
ನಟ ದರ್ಶನ್ (Darshan) ಹಾಗೂ ಗ್ಯಾಂಗ್ ಸದ್ಯ ಜೈಲು ವಾಸ ಅನುಭವಿಸುತ್ತಿದ್ದಾರೆ. ಜಾಮೀನು ರದ್ದಾದ ಬಳಿಕ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಲಾಗಿದೆ. ಬಂಧನ ಆದ ಒಂದು ದಿನದ ಒಳಗೆ ಇವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ಯಾರಿಗೆ ಯಾವ ಸಂಖ್ಯೆ ನೀಡಲಾಗಿದೆ, ಅವರ ದಿನಚರಿ ಹೇಗಿತ್ತು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ದರ್ಶನ್ ಹಾಗೂ ಏಳು ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ಆಗಸ್ಟ್ 14ರಂದು ರದ್ದು ಮಾಡಿದೆ. ಈ ವೇಳೆ ದರ್ಶನ್ ಬೆಂಗಳೂರಿನಲ್ಲಿ ಇರಲಿಲ್ಲ. ಮಧ್ಯಾಹ್ನದ ಬಳಿಕ ಅವರು ಬೆಂಗಳೂರಿನ ಹೊಸಕೆರೆಹಳ್ಳಿಗೆ ಬರುತ್ತಿದ್ದಂತೆ ಪೊಲೀಸರು ಬಂಧಿಸಿ, ಕೋರ್ಟ್ಗೆ ಹಾಜುರಪಡಿಸಿದರು. ನಂತರ ಪರಪ್ಪನ ಅಗ್ರಹಾರಕ್ಕೆ ಅವರನ್ನು ಕಳುಹಿಸಲಾಯಿತು. ಸದ್ಯ ದರ್ಶನ್ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.
ದರ್ಶನ್ ಸೇರಿ ಐವರು ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ. ದರ್ಶನ್ ಕೈದಿ ಸಂಖ್ಯೆ 7314, ಪ್ರದೋಷ್ 7317, ನಾಗರಾಜ್ 7315, ಲಕ್ಷ್ಮಣ 7316, ಪವಿತ್ರ ಗೌಡ,7313 ನಂಬರ್ ನೀಡಲಾಗಿದೆ. ಪವಿತ್ರಾ ಗೌಡ ಪ್ರಕರಣದ ಎ1 ಆರೋಪಿ. ಈ ಕಾರಣದಿಂದಲೇ ಪವಿತ್ರಾಗೆ ಮೊದಲ ಸಂಖ್ಯೆ ನೀಡಲಾಗಿದೆ. ನಂತರದ ಸಂಖ್ಯೆಯನ್ನು ದರ್ಶನ್ಗೆ ಕೊಡಲಾಗಿದೆ.
ಕಳೆದ ಬಾರಿ ದರ್ಶನ್ ಅವರು ಬಂಧನಕ್ಕೆ ಒಳಗಾಗಾದ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿತ್ತು. ಅನೇಕ ಅಭಿಮಾನಿಗಳು ಆಗ ಈ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಈಗ ದರ್ಶನ್ಗೆ ಬೇರೆ ಸಂಖ್ಯೆ ಸಿಕ್ಕಿದೆ. ಈ ಬಾರಿಯೂ ಫ್ಯಾನ್ಸ್ ಕೈದಿ ನಂಬರ್ನ ಹಚ್ಚೆ ಹಾಕಿಸಿಕೊಳ್ಳುತ್ತಾರಾ ಎನ್ನುವ ಕುತೂಹಲ ಮೂಡಿದೆ.
ಶನಿವಾರ ಆರೋಪಿಗಳಾದ ದರ್ಶನ್ ಮತ್ತು ಪವಿತ್ರ ಕುಟುಂಬದವರು ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಸದ್ಯ ದರ್ಶನ್ ಹಾಗೂ ಇತರ ಮೂವರನ್ನು ಒಂದೇ ಬ್ಯಾರಕ್‌ನಲ್ಲಿ ಇಡಲಾಗಿದೆ. ಅವರು ಕ್ವಾರಂಟೈನ್ನಲ್ಲಿ ಇದ್ದಾರೆ. ನಂತರ ಅವರನ್ನು ಮುಖ್ಯ ಬ್ಯಾರಕ್ಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್‌ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್
ಜೈಲಿನಲ್ಲಿರುವ ಪ್ರದೋಷ್ ಸದ್ಯ ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆ ತಾವು ಮಾಡಿದ ತಪ್ಪು ಎಷ್ಟು ದೊಡ್ಡದು ಎಂಬುದು ಅರಿವಾಗಿ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ಇನ್ನು, ದರ್ಶನ್ ರಾತ್ರಿ ಇಡೀ ನಿದ್ದೆ ಮಾಡಿಲ್ಲ ಎನ್ನಲಾಗಿದೆ. ಸಹ ಆರೋಪಿಗಳ ಜೊತೆ ಅವರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:22 am, Fri, 15 August 25