
ಈ ರೀತಿ ಆಗುತ್ತದೆ ಎಂದು ದರ್ಶನ್ ಅಭಿಮಾನಿಗಳು ಊಹಿಸಿರಲಿಲ್ಲ. ‘ದಿ ಡೆವಿಲ್’ (The Devil Movie) ಸಿನಿಮಾದಿಂದ ಹೊಸ ಹಾಡು ಬಿಡುಗಡೆ ಆಗಲಿದೆ ಎಂದು ಡಿ ಫ್ಯಾನ್ಸ್ ಕಾದಿದ್ದರು. ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ (Idre Nemmadi Agi Irbeku) ಎಂಬುದು ಹಾಡಿನ ಟೈಟಲ್ ಆದ್ದರಿಂದ ಸಖತ್ ಕ್ರೇಜ್ ಸೃಷ್ಟಿ ಆಗಿತ್ತು. ಆದರೆ ಹಾಡಿನ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗಲೇ ದರ್ಶನ್ (Darshan) ಅವರ ಪಾಲಿನ ನೆಮ್ಮದಿ ಮಾಯವಾಗಿದೆ. ಅವರಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಇಂದು (ಆಗಸ್ಟ್ 14) ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಆ ಕಾರಣದಿಂದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಇದರಿಂದ ಅಭಿಮಾನಿಗಳಿಗೆ ಡಬಲ್ ನಿರಾಸೆ ಆಗಿದೆ.
‘ಮಿಲನ’ ಖ್ಯಾತಿಯ ಪ್ರಕಾಶ್ ವೀರ್ ಅವರು ‘ದಿ ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಶ್ರೀ ಜೈಮಾತಾ ಕಂಬೈನ್ಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಆಗಸ್ಟ್ 15ರಂದು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ ಆಗಲಿದೆ ಎಂದು ಕೆಲವೇ ದಿನಗಳ ಹಿಂದಷ್ಟೇ ತಿಳಿಸಲಾಗಿತ್ತು. ಆದರೆ ಈಗ ಹಾಡು ಬಿಡುಗಡೆ ಮುಂದಕ್ಕೆ ಹೋಗಿದೆ ಎಂಬುದನ್ನು ಚಿತ್ರತಂಡವೇ ತಿಳಿಸಿದೆ.
‘ನಾಳೆ ಬೆಳಗ್ಗೆ ಬಿಡುಗಡೆ ಆಗಬೇಕಿದ್ದ ದಿ ಡೆವಿಲ್ ಸಿನಿಮಾದ ಹಾಡನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ’ ಎಂದು ‘ಶ್ರೀ ಜೈಮಾತಾ ಕಂಬೈನ್ಸ್’ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ‘ಇದು ತುಂಬಾ ಒಳ್ಳೆಯ ನಿರ್ಧಾರ. ಬಾಸ್ ಇಲ್ಲದೇ ಇರುವ ಹಾಡಿನ ಸಂಭ್ರಮ ನಮಗೆ ಬೇಡ’ ಎಂದು ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
‘ಕಾಟೇರ’ ಸಿನಿಮಾದ ಯಶಸ್ಸಿನ ಬಳಿಕ ‘ದಿ ಡೆವಿಲ್’ ಸಿನಿಮಾದ ಕೆಲಸಗಳಲ್ಲಿ ದರ್ಶನ್ ತೊಡಗಿಕೊಂಡಿದ್ದರು. ರೇಣುಕಾಸ್ವಾಮಿ ಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಅರೆಸ್ಟ್ ಆದಾಗ ಚಿತ್ರದ ಶೂಟಿಂಗ್ ನಿಂತಿತು. ಕೆಲವು ತಿಂಗಳ ಬಳಿಕ ಅವರು ರೆಗ್ಯುಲರ್ ಬೇಲ್ ಪಡೆದು ಹೊರಗೆ ಬಂದರು. ಆಗ ಮತ್ತೆ ಸಿನಿಮಾದ ಶೂಟಿಂಗ್ಗೆ ಚುರುಕು ಮುಟ್ಟಿಸಲಾಗಿತ್ತು.
ಇದನ್ನೂ ಓದಿ: ನಟ ದರ್ಶನ್ ಬಂಧನ: ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಮತ್ತೆ ಜೈಲು ವಾಸ
ಇತ್ತೀಚೆಗೆ ದರ್ಶನ್ ಅವರು ನ್ಯಾಯಾಲಯದಿಂದ ಅನುಮತಿ ಪಡೆದು ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿದ್ದರು. ತಮ್ಮ ಪಾಲಿನ ಚಿತ್ರೀಕರಣವನ್ನು ಅವರು ಮುಗಿಸಿಕೊಟ್ಟಿದ್ದಾರೆ. ಅಲ್ಲದೇ ಡಬ್ಬಿಂಗ್ ಕೂಡ ಪೂರ್ಣಗೊಳಿಸಿದ್ದಾರೆ. ಆದರೆ ಹಾಡಿನ ಬಿಡುಗಡೆಗೂ ಮುನ್ನ ಜಾಮೀನು ರದ್ದಾಗಿರುವುದರಿಂದ ದರ್ಶನ್ ಅವರ ನೆಮ್ಮದಿ ಮಾಯವಾದಂತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.