ದರ್ಶನ್ ಪರ ವಕೀಲರ ವಾದಕ್ಕೆ, ಎಸ್ಪಿಪಿ ಪ್ರಸನ್ನ ಪ್ರತಿವಾದ ಹೀಗಿತ್ತು
ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಇಂದು ಅಂತ್ಯವಾಗಿದೆ. ದರ್ಶನ್ ಪರ ವಕೀಲರು ಎತ್ತಿದ್ದ ಪ್ರಶ್ನೆಗಳಿಗೆ ಎಸ್ಪಿಪಿ ಪ್ರಸನ್ನ ಕುಮಾರ್ ಉತ್ತರ ನೀಡಿದ್ದಾರೆ. ದರ್ಶನ್ಗೆ ಏಕೆ ಜಾಮೀನು ನೀಡಬಾರದು ಎಂದು ಪ್ರಸನ್ನ ಕುಮಾರ್ ವಿವರಿಸಿದ್ದಾರೆ.

ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಪೊಲೀಸರ ತನಿಖೆಯಲ್ಲಿ ಲೋಪವಾಗಿದೆ. ಉದ್ದೇಶಪೂರ್ವಕವಾಗಿ ದರ್ಶನ್ ಅನ್ನು ಪ್ರಕರಣದಲ್ಲಿ ಸಿಕ್ಕಿಸುವ ಪ್ರಯತ್ನ ನಡೆದಿದೆ. ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ. ಹೇಳಿಕೆಗಳನ್ನು ತಿರುಚಲಾಗಿದೆ. ತನಿಖೆಯಲ್ಲಿ ಸಹ ಲೋಪಗಳಾಗಿವೆ ಎಂದು ವಾದ ಮಂಡಿಸಿದ್ದಾರೆ. ಒಂದು ಹಂತದಲ್ಲಿ ದರ್ಶನ್, ಕೃತ್ಯ ನಡೆದ ಸ್ಥಳದಲ್ಲಿ ಇರಲೇ ಇಲ್ಲ ಎಂಬ ವಾದವನ್ನು ಸಹ ನಾಗೇಶ್ ಅವರು ಮಾಡಿದರು. ನಾಗೇಶ್ ಅವರ ವಾದ ಅಂತ್ಯವಾದ ಬಳಿಕ ಎಸ್ಪಿಪಿ ಪ್ರಸನ್ನ ವಾದ ಆರಂಭಿಸಿ, ನಾಗೇಶ್ ಅವರು ಎತ್ತಿದ್ದ ಬಹುತೇಕ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದರು.
ಸಾಕ್ಷಿಗಳು ಹಾಗೂ ಆರೋಪಿಗಳು ಒಂದೇ ಸ್ಥಳದಲ್ಲಿ ಇದ್ದರು ಎಂದು ಸಲ್ಲಿಸಲಾಗಿರುವ ಮ್ಯಾಪ್ ಬಗ್ಗೆ ಸಿವಿ ನಾಗೇಶ್ ಅನುಮಾನ ವ್ಯಕ್ತಪಡಿಸಿದ್ದರು. ಆ ಬಗ್ಗೆ ವಾದ ಮಂಡಸಿದ ಪ್ರಸನ್ನ, ‘ಆರೋಪಿ, ಸಾಕ್ಷಿಗಳ ಸಿಡಿಆರ್ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ, ಸುಮಾರು 10 ಸಾವಿರ ಪುಟಗಳ ಸಿಡಿಆರ್ ವಿಶ್ಲೇಷಣೆ ಮಾಡಲಾಗಿದೆ, ಸಿಡಿಆರ್‌ನಲ್ಲಿ ಟವರ್‌ನ ಲಾಂಗಿಟ್ಯೂಡ್, ಲ್ಯಾಟಿಟ್ಯೂಡ್ ಸಂಗ್ರಹಿಸಲಾಗಿದೆ, ಇದು ನಾವು ನಿಂತಿರುವ ಸ್ಥಳದ ನಿಖರತೆ ತೋರಿಸುತ್ತದೆ, ಹೆಚ್ಚೆಂದರೆ ಐದು ಮೀಟರ್ ವ್ಯತ್ಯಾಸ ಇರಬಹುದು, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದ ಡಿಗ್ರಿ ಸಹಿತ ನಿಖರತೆಯಿದೆ, 10 ಸಾವಿರ ಪುಟ ಕೊಡುವ ಬದಲು ಅದನ್ನು ಆಧರಿಸಿ ನಕ್ಷೆ ತಯಾರಿಸಿದ್ದಾರೆ, ಇದು ತನಿಖಾಧಿಕಾರಿ ಕರ್ತವ್ಯವಾಗಿರುವುದರಿಂದ ನಕ್ಷೆ ತಯಾರಿಸಿದ್ದಾರೆ. ತಂತ್ರಜ್ಞಾನ ಕಲ್ಲಪ್ಪ, ಮಲ್ಲಪ್ಪನ ಕಾಲದಲ್ಲಿಲ್ಲ, ಮುಂದುವರಿದಿದೆ’ ಎಂದಿದ್ದಾರೆ.
ಇದನ್ನೂ ಓದಿ:ಪಂಚನಾಮೆಯಲ್ಲಿ ಇಲ್ಲದ ರಕ್ತ, ಎಫ್ಎಸ್ಎಲ್ ವರದಿಯಲ್ಲಿ ಹೇಗೆ ಬಂತು? ಸಿವಿ ನಾಗೇಶ್ ವಾದ
ಅಲ್ಲದೆ, ಆರೋಪಿ ಎ14 ತನ್ನ ಮೊಬೈಲ್ನಲ್ಲಿ ಸಾಕ್ಷಿ ನಾಶದ ಕುರಿತು ಸರ್ಚ್ ಮಾಡಿದ್ದಾನೆ, ಗೂಗಲ್ ಸರ್ಚ್ನಲ್ಲಿ ಲೊಕೇಷನ್ ತೆಗೆಯುವುದು ಹೇಗೆ, ಪೊಲೀಸರು ಹೇಗೆ ಲೊಕೇಷನ್ ಪತ್ತೆ ಹಚ್ಚುತ್ತಾರೆ, ಲೊಕೇಷನ್ ಸಿಗದಂತೆ ಮಾಡುವುದು ಹೇಗೆಂದು ಸರ್ಚ್ ಮಾಡಿದ್ದಾನೆ, ಕೃತ್ಯದಲ್ಲಿ ಭಾಗಿಯಾಗದೇ ಇದನ್ನೆಲ್ಲಾ ಏಕೆ ಸರ್ಚ್ ಮಾಡಲು ಸಾಧ್ಯವೇ? ಇನ್ನು ದರ್ಶನ್ ಮೊಬೈಲ್ ಸಂಖ್ಯೆ ಹೇಮಂತ್ ಹೆಸರಲ್ಲಿದೆ ಎಂದಿದ್ದಾರೆ. ಹೌದು, ಅದು ಹೇಮಂತ್ ಹೆಸರಲ್ಲಿದೆ, ಹಾಗೆಂದು ಅದನ್ನು ಬಳಸಿದ್ದು ಸ್ವತಃ ದರ್ಶನ್, ಪವಿತ್ರಾ ಗೌಡ, ಲವ್ ಯು ಚಿನ್ನು, ಮುದ್ದು, ಸುಬ್ಬ ಎಂದೆಲ್ಲ ಹೇಮಂತ್ಗೆ ಕಳಿಸಿದ್ದರು ಎನ್ನೋಣವೆ? ಅದನ್ನು ಆಕೆ ಕಳಿಸಿದ್ದು ದರ್ಶನ್ಗೆ, ದರ್ಶನ್ ಹಾಗೂ ಪವಿತ್ರಾ ಅದೇ ಮೊಬೈಲ್ ಸಂಖ್ಯೆಯಲ್ಲಿ ಚಾಟ್ ಮಾಡಿದ್ದಾರೆ’ ಎಂದಿದ್ದಾರೆ ಎಸ್ಪಿಪಿ ಪ್ರಸನ್ನ.
ದರ್ಶನ್ ಪಟ್ಟಣಗೆರೆ ಶೆಡ್ನಲ್ಲಿ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು ಆಗ ಮಣ್ಣು ಸೇರಿರಬಹುದು ಎಂದಿದ್ದಾರೆ. ದರ್ಶನ್ ಪಟ್ಟಣಗೆರೆ ಶೆಡ್ನಲ್ಲಿ ಶೂಟಿಂಗ್ ಮಾಡಿದ್ದು 2020-21 ರಲ್ಲಿ ಆಗ ಸೇರಿರುವ ಮಣ್ಣು ಈಗಲೂ ಹಾಗೆಯೇ ಇರಲು ಸಾಧ್ಯವೇ? ಎಂದು ಎಸ್ಪಿಪಿ ಪ್ರಶ್ನೆ ಮಾಡಿದರು. ಆ ಬಳಿಕ ಸುಬ್ರತೋ ರಾಯ್ ಪ್ರಕರಣ ಉಲ್ಲೇಖಿಸಿ, ಸಹರಾ ಸಂಸ್ಥೆಯಲ್ಲಿ ಸಾವಿರಾರು ಮಂದಿ ಉದ್ಯೋಗಿಗಳು ಇದ್ದರು ಎಂಬ ಕಾರಣಕ್ಕೆ ಅವರಿಗೆ ಜಾಮೀನು ನೀಡಿರಲಿಲ್ಲ. ಇಲ್ಲಿಯೂ ಸಹ ದರ್ಶನ್ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ, ಅವರನ್ನು ಬಳಸಿ ಪರ್ಯಾಯ ಸರ್ಕಾರ ನಡೆಸುವ ರೀತಿ ಆರೋಪಿ ವರ್ತಿಸಿದ್ದು ಇದೆ, ಹಾಗಾಗಿ ದರ್ಶನ್ಗೆ ಜಾಮೀನು ನೀಡಬಾರದು ಎಂದು ಎಸ್ಪಿಪಿ ವಾದ ಅಂತ್ಯ ಮಾಡಿದರು. ದರ್ಶನ್, ಪವಿತ್ರಾ ಹಾಗೂ ಇತರರ ಜಾಮೀನು ಅರ್ಜಿ ಆದೇಶ ಅಕ್ಟೋಬರ್ 14 ರಂದು ಹೊರಬೀಳಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ