ದರ್ಶನ್ ತೂಗುದೀಪ: ಪರಪ್ಪನ ಅಗ್ರಹಾರದಿಂದ ಮುಂಜಾನೆಯೇ ಬಳ್ಳಾರಿಗೆ ಶಿಫ್ಟ್; ಜೈಲು ತಲುಪೋದು ಎಷ್ಟು ಗಂಟೆಗೆ?
Darshan Thoogudeepa: ಪ್ರಕರಣದ ಆರೋಪಿ ದರ್ಶನ್ ಹಾಗೂ ಕೆಲ ಇತರೆ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲು ನ್ಯಾಯಾಲಯ ಅನುಮತಿ ನೀಡಿತ್ತು. ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡುತ್ತಿರುವ ವಿಚಾರ ಬೆಳಕಿಗೆ ಬಂದು ಸಂಚಲನ ಸೃಷ್ಟಿಸಿತ್ತು.
ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿತ್ತು ಎಂಬ ಕೇಸ್ಗೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತಿದೆ. ಮುಂಜಾನೆ 4.30ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಅವರನ್ನು ಪೊಲೀಸರು ಕರೆದೊಯ್ದಿದ್ದಾರೆ. ಮುಂಜಾನೆ 9.30-10ರ ಸುಮಾರಿಗೆ ಅವರು ಬಳ್ಳಾರಿ ಜೈಲು ತಲುಪುವ ಸಾಧ್ಯತೆ ಇದೆ.
ಬೊಲೆರೋ ವಾಹನದಲ್ಲಿ ದರ್ಶನ್ ಅವರನ್ನು ಪೊಲೀಸರು ಕರೆದೊಯ್ದಿದ್ದಾರೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಆರೋಪಿಗಳನ್ನು ಕರೆದೊಯ್ಯಲಾಗಿದೆ. ಇತ್ತೀಚೆಗೆ ದರ್ಶನ್ ಅವರು ಜೈಲಿನಲ್ಲಿ ಸಿಗರೇಟ್ ಸೇದಿದ್ದ ಫೋಟೋ ವೈರಲ್ ಆಗಿತ್ತು. ಈ ಫೋಟೋದಿಂದ ಸರ್ಕಾರಕ್ಕೆ ತಲೆನೋವಾಗಿತ್ತು. ರೇಣುಕಾ ಸ್ವಾಮಿ ಕೊಲೆ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದರು. ಅದರಂತೆ ಅವರನ್ನು ಶಿಫ್ಟ್ ಮಾಡಲಾಗುತ್ತಿದೆ.
ಬಳ್ಳಾರಿ ಜೈಲಿನ ಸಮೀಪ ಫ್ಯಾನ್ಸ್ ನೆರೆಯೋ ಸಾಧ್ಯತೆ ಇದೆ. ಆದರೆ, ಯಾವುದೇ ಕಾರಣಕ್ಕೂ ದರ್ಶನ್ ಅವರ ದರ್ಶನ ಭಾಗ್ಯ ಸಿಗೋದು ಅನುಮಾನವೇ. ಬೊಲೆರೋ ಜೀಪ್ನಲ್ಲಿ ದರ್ಶನ್ ಕಾಣಬಾರದು ಎನ್ನುವ ಕಾರಣಕ್ಕೆ ಕರ್ಟನ್ ಹಾಕಲಾಗಿದೆ. ಹೀಗಾಗಿ, ದರ್ಶನ್ ಅವರು ಕಾಣೋದು ಅನುಮಾನವೇ. ಫ್ಯಾನ್ಸ್ ಬಂದು ಅಲ್ಲಿ ನೆರೆದರೂ ಯಾವುದೇ ಪ್ರಯೋಜನ ಆಗುವುದಿಲ್ಲ.
ಇದನ್ನೂ ಓದಿ: ದರ್ಶನ್ ಮತ್ತು ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಿಸಲು ಪೊಲೀಸರು ನೀಡಿದ ಕಾರಣಗಳೇನು?
ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿ ದರ್ಶನ್ ಅವರು ಜೂನ್ 11ರಂದು ಬಂಧನಕ್ಕೆ ಒಳಗಾದರು. ಸೆಪ್ಟೆಂಬರ್ 11ಕ್ಕೆ ದರ್ಶನ್ ಬಂಧನಕ್ಕೆ ಒಳಗಾಗಿ ಮೂರು ತಿಂಗಳು ಕಳೆಯಲಿದೆ. ದರ್ಶನ್ ಅವರು ತೆಳ್ಳಗಾಗಿದ್ದಾರೆ, ತೂಕ ಕಳೆದುಕೊಂಡಿದ್ದಾರೆ ಎಂದೆಲ್ಲ ವರದಿ ಆಗಿತ್ತು. ಆದರೆ, ಆ ರೀತಿ ಆಗುತ್ತಿಲ್ಲ ಎನ್ನಲಾಗಿದೆ. ದರ್ಶನ್ ಅವರು ಹೊರಗಿನ ಊಟವನ್ನು ತರಿಸಿಕೊಂಡು ತಿನ್ನುತ್ತಿದ್ದರು. ಈ ವಿಚಾರ ಬೆಳಕಿಗೆ ಬಂದಿದ್ದು ಅವರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:49 am, Thu, 29 August 24