ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕರು ಎಂದಿಗೂ ಕೈ ಬಿಡುವುದಿಲ್ಲ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ಆದರೆ ಜನರನ್ನು ತಲುಪುವಲ್ಲಿ ಕೆಲವು ಚಿತ್ರಗಳಿಗೆ ಸಮಯ ಹಿಡಿಯುತ್ತದೆ. ಸದ್ಯ ಕನ್ನಡದ ‘ಲವ್ 360’ (Love 360) ಸಿನಿಮಾಗೆ ಅದೇ ರೀತಿ ಆಗಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶಶಾಂಕ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಆಗಸ್ಟ್ 19ರಂದು ಈ ಸಿನಿಮಾ ಬಿಡುಗಡೆ ಆಯಿತು. ಹೊಸ ನಟ ಪ್ರವೀಣ್ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ರಚನಾ ಇಂದರ್ (Rachana Inder) ಜೋಡಿ ಆಗಿದ್ದಾರೆ. ಸಿನಿಮಾ ನೋಡಿದ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರು ಕೂಡ ಭೇಷ್ ಎಂದಿದ್ದಾರೆ. ಹಾಗಿದ್ದರೂ ಕೂಡ ಚಿತ್ರಮಂದಿರಕ್ಕೆ ಅಗತ್ಯ ಪ್ರಮಾಣದಲ್ಲಿ ಜನರು ಬರುತ್ತಿಲ್ಲ ಎಂಬುದು ಚಿತ್ರತಂಡದ ಬೇಸರಕ್ಕೆ ಕಾರಣ ಆಗಿದೆ. ಈ ಕುರಿತು ನಿರ್ದೇಶಕ ಶಶಾಂಕ್ (Director Shashank) ಅವರು ವಿಡಿಯೋ ಮೂಲಕ ಪ್ರೇಕ್ಷಕರನ್ನು ಮನವಿ ಮಾಡಿಕೊಂಡಿದ್ದಾರೆ.
‘ನಿಮ್ಮೆಲ್ಲರ ನೆಚ್ಚಿನ ‘ಜಗವೇ ನೀನು ಗೆಳೆತಿಯೇ..’ ಹಾಡು ಇರುವಂತಹ ನನ್ನ ನಿರ್ದೇಶನದ ‘ಲವ್ 360’ ಸಿನಿಮಾ ಬಿಡುಗಡೆ ಆಗಿದೆ. ಮಾಧ್ಯಮ ಮತ್ತು ಪ್ರೇಕ್ಷಕರಿಂದ ಅದ್ಭುತ ಪ್ರಶಂಸೆ ವ್ಯಕ್ತವಾಗಿರುವುದು ಖುಷಿಯ ವಿಚಾರ. ಆದರೆ ಬೇಸರದ ಸಂಗತಿ ಏನೆಂದರೆ ಕಲೆಕ್ಷನ್ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಮಾತ್ರ ನಿರೀಕ್ಷಿತ ಮೊತ್ತದ ಕಲೆಕ್ಷನ್ ಆಗುತ್ತಿದೆ’ ಎಂದು ಶಶಾಂಕ್ ಹೇಳಿದ್ದಾರೆ.
‘ಹೊಸಬರ ಸಿನಿಮಾ ಆದ್ದರಿಂದ ಈ ಚಿತ್ರದಲ್ಲಿ ಏನಿದೆ ಎಂಬುದು ಗೊತ್ತಾಗುವ ತನಕ ಜನರು ಚಿತ್ರಮಂದಿರಕ್ಕೆ ಬರುವುದಿಲ್ಲ ಅನ್ನೋದು ನಮಗೂ ತಿಳಿದಿತ್ತು. ಹಾಗಾಗಿ ಶನಿವಾರ ಸಂಜೆ ನಂತರ ಕಲೆಕ್ಷನ್ ಹೆಚ್ಚಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ನಿಜವಾಗಿಲ್ಲ. ಇಂದು (ಆಗಸ್ಟ್ 21) ಭಾನುವಾರ. ತುಂಬ ಮುಖ್ಯವಾದ ದಿನ. ಇಂದು ಕೂಡ ಸೂಕ್ತ ಕಲೆಕ್ಷನ್ ಆಗದಿದ್ದರೆ ಚಿತ್ರಮಂದಿರಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಒಳ್ಳೆಯ ಸಿನಿಮಾ ಮಾಡಿಯೂ ಸಹ ನಾವು ಕಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ. ಕನ್ನಡ ಸಿನಿಮಾ ಬಗ್ಗೆ ಕಾಳಜಿ ಇರುವ ಎಲ್ಲರನ್ನೂ ನಾನು ಮನವಿ ಮಾಡಿಕೊಳ್ಳುತ್ತೇನೆ. ಆದಷ್ಟು ಬೇಗ ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾವನ್ನು ನೋಡಿ’ ಎಂದು ಶಶಾಂಕ್ ಕೋರಿಕೊಂಡಿದ್ದಾರೆ.
‘ಗಾಳಿಪಟ 2’ ಸಿನಿಮಾದ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರು ಕೂಡ ‘ಲವ್ 360’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ‘ನಮ್ಮ ಇಡೀ ತಂಡದ ಪರವಾಗಿ ಲವ್ 360 ಚಿತ್ರಕ್ಕೆ ಶುಭ ಕೋರುತ್ತೇವೆ. ಕನ್ನಡದಲ್ಲಿ ಈ ಚಿತ್ರ ಒಂದು ಒಳ್ಳೆಯ ಪ್ರಯತ್ನ. ಕನ್ನಡಿಗರೆಲ್ಲರೂ ಈ ಚಿತ್ರಕ್ಕೆ ಹಾರೈಸಬೇಕು ಎಂದು ಕೇಳಿಕೊಳ್ಳುತ್ತೇವೆ’ ಎಂದಿದ್ದಾರೆ ಯೋಗರಾಜ್ ಭಟ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:06 pm, Sun, 21 August 22