ಅಂದುಕೊಂಡಷ್ಟು ಬೇಗ ಬರಲ್ಲ ‘ಘೋಸ್ಟ್ 2’: ನಿರ್ದೇಶಕ ಶ್ರೀನಿ ಯೋಜನೆಗಳೇನು?

Ghost 2: ‘ಘೋಸ್ಟ್’ ಸಿನಿಮಾ ಸೂಪರ್ ಹಿಟ್ ಆಗಿದ್ದು ಸಿನಿಮಾದ ಎರಡನೇ ಭಾಗ ಶೀಘ್ರವೇ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ನಿರ್ದೇಶಕ ಶ್ರೀನಿಯ ಯೋಜನೆಗಳು ಬೇರೆಯೇ ಇದೆ.

ಅಂದುಕೊಂಡಷ್ಟು ಬೇಗ ಬರಲ್ಲ 'ಘೋಸ್ಟ್ 2': ನಿರ್ದೇಶಕ ಶ್ರೀನಿ ಯೋಜನೆಗಳೇನು?
Follow us
ಮಂಜುನಾಥ ಸಿ.
|

Updated on: Oct 29, 2023 | 5:18 PM

ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಶಿವಣ್ಣನ ಮಾಸ್ ಲುಕ್​, ಖದರ್ ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನಾಯಕಿ, ಹಾಡುಗಳು ಇಲ್ಲದೆಯೂ ಕುತೂಹಲಭರಿತವಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಶ್ರೀನಿ. ‘ಘೋಸ್ಟ್’ ಸಿನಿಮಾ ಹಿಟ್ ಆಗುತ್ತಿದ್ದಂತೆ ಸಿನಿಮಾದ ಸೀಕ್ವೆಲ್ ಅನ್ನು ಶ್ರೀನಿ ಘೋಷಿಸಿದ್ದರು. ಆದರೆ ಆ ಸಿನಿಮಾ ಅಂದುಕೊಂಡಷ್ಟು ಬೇಗನೆ ತೆರೆಗೆ ಬರಲ್ಲ.

‘ಘೋಸ್ಟ್ 2’ ಸಿನಿಮಾದ ಶೀಘ್ರವೇ ಚಿತ್ರೀಕರಣ ಆರಂಭವಾಗಲಿದೆ ಎಂದುಕೊಂಡಿದ್ದರು ಅಭಿಮಾನಿಗಳು ಆದರೆ ಎಲ್ಲ ಲೆಕ್ಕಾಚಾರ ಉಲ್ಟಾ ಆಗಿದೆ. ನಿರ್ದೇಶಕ ಶ್ರೀನಿ ತಮ್ಮ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ ಬಳಿಕವಷ್ಟೆ ಹೊಸ ‘ಘೋಸ್ಟ್ 2’ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

ಮೊದಲಿಗೆ ನಿರ್ದೇಶಕ ಶ್ರೀನಿ ‘ಬೀರ್​ಬಲ್ 2’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದಾದ ಬಳಿಕ ‘ಘೋಸ್ಟ್’ ಸಿನಿಮಾದ ಬರುವ ಪವರ್​ಫುಲ್ ಪಾತ್ರ ದಳವಾಯಿಯನ್ನು ಆಧರಿಸಿ ಪ್ರತ್ಯೇಕ ಸಿನಿಮಾ ಮಾಡಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕವಷ್ಟೆ ‘ಘೋಸ್ಟ್ 2’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ನಿರ್ದೇಶಕ ಶ್ರೀನಿ. ಅಲ್ಲಿಗೆ ‘ಘೋಸ್ಟ್ 2’ ಸಿನಿಮಾ ಸೆಟ್ಟೇರಲು ಕನಿಷ್ಟ ಒಂದೂವರೆ ವರ್ಷವಂತೂ ಬೇಕು.

ಇದನ್ನೂ ಓದಿ: ಘೋಸ್ಟ್ ಸಿನಿಮಾ ನೋಡಲು ಕೆಲವು ಸಲಹೆ ಕೊಟ್ಟ ನಟ ಶಿವರಾಜ್ ಕುಮಾರ್

‘ಘೋಸ್ಟ್’ ಸಿನಿಮಾದ ಎರಡನೇ ಭಾಗ ನಿರ್ದೇಶನ ಮಾಡುವುದಾಗಿ ನಿರ್ದೇಶಕ ಶ್ರೀನಿ ಇತ್ತೀಚೆಗಷ್ಟೆ ಘೋಷಣೆ ಮಾಡಿದ್ದರು. ‘ಘೋಸ್ಟ್’ ಸಿನಿಮಾದಲ್ಲಿ ಉತ್ತರ ಹೇಳದ ಕೆಲವು ಪ್ರಶ್ನೆಗಳಿಗೆ ‘ಘೋಸ್ಟ್ 2’ ಸಿನಿಮಾದಲ್ಲಿ ಉತ್ತಿರಸಲಿದ್ದೇವೆ ಎಂದು ಹೇಳಿದ್ದರು. ದಳವಾಯಿ ಯಾರು? ಅಂಡರ್ಗ್ರೌಂಡ್​ನಲ್ಲಿ ಬೈಕ್​ಗಳು ಹೇಗೆ ಬಂದವು, ಬೋಟ್​ಗಳನ್ನು ಆಪರೇಟ್ ಮಾಡುತ್ತಿದ್ದವರು ಯಾರು? ಹೀಗೆ ಇನ್ನೂ ಕೆಲವು ಉತ್ತರ ಸಿಗದ ಪ್ರಶ್ನೆಗಳಿಗೆ ‘ಘೋಸ್ಟ್ 2’ ಸಿನಿಮಾದಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.

ಶ್ರೀನಿ ನಟಿಸಿ ನಿರ್ದೇಶನ ಮಾಡಿದ್ದ ‘ಬೀರ್​ಬಲ್’ ಸಿನಿಮಾ ಹಿಟ್ ಎನಿಸಿಕೊಂಡಿದ್ದು, ಕತೂಹಲಕಾರಿ ಕತೆ ಹೊಂದಿದ್ದ ‘ಬೀರ್​ಬಲ್’ ಟಿವಿ ಹಾಗೂ ಒಟಿಟಿಗಳಲ್ಲಿಯೂ ಗಮನ ಸೆಳೆದಿತ್ತು. ಹಾಗಾಗಿ ಶ್ರೀನಿ, ‘ಬೀರ್​ಬಲ್ 2’ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇನ್ನು ‘ಘೋಸ್ಟ್’ ಸಿನಿಮಾದಲ್ಲಿ ದಳವಾಯಿ ಪಾತ್ರ ಸಖತ್ ಹೈಲೆಟ್ ಆಗಿದೆ. ಹಾಗಾಗಿ ಅದರದ್ದೇ ಸ್ಪಿನ್ ಆಫ್ ಮಾಡಲು ಶ್ರೀನಿ ಮುಂದಾಗಿದ್ದಾರೆ.

ಶಿವರಾಜ್ ಕುಮಾರ್ ಸಹ ಬಹಳ ಬ್ಯುಸಿಯಾಗಿದ್ದಾರೆ. ತಮಿಳಿನ ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಅದರ ಜೊತೆಗೆ ‘ಭೈರತಿ ರಣಗಲ್’, ‘ಕರಟಕ ದಮನಕ’, ‘ಕಬ್ಜ 2’, ಅರ್ಜುನ್ ಜನ್ಯ ನಿರ್ದೇಶನದ 45 ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಈ ಸಿನಿಮಾಗಳೆಲ್ಲ ಮುಗಿದ ಬಳಿಕವಷ್ಟೆ ‘ಘೋಸ್ಟ್ 2’ ಗೆ ಡೇಟ್ಸ್ ನೀಡಲಿದ್ದಾರೆ ಶಿವಣ್ಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ