ಗಾರೆ ಕೆಲಸದವ ಮಗನಿಗೆ ಶಸ್ತ್ರ ಚಿಕಿತ್ಸೆ: ಮಗುವಿನ ಬಾಳಿಗೆ ಬೆಳಕಾದ ಧ್ರುವ
ನಟ ಧ್ರುವ ಸರ್ಜಾ ಅವರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಮಂಜುನಾಥ ದೃಷ್ಟಿ ಆಸ್ಪತ್ರೆಯಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯಿಂದ ಬಾಲಕನ ದೃಷ್ಟಿ ಸುಧಾರಿಸಿದೆ. ಧ್ರುವ ಅವರ ಈ ಕಾರ್ಯಕ್ಕೆ ಬಾಲಕನ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

ನಟ ಧ್ರುವ ಸರ್ಜಾ (Dhruva Sarja) ತೆರೆ ಮೇಲೆ ಮಾಸ್ ಹೀರೋ ಆಗಿ ಮಿಂಚುತ್ತಾರೆ. ಕೆಲ ಸಿನಿಮಾಗಳಲ್ಲಿ ನೆಗೆಟಿವ್ ಶೇಡ್ ಇರುವ ನಾಯಕನಾಗಿಯೂ ನಟಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ತಮ್ಮ ನಂಬಿ ಬಂದವರಿಗೆ ಸಾಕಷ್ಟು ಸಹಾಯ ಮಾಡುತ್ತಾರೆ, ಸಮಾಜಮುಖಿಯಾಗಿ ಬದುಕುತ್ತಿದ್ದಾರೆ. ಕೆಲ ವಾರಗಳ ಹಿಂದಷ್ಟೆ ಬುಡಕಟ್ಟು ವಸತಿ ಶಾಲೆಯೊಂದಕ್ಕೆ ಕ್ರೀಡಾ ಸಾಮಗ್ರಿಗಳು ಸೇರಿದಂತೆ ಅನೇಕ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದ ನಟ ಧ್ರುವ ಸರ್ಜಾ, ಈಗ ಇನ್ನೂ ಮಹತ್ವದ ಕಾರ್ಯವೊಂದನ್ನು ಮಾಡಿದ್ದಾರೆ.
ಧ್ರುವ ಸರ್ಜಾ ಅವರು ಕಣ್ಣಿನ ಸಮಸ್ಯೆಯಿದ್ದ ಬಾಲಕನೊಬ್ಬನಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಆ ಮೂಲಕ ಆ ಬಾಲಕನ ಕಣ್ಣು ದೃಷ್ಟಿ ಸರಿ ಹೋಗುವಂತೆ ಮಾಡಿದ್ದಲ್ಲದೆ, ಆ ಬಾಲಕನ ಹಾಗೂ ಅವರ ಕುಟುಂಬಕ್ಕೆ ಬೆಳಕಾಗಿದ್ದಾರೆ. ತಾವೇ ಮುಂದೆ ನಿಂತು ಮಂಜುನಾಥ ದೃಷ್ಟಿ ಆಸ್ಪತ್ರೆಯಲ್ಲಿ ಆ ಪುಟ್ಟ ಬಾಲಕನಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಆ ಬಾಲಕನ ದೃಷ್ಟಿದೋಷ ನಿವಾರಣೆ ಆಗಿದೆ.
ಬಾಲಕನ ತಂದೆ ವಿಡಿಯೋನಲ್ಲಿ ಈ ಬಗ್ಗೆ ವಿವರಣೆ ನೀಡಿದ್ದು, ‘ನನ್ನ ಪುಟ್ಟ ಮಗನಿಗೆ ಕಣ್ಣಿನ ಸಮಸ್ಯೆ ಇತ್ತು. ಅದನ್ನು ಧ್ರುವ ಸರ್ಜಾ ಅಣ್ಣನ ಬಳಿ ಹೇಳಿಕೊಂಡೆವು. ಕೂಡಲೇ ಅವರು ಆಸ್ಪತ್ರೆಗೆ ಹೇಳಿದರು. ಅವರಿಂದ ಮಗನ ಕಣ್ಣು ದೃಷ್ಟಿ ಸರಿಹೋಗಿದೆ. ಅವನು ಪ್ರಪಂಚ ನೋಡುವಂತಾಗಿದೆ’ ಎಂದಿದ್ದಾರೆ. ಇನ್ನು ಮಂಜುನಾಥ ಆಸ್ಪತ್ರೆ ವೈದ್ಯರು ಮಾತನಾಡಿ, ‘ಧ್ರುವ ಸರ್ಜಾ ಅವರು ನಮಗೆ ಆ ಬಾಲಕನ್ನು ರೆಫರ್ ಮಾಡಿದ್ದರು. ಅವನ ಪರೀಕ್ಷೆ ಮಾಡಿದಾಗ ಪೊರೆ ಇರುವುದು ಗೊತ್ತಾಯಿತು. ಕೂಡಲೇ ನಾವು ಆಪರೇಷನ್ ಮಾಡಿದೆವು. ಈ ಕಾರ್ಯವನ್ನು ನಾನು ಮಾಡಿದೆ ಎಂದು ಹೇಳುವುದು ಬೇಡ, ಪ್ರಚಾರ ಮಾಡುವುದು ಬೇಡ ಎಂದು ಧ್ರುವ ಸರ್ಜಾ ಹೇಳಿದ್ದರು’ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಪರೇಷನ್ ಬಳಿಕ ನಟ ಧ್ರುವ ಸರ್ಜಾ ಅವರು ಆ ಬಾಲಕನೊಟ್ಟಿಗೆ, ಅವರ ಪೋಷಕರೊಟ್ಟಿಗೆ ಮಾತನಾಡಿದರು. ಪೋಷಕರಿಬ್ಬರೂ ಸಹ ಧ್ರುವ ಸರ್ಜಾ ಅವರ ಸಹಾಯಕ್ಕೆ ಧನ್ಯವಾದ ಸಹ ಹೇಳಿದ್ದಾರೆ. ‘ಧ್ರುವ ಸರ್ಜಾ ಅಣ್ಣ ಬೈಯ್ಯುತ್ತಾರೆ, ಆದರೆ ಮಾಡಿದ ಸಹಾಯವನ್ನು ಹೇಳಿಕೊಳ್ಳದೇ ಇರಲು ಆಗುವುದಿಲ್ಲ’ ಎಂದಿದ್ದಾರೆ ಬಾಲಕನ ಪೋಷಕರು. ಧ್ರುವ ಸರ್ಜಾ ಹಲವಾರು ಮಂದಿಗೆ ಈ ರೀತಿ ಸಹಾಯ ಮಾಡಿದ್ದಾರೆ. ದೇವಾಲಯಗಳ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ಶಾಲೆಗಳಿಗೆ ಸಹಾಯ ಮಾಡಿದ್ದಾರೆ. ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ಚಿತ್ರೀಕರಣ ಪೂರ್ಣವಾಗಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ