ಮೆಚ್ಚುಗೆ ಗಳಿಸುತ್ತಿದೆ ‘ಫೈರ್ ಫ್ಲೈ’ ಸಿನಿಮಾ ಟ್ರೇಲರ್, ಗೆಲ್ಲುವ ಭರವಸೆಯಲ್ಲಿ ನಿವೇದಿತಾ
Fire Fly movie: ಶಿವರಾಜ್ ಕುಮಾರ್ ಅವರ ಕಿರಿಯ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರು ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರ ನಿರ್ಮಾಣದ ಮೊದಲ ಸಿನಿಮಾ ‘ಫೈರ್ ಫ್ಲೈ’ ಏಪ್ರಿಲ್ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಮೆಚ್ಚುಗೆ ಗಳಿಸಿದೆ.

ಶಿವರಾಜ್ ಕುಮಾರ್ (Shiva Rajkumar) ಪುತ್ರಿ ನಿವೇದಿತಾ ಈಗ ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ಈ ಹಿಂದೆ ಅವರು ಕಿರು ವೆಬ್ ಸರಣಿಯೊಂದನ್ನು ಸಹ ನಿರ್ಮಾಣ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಹೆಸರು ‘ಫೈರ್ ಫ್ಲೈ’. ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಶಿವಣ್ಣ ಸಹ ಮಗಳ ಸಿನಿಮಾನಲ್ಲಿ ಸಣ್ಣ ಆದರೆ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಈಗಾಗಲೇ ಟ್ರೇಲರ್ ಮತ್ತು ಹಾಡಿನ ಮೂಲಕ ಗಮನ ಸೆಳೆದಿರುವ ‘ಫೈರ್ ಪ್ಲೈ’ ಸಿನಿಮಾ ಡಾ ರಾಜ್ಕುಮಾರ್ ಅವರ ಹುಟ್ಟುಹಬ್ಬದಂದು ಅಂದರೆ ಏಪ್ರಿಲ್ 24ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ನಿರ್ಮಾಪಕಿ ನಿವೇದಿತಾ ಜೋರಾಗಿ ಮಾಡುತ್ತಿದ್ದಾರೆ. ಅವರಿಗೆ ತಂದೆ ಶಿವರಾಜ್ ಕುಮಾರ್ ಮತ್ತು ತಾಯಿ ಗೀತಾ ಶಿವರಾಜ್ ಕುಮಾರ್ ಸಹ ನೆರವಾಗಿದ್ದಾರೆ.
ಮಗಳ ಮಗಳು ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ಸಿನಿಮಾದ ಒಂದು ಪಾತ್ರದಲ್ಲಿ ನಾನು ನಟಿಸಿದ್ದೇನೆ. ನನ್ನನ್ನು ಇನ್ನಷ್ಟು ಯಂಗ್ ಆಗಿ ತೋರಿಸಿದ್ದಾರೆ. ಸಿನಿಮಾದ ಕತೆ ನಾನು ಕೇಳಿದ್ದೆ, ಬಹಳ ಭಿನ್ನವಾದ, ಮನಸ್ಸಿಗೆ ಹಿಡಿಸುವ ಕತೆ ಹೊಂದಿದೆ. ಆಕ್ಷನ್ ಸಿನಿಮಾ, ಲವ್ ಸ್ಟೋರಿ ಸಿನಿಮಾಗಳನ್ನು ಮಾಡಬಹುದು ಆದರೆ ‘ಫೈರ್ ಫ್ಲೈ’ ಮೌಲ್ಯ ಹೊಂದಿರುವ ಸಿನಿಮಾ, ಇಂಥಹಾ ಸಿನಿಮಾ ಮಾಡುವುದು ಕಷ್ಟ. ನಿರ್ದೇಶಕ ವಂಶಿ ಒಳ್ಳೆ ಕಥೆ ಮಾಡಿದ್ದಾರೆ. ಒಳ್ಳೆ ತಂಡ ಚಿತ್ರಕ್ಕೆ ಕೆಲಸ ಮಾಡಿದೆ. ಚರಣ್ ರಾಜ್ ಸಂಗೀತ ಬಹಳ ಚೆನ್ನಾಗಿದೆ’ ಎಂದಿದ್ದಾರೆ ಶಿವರಾಜ್ ಕುಮಾರ್.
ಇದನ್ನೂ ಓದಿ:ಅಪ್ಪನಿಂದ ಬಹಳ ಕಲಿತಿದ್ದೇನೆ ಎನ್ನುತ್ತಾರೆ ‘ಫೈರ್ ಫ್ಲೈ’ ಚಿತ್ರದ ನಿರ್ಮಾಪಕಿ ನಿವೇದಿತಾ ಶಿವರಾಜ್ಕುಮಾರ್
ನಿವೇದಿತಾ ಅವರ ತಾಯಿ, ಸ್ವತಃ ನಿರ್ಮಾಪಕಿಯೂ ಆಗಿರುವ ಗೀತಾ ಶಿವರಾಜ್ ಕುಮಾರ್ ಸಹ ಮಗಳ ಮೊದಲ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ. ಹೊಸ ತಂಡ ಹೊಸ ಪ್ರಯತ್ನ ಮಾಡಿದೆ. ಎಲ್ಲರೂ ಇದಕ್ಕೆ ಪ್ರೋತ್ಸಾಹ ಕೊಡಬೇಕು. ಈ ಚಿತ್ರವನ್ನು ಕುಮಾರ್ ಅವರು ಡಿಸ್ಟ್ರೀಬ್ಯೂಟ್ ಮಾಡುತ್ತಿದ್ದಾರೆ. ಅದಕ್ಕೆ ತುಂಬಾ ಧನ್ಯವಾದ. ವಂಶಿ ಹೇಳಿದ ಕಥೆ ಎಲ್ಲರಿಗೂ ಇಷ್ಟವಾಯ್ತು, ಹಾಗಾಗಿ ಸಿನಿಮಾ ಇಲ್ಲಿಯವರೆಗೆ ಬಂದು ನಿಂತಿದೆ’ ಎಂದಿದ್ದಾರೆ.
‘ಫೈರ್ ಫ್ಲೈ’ ಸಿನಿಮಾದಲ್ಲಿ ವಂಶಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ, ನಿರ್ದೇಶನವೂ ಅವರದ್ದೇ. ಇದು ಅವರ ಮೊದಲ ಪ್ರಯತ್ನ. ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. ಜಯ್ ರಾಮ್ ಚಿತ್ರದ ಸಹ-ನಿರ್ದೇಶಕ. ಅಭಿಲಾಷ್ ಕಳತ್ತಿ ಅವರ ಕ್ಯಾಮರಾ ವರ್ಕ್, ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಚಿತ್ರಕ್ಕಿದೆ. ಸಿನಿಮಾ ಏಪ್ರಿಲ್ 24ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ