುದು ಪ್ರೇಕ್ಷಕರಿಗೆ ತಿಳಿದಿತ್ತು, ಆದರೆ ವಿಲನ್ ರೀತಿಯ ಆವೇಷವುಳ್ಳ ಹೀರೋ ಕತೆ ಎಂಬುದು ಟ್ರೈಲರ್ನಿಂದ ಗೊತ್ತಾಗುತ್ತಿದೆ.
2:22 ನಿಮಿಷದ ಟ್ರೈಲರ್ ಇದಾಗಿದ್ದು, ಟ್ರೈಲರ್ನಲ್ಲಿ ಡಾಲಿ ಧನಂಜಯ್ ಅಬ್ಬರಿಸಿದ್ದಾರೆ. ಅವರಿಗಿಂತಲೂ ಅವರ ಬಂದೂಕು ಹೆಚ್ಚು ಮಾತನಾಡಿದೆ. ಟ್ರೈಲರ್ನಲ್ಲಿ ಡಾಲಿ ಹೇಳುವ ಖಡಕ್ ಸಂಭಾಷಣೆಗಳು ಅವರ ಅವರ ಪಾತ್ರ ಎಷ್ಟು ರಗಡ್ ಆಗಿರಬಹುದೆಂಬ ಅಂದಾಜು ನೀಡುತ್ತಿದೆ. ಡಾಲಿಗೆ ಎದುರಾಗಿ ಅಷ್ಟೆ ಒರಾಟದ ಆದರೆ ಮೃಗೀಯ ವಿಲನ್ ಸಹ ಇದ್ದಾನೆ. ಇವರಿಬ್ಬರ ಸೆಣೆಸಾಟ ಹೇಗಿರಬಹುದೆಂಬ ಕುತೂಹಲ ಹುಟ್ಟಿಸುವಂತಿದೆ ಟ್ರೈಲರ್.
ಇದೊಂದು ಸಾಮಾನ್ಯ ಪೊಲೀಸ್-ವಿಲನ್ ಕತೆ ಮಾತ್ರವೇ ಅಲ್ಲದೆ, ಭಾಷೆ-ನೆಲದ ವಿಷಯವನ್ನೂ ಸಿನಿಮಾ ಒಳಗೊಂಡಿರುವ ಬಗ್ಗೆಯೂ ಟ್ರೈಲರ್ ಸುಳಿವು ಬಿಟ್ಟುಕೊಡುತ್ತದೆ. ಟೀಸರ್ನಲ್ಲಿದ್ದ ಕನ್ನಡ ಧ್ವಜ, ಸಂಗೊಳ್ಳಿ ರಾಯಣ್ಣ ಪ್ರತಿಮೆಗಳು ಟ್ರೈಲರ್ನಲ್ಲಿಯೂ ಇವೆ. ಟ್ರೈಲರ್ನಲ್ಲಿ ನಾಯಕ ಹಾಗೂ ವಿಲನ್ಗಳ ಹೊರತಾಗಿ ಬೇರೆ ಪಾತ್ರಗಳಿಗೆ ಪ್ರಾಮುಖ್ಯತೆ ಕಡಿಮೆ. ಅದರಲ್ಲಿಯೂ ನಾಯಕಿ ಅಮೃತಾ ಅಯ್ಯಂಗಾರ್ ಕಂಡ ಕೂಡಲೇ ಮರೆಯಾಗಿಬಿಡುತ್ತಾರೆ.
ಮುಖ್ಯ ವಿಲನ್ನ ಮೃಗೀಯತೆ ಪ್ರದರ್ಶಿಸುವ ಒಂದೆರಡು ಸೀನ್ ಇದೆ ಅದರಲ್ಲಿಯೂ ವಿಲನ್ ಮುಖ ಕಾಣುವುದಿಲ್ಲ, ಆದರೆ ಖಡಕ್ ಆದ ಒರಟು ವ್ಯಕ್ತಿತ್ವದ ನಾಯಕನಿಗೆ ಪಕ್ಕಾ ಠಕ್ಕರ್ ಕೊಡುವ ವಿಲನ್ ಪಾತ್ರವನ್ನೇ ಸೃಷ್ಟಿಸಿದ್ದಾರೆ ನಿರ್ದೇಶಕ ವಿಜಯ್ ಎನ್. ಅಂದಹಾಗೆ ಸಿನಿಮಾದಲ್ಲಿ ವಿಲನ್ ಪಾತ್ರವನ್ನು ನಟ ನವೀನ್ ಶಂಕರ್ ನಿರ್ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪಾತ್ರಕ್ಕಾಗಿ ಸಖತ್ ಆಗಿಯೇ ದೇಹವನ್ನು ದಂಡಿಸಿದ್ದಾರೆ.
ಹೊಯ್ಸಳ ಸಿನಿಮಾವು ಡಾಲಿ ಧನಂಜಯ್ ಅವರ 25ನೇ ಸಿನಿಮಾ ಆಗಿದ್ದು, ಸಿನಿಮಾವನ್ನು ಅವರ ಗೆಳೆಯ ವಿಜಯ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಕಾರ್ತಿಕ್ ಗೌಡ ಹಾಗೂ ಯೋಗಿ. ಕೆಆರ್ಜಿ ಸ್ಟುಡಿಯೋಸ್ ಮೂಲಕ ಸಿನಿಮಾ ನಿರ್ಮಾಣಗೊಂಡಿದ್ದು, ಇದು ಹೊಂಬಾಳೆಯ ಸಹೋದರ ಸಂಸ್ಥೆಯೇ ಆಗಿದೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಂಭಾಷಣೆ ಬರೆದಿರುವುದು ಮಾಸ್ತಿ. ಸಿನಿಮಾವು ಇದೇ ತಿಂಗಳು ಮುವತ್ತರಂದು ತೆರೆಗೆ ಬರಲಿದೆ.