ದೇವರಾಜ್​-ಉಮಾಶ್ರೀ ಜೋಡಿಯ ‘ಮಾನ’ ಚಿತ್ರದ ಹಿಂದಿದೆ ಹಲವು ಇಂಟರೆಸ್ಟಿಂಗ್​ ಕಹಾನಿ

| Updated By: ಮದನ್​ ಕುಮಾರ್​

Updated on: Feb 02, 2022 | 1:49 PM

‘ಮಾನ’ ಸಿನಿಮಾದಲ್ಲಿ ದೇವರಾಜ್​ ಅವರು ಜೀತದಾಳು ಪಾತ್ರ ಮಾಡಿದ್ದಾರೆ. ಅವರು ಹೀರೋ ಎಂಬುದು ತಿಳಿದ ಬಳಿಕ ನಟಿ ಉಮಾಶ್ರೀ ಕೂಡ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು.

ದೇವರಾಜ್​-ಉಮಾಶ್ರೀ ಜೋಡಿಯ ‘ಮಾನ’ ಚಿತ್ರದ ಹಿಂದಿದೆ ಹಲವು ಇಂಟರೆಸ್ಟಿಂಗ್​ ಕಹಾನಿ
ದೇವರಾಜ್, ಉಮಾಶ್ರೀ
Follow us on

ನಟ ದೇವರಾಜ್​ (Devaraj) ಮತ್ತು ನಟಿ ಉಮಾಶ್ರೀ ಅವರು ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಸಿನಿಮಾರಂಗದಲ್ಲಿ ಅವರು ಅಪಾರ ಅನುಭವ ಹೊಂದಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಎಷ್ಟೋ ಚಿತ್ರಗಳಲ್ಲಿ ದೇವರಾಜ್​ ಮತ್ತು ಉಮಾಶ್ರೀ ಅವರು ತೆರೆಹಂಚಿಕೊಂಡಿದ್ದರೂ ಕೂಡ ಎಂದಿಗೂ ಜೋಡಿಯಾಗಿ ಅಭಿನಯಿಸಿರಲಿಲ್ಲ. ಇದೇ ಮೊದಲ ಬಾರಿಗೆ ‘ಮಾನ’ (Maana Kannada Movie) ಸಿನಿಮಾದಲ್ಲಿ ಅವರಿಬ್ಬರು ಜೋಡಿಯಾಗಿದ್ದಾರೆ. ಗಂಡ-ಹೆಂಡತಿ ಪಾತ್ರದಲ್ಲಿ ದೇವರಾಜ್​ ಮತ್ತು ಉಮಾಶ್ರೀ (Umashree) ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್​ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸೆಬಾಸ್ಟಿಯನ್​ ಡೇವಿಡ್​ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಕಾಂತಲಕ್ಷ್ಮೀ ರಮೇಶ್​ ಬಾಬು ಅವರು ನಿರ್ಮಾಣ ಮಾಡಿದ್ದಾರೆ. ಕುಂ. ವೀರಭದ್ರಪ್ಪ ಬರೆದ ಕಥೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಈ ಸಿನಿಮಾಗೆ ದೇವರಾಜ್​ ಅವರೇ ಹೀರೋ ಆಗಬೇಕು ಎಂಬುದು ನಿರ್ಮಾಪಕರ ಆಸೆ ಆಗಿತ್ತು. ಅವರು ಒಪ್ಪಿಕೊಂಡರೆ ಮಾತ್ರ ಸಿನಿಮಾ ನಿರ್ಮಾಣ ಮಾಡುವುದಾಗಿ ನಿರ್ದೇಶಕರಿಗೆ ರಮೇಶ್​ ಬಾಬು ಹೇಳಿದ್ದರು. ಕುಂ.ವೀ. ಕಥೆಗಳ ಬಗ್ಗೆ ದೇವರಾಜ್​ ಅವರಿಗೆ ವಿಶೇಷ ಭರವಸೆ. ಹಾಗಾಗಿ ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು. ಈಗ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

‘ಮಾನ’ ಸಿನಿಮಾದಲ್ಲಿ ದೇವರಾಜ್​ ಅವರು ಜೀತದಾಳು ಪಾತ್ರ ಮಾಡಿದ್ದಾರೆ. ಅವರ ಕಾಸ್ಟ್ಯೂಮ್​ ಕೂಡ ಅದೇ ರೀತಿ ಇದೆ. ಈ ರೀತಿಯ ಬಟ್ಟೆ ಧರಿಸಿ ದೇವರಾಜ್​ ನಟಿಸುತ್ತಾರೋ ಇಲ್ಲವೋ ಎಂಬ ಅಳುಕು ನಿರ್ದೇಶಕರಿಗೆ ಇತ್ತು. ಅದರೆ ಅವರು ಪಾತ್ರಕ್ಕೆ ನ್ಯಾಯ ಸಲ್ಲಿಸುವ ಸಲುವಾಗಿ ಏನು ಬೇಕೋ ಎಲ್ಲವನ್ನೂ ಮಾಡಿದ್ದಾರೆ. ಆರಂಭದಲ್ಲಿ ಈ ಚಿತ್ರದಲ್ಲಿ ನಟಿಸಲು ಉಮಾಶ್ರೀ ಒಪ್ಪಿಕೊಂಡಿರಲಿಲ್ಲ. ಆದರೆ ದೇವರಾಜ್​ ಹೀರೋ ಎಂಬುದು ಗೊತ್ತಾದ ಬಳಿಕ ಅವರು ಒಪ್ಪಿಕೊಂಡರು.

ಒಂದು ಕಲಾತ್ಮಕ ಸಿನಿಮಾ ರೀತಿಯಲ್ಲಿ ‘ಮಾನ’ ಮೂಡಿಬಂದಿದೆ. ಆದರೆ ಈ ಸಿನಿಮಾದಲ್ಲಿ ಹಾಸ್ಯ ಕೂಡ ಚೆನ್ನಾಗಿದೆ. ಅದು ಜನರಿಗೆ ಇಷ್ಟವಾದರೆ ಇದು ಕಮರ್ಷಿಯಲ್​ ಸಿನಿಮಾ ಆಗಲಿದೆ ಎಂಬುದು ದೇವರಾಜ್​ ಅಭಿಪ್ರಾಯ. ಈ ರೀತಿಯ ಪಾತ್ರಗಳು ದೇವರಾಜ್​ ಅವರಿಗೆ ಹೊಸದಲ್ಲ. ರಂಗಭೂಮಿಯ ಹಿನ್ನೆಲೆಯಿಂದ ಬಂದ ಅವರು ತಮ್ಮ ಸಿನಿಮಾ ಜರ್ನಿಯ ಆರಂಭದ ದಿನಗಳಲ್ಲಿ ಇಂಥ ಅನೇಕ ಪಾತ್ರಗಳನ್ನು ಮಾಡಿದ್ದರು. ಈಗ ‘ಮಾನ’ ಮೂಲಕ ಮತ್ತೆ ಅಂಥ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾದ ಕಥೆ ಉಮಾಶ್ರೀ ಅವರಿಗೆ ಹೆಚ್ಚು ಇಷ್ಟ ಆಗಿದೆ. ‘ಕುಂ.ವೀ. ಕಥೆ ಮತ್ತು ದೇವರಾಜ್​ ನಟಿಸುವ ಸಿನಿಮಾ ಎಂದರೆ ಅದಕ್ಕೊಂದು ತೂಕ ಇರತ್ತೆ. ಈ ಪಾತ್ರದಲ್ಲಿ ದೇವರಾಜ್​ ತುಂಬ ಚೆನ್ನಾಗಿ ಅಭಿನಯಿಸಿದ್ದಾರೆ. ಸಮಾಜದಲ್ಲಿ ಇಂದಿಗೂ ದೌರ್ಜನ್ಯಗಳು ನಡೆಯುತ್ತಿವೆ. ನಗರಗಳಲ್ಲೂ ಅದು ಇದೆ. ನಾವು ಕೂಡ ಕಂಡಿರುವುದರಿಂದ ಈ ಸಿನಿಮಾ ಒಪ್ಪಿಕೊಂಡೆ. ಇಂಥ ಸಿನಿಮಾಗಳಿಂದ ಒಂದಷ್ಟು ಜನರ ಮನಸ್ಸು ಮತ್ತು ಬದುಕು ಪರಿವರ್ತನೆ ಆಗಲಿದೆ ಅಂತ ನಿರೀಕ್ಷಿಸುತ್ತೇನೆ’ ಎಂದು ಉಮಾಶ್ರೀ ಹೇಳಿದ್ದಾರೆ.

ಟೀಸರ್​ ಬಿಡುಗಡೆ ಕಾರ್ಯಕ್ರಮಕ್ಕೆ ಆನಂದ್​ ಗುರೂಜಿ ಮತ್ತು ಪ್ರಜ್ವಲ್​ ದೇವರಾಜ್​ ಅವರು ಅತಿಥಿಗಳಾಗಿ ಆಗಮಿಸಿದ್ದರು. ಪಳನಿ ಡಿ. ಸೇನಾಪತಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿಜೋ ಕೆ. ಜೋಸ್​ ಛಾಯಾಗ್ರಹಣ, ಶಿವಪ್ರಸಾದ್​ ಯಾದವ್ ಸಂಕಲನ​ ಮಾಡಿದ್ದಾರೆ.

ಇದನ್ನೂ ಓದಿ:

ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಉಮಾಶ್ರೀ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’

ನಾವೆಲ್ಲರೂ ಮಾಲಾಶ್ರೀಗೆ ಬೆಂಬಲವಾಗಿ ನಿಂತುಕೊಳ್ತೀವಿ; ದೇವರಾಜ್​ ಭಾವುಕ ನುಡಿ