Dhruva Sarja: ‘ನಾನೇನು ದೊಡ್ಡ ಸೆಲೆಬ್ರಿಟಿ ಅಲ್ಲ’: ಬರ್ತ್ಡೇ ಬಗ್ಗೆ ಮುಖ್ಯ ನಿರ್ಧಾರ ಪ್ರಕಟಿಸಿದ ಧ್ರುವ ಸರ್ಜಾ
Dhruva Sarja Birthday: ಈ ಬಾರಿ ಜನ್ಮದಿನ ಆಚರಿಸಿಕೊಳ್ಳದೇ ಇರಲು ಧ್ರುವ ಸರ್ಜಾ ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನೂ ಅವರು ವಿವರಿಸಿದ್ದಾರೆ.
ನಟ ಧ್ರುವ ಸರ್ಜಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅದ್ದೂರಿ, ಬಹದ್ದೂರ್, ಭರ್ಜರಿ, ಪೊಗರು ಸಿನಿಮಾಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅ.6ರಂದು ಅವರ ಜನ್ಮದಿನ. ಆ ದಿನವನ್ನು ದೊಡ್ಡದಾಗಿ ಸೆಲೆಬ್ರೇಟ್ ಮಾಡಬೇಕು ಎಂಬ ಆಸೆ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಆದರೆ ಆ ಬಗ್ಗೆ ಧ್ರುವ ಸರ್ಜಾ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಾರಿ ಜನ್ಮದಿನ ಆಚರಿಸಿಕೊಳ್ಳದೇ ಇರಲು ಅವರು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಅವರು ತಮ್ಮ ತೀರ್ಮಾನ ಏನೆಂಬುದನ್ನು ತಿಳಿಸಿದ್ದಾರೆ.
‘ಎಲ್ಲರಿಗೂ ನಮಸ್ಕಾರ. ಅ.6ರಂದು ನನ್ನ ಜನ್ಮದಿನ. ನಾನೇನು ದೊಡ್ಡ ಸೆಲೆಬ್ರಿಟಿ ಅಲ್ಲ. ಆದ್ರೂ ನನ್ನ ವಿಐಪಿಗಳಲ್ಲಿ ಒಂದು ವಿನಂತಿ. ಈ ಬಾರಿ ಸೆಲೆಬ್ರೇಟ್ ಮಾಡುವಂಥ ಮನಸ್ಥಿತಿಯಲ್ಲಿ ನಾನಿಲ್ಲ. ಅದು ನಿಮ್ಮೆಲ್ಲರಿಗೂ ಅರ್ಥ ಆಗುತ್ತದೆ ಎನಿಸುತ್ತದೆ. ಅದಕ್ಕಿಂತಲೂ ಎರಡೂ ಮುಖ್ಯ ಕಾರಣ ಇದೆ. ದೊಡ್ಡ ಕಾರಣ ಎಂದರೆ ಕೊವಿಡ್. ಮತ್ತೊಂದು ಕಾರಣ ನಾನು ಊರಲ್ಲಿ ಇಲ್ಲದಿರುವುದು. ಶೂಟಿಂಗ್ ಸಲುವಾಗಿ ವಿಶಾಖಪಟ್ಟಣಕ್ಕೆ ಹೋಗಿರುತ್ತೇನೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
‘ಪ್ರತಿ ವರ್ಷ ನಿಮ್ಮನೆಯ ಹುಡುಗ ಎಂದುಕೊಂಡು ನನ್ನೆಲ್ಲ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ತಾಯಂದಿರು ಹೇಗೆ ಆಶೀರ್ವಾದ ಮಾಡಿದ್ದೀರೋ ಈ ವರ್ಷವೂ ನನ್ನ ಜನ್ಮದಿನಕ್ಕೆ ಆಶೀರ್ವಾದ ಮಾಡಿ. ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲವೇ ನನಗೆ ಶ್ರೀರಕ್ಷೆ. ಜೈ ಆಂಜನೇಯ’ ಎಂದು ಧ್ರುವ ಸರ್ಜಾ ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
View this post on Instagram
ಸದ್ಯ ಅವರು ಮಾರ್ಟಿನ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಅದ್ದೂರಿ’ ಬಳಿಕ ಧ್ರುವ ಮತ್ತೊಂದು ಈ ಸಿನಿಮಾ ಮೂಲಕ ನಿರ್ದೇಶಕ ಎ.ಪಿ. ಅರ್ಜುನ್ ಜೊತೆ ಕೈ ಜೋಡಿಸಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿದೆ. ಇದೊಂದು ಮಾಸ್ ಕಮರ್ಷಿಯಲ್ ಸಿನಿಮಾ ಆಗಲಿದ್ದು, ಧ್ರುವ ಸರ್ಜಾ ಖಡಕ್ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದಿನ ಪೊಗರು ಸಿನಿಮಾದಲ್ಲಿ ಉದ್ದ ಕೂದಲು ಮತ್ತು ಗಡ್ಡ ಬಿಟ್ಟುಕೊಂಡಿದ್ದ ಅವರಿಗೆ ‘ಮಾರ್ಟಿನ್’ ಚಿತ್ರದಲ್ಲಿ ತುಂಬ ಸ್ಟೈಲಿಶ್ ಆದಂತಹ ಲುಕ್ ಇರಲಿದೆ. ಚಿತ್ರದ ಲಾಂಚಿಂಗ್ ದಿನ ಬಿಡುಗಡೆ ಆದ ಟೀಸರ್ನಲ್ಲಿ ಧ್ರುವ ಮಿಂಚಿದ್ದಾರೆ.
ಇದನ್ನೂ ಓದಿ:
‘ನಿನ್ನ ಬಿಟ್ಟು ಇರೋಕೆ ಆಗ್ತಾ ಇಲ್ಲ ಅಣ್ಣ..’; ಚಿರು ನೆನೆದು ಎಮೋಷನಲ್ ಆದ ಧ್ರುವ ಸರ್ಜಾ: ವಿಡಿಯೋ ವೈರಲ್
‘ನಾನು ಮಾರ್ಟಿನ್ ಅಲ್ಲ’; ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಧ್ರುವ ಸರ್ಜಾ: ಯಾರು ನಿಜವಾದ ಮಾರ್ಟಿನ್?
Published On - 12:45 pm, Mon, 4 October 21