20ನೇ ವಯಸ್ಸಿಗೆ ಮದುವೆ, ಮೂರೇ ತಿಂಗಳಿಗೆ ವೈಮನಸ್ಸು; ಸೋನು ಗೌಡ ಕಷ್ಟದ ಜರ್ನಿ
ಸೋನು ಗೌಡ ಅವರು 20ನೇ ವಯಸ್ಸಿನಲ್ಲಿ ಮದುವೆಯಾಗಿ ಕನ್ನಡ ಚಿತ್ರರಂಗಕ್ಕೆ ವಿದಾಯ ಹೇಳಿದರು. ಆದರೆ, ಮದುವೆಯಾದ ಮೂರು ತಿಂಗಳಲ್ಲೇ ದಂಪತಿಗಳ ನಡುವೆ ವೈಮನಸ್ಸು ಉಂಟಾಯಿತು. ಏಳು ವರ್ಷಗಳ ಕಾಲ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ, ಅಂತಿಮವಾಗಿ ವಿಚ್ಛೇದನ ಪಡೆದರು. ಆ ಬಗ್ಗೆ ಇಲ್ಲಿದೆ ವಿವರ.

ಸೋನು ಗೌಡ (Sonu Gowda) ಅವರು ಕನ್ನಡದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಈಗಲೂ ಬೇಡಿಕೆ ಇದೆ. 20 ವರ್ಷಕ್ಕೆ ಮದುವೆ ಆಗಿ ಅವರು ಚಿತ್ರರಂಗ ತೊರೆದಿದ್ದರು. ಆದರೆ, ಮದುವೆ ಆಗಿ 3 ತಿಂಗಳಿಗೆ ಎಲ್ಲವೂ ಬದಲಾಗಿ ಹೋಯಿತು. ಈ ಅವಧಿಯಲ್ಲಿ ಇಬ್ಬರ ಮಧ್ಯೆ ವೈಮನಸ್ಸು ಮೂಡಿತು. ಆದರೂ ಬರೋಬ್ಬರಿ 7 ವರ್ಷಗಳ ಕಾಲ ಸೋನು ಗೌಡ ಅವರು ಸಂಸಾರ ಸರಿ ಮಾಡುವ ಪ್ರಯತ್ನ ಮಾಡಿದರು. ಆದರೆ, ಸರಿ ಆಗಲೇ ಇಲ್ಲ. ಕೊನೆಗೆ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು.
ಸೋನು ಗೌಡ ಅವರು 2008ರಲ್ಲಿ ಬಂದ ‘ಇಂತಿ ನಿನ್ನ ಪ್ರೀತಿಯ’ ಚಿತ್ರದಲ್ಲಿ ನಟಿಸಿದರು. ಶ್ರೀನಗರ ಕಿಟ್ಟಿ ನಟನೆಯ ಈ ಚಿತ್ರಕ್ಕೆ ದುನಿಯಾ ಸೂರಿ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರ ಯಶಸ್ಸು ಕಂಡಿತು. ಮೊದಲ ಚಿತ್ರದಲ್ಲೇ ಸೋನು ಗೌಡ ಎಲ್ಲರ ಗಮನ ಸೆಳೆದರು. ಅವರು ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದರು. ಆದರೆ, ಕೆಲವೇ ಸಮಯದಲ್ಲಿ ಅವರು ಒಂದು ದಿಟ್ಟ ನಿರ್ಧಾರ ತೆಗೆದುಕೊಂಡರು. ಈ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
20ನೇ ವಯಸ್ಸಿಗೆ ಸೋನು ಗೌಡ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದರು. ತಾವು ಪ್ರೀತಿಸಿದ ಹುಡುಗನ ಜೊತೆ ಮದುವೆ ಆದರು. ‘ಪ್ರೀತಿಸಿದ ಹುಡುಗ ನನ್ನನ್ನು ನೋಡಿಕೊಳ್ಳುತ್ತಾನೆ ಎಂದು ಮದುವೆ ಬಳಿಕ ನಾನು ಬಣ್ಣದ ಲೋಕದಿಂದಲೂ ದೂರ ಆಗಲು ಮುಂದಾದೆ’ ಎಂದು ಸೋನು ಗೌಡ ಹೇಳಿಕೊಂಡಿದ್ದಾರೆ. ಆದರೆ, ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಮದುವೆ ಆದ ಮೂರೇ ತಿಂಗಳಿಗೆ ಎಲ್ಲವೂ ಬದಲಾಯಿತು. ಇಬ್ಬರ ಮಧ್ಯೆ ವೈಮನಸ್ಸು ಹೆಚ್ಚಿತು.
ಪತಿ ಯಾವುದೇ ಕೆಲಸ ಮಾಡೋದಿಲ್ಲ ಎಂಬುದು ಸೋನು ಗೌಡ ಅವರ ದೂರಾಗಿತ್ತು. ಕೆಲಸ ಮಾಡುವ ಬಗ್ಗೆ ಆಸಕ್ತಿಯನ್ನೂ ಅವರು ತೋರಿಸುತ್ತಾ ಇರಲಿಲ್ಲ. ಕೊನೆಗೆ ಸೋನು ಗೌಡ ಅವರು ಚೆನ್ನೈಗೆ ತೆರಳಿ ಜಾಹೀರಾತು ಶೂಟ್ಗಳನ್ನು ಮಾಡೋಕೆ ಆರಂಭಿಸಿದರು. ಆ ಸಂದರ್ಭದಲ್ಲಿ ಸೋನು ಅವರ ಡೆಬಿಟ್ ಕಾರ್ಡ್ ಇದ್ದಿದ್ದು ಅವರ ಪತಿ ಕೈಯಲ್ಲಿ! ಏನೇ ಆದರೂ ಸೋನು ಗೌಡ ಎಲ್ಲವನ್ನೂ ಸಹಿಸಿಕೊಳ್ಳುತ್ತಾ ಬಂದರು.
ಇದನ್ನೂ ಓದಿ: ಸೂಪರ್ ಸೋನು.. ಸೀರೆ ಫೋಟೋ ನೋಡಿ ಸೋನು ಗೌಡ ಫ್ಯಾನ್ಸ್ ಕಮೆಂಟ್
ಆದರೆ, ಮದುವೆ ಆಗಿ ಏಳು ವರ್ಷಗಳ ಬಳಿಕ ಖಾಸಗಿ ಫೋಟೋ ಲೋಕ್ ಆಗಿ ವಿವಾದ ಆಯಿತು. ಈ ಘಟನೆ ಸೋನುನ ಕಂಗಾಲು ಮಾಡಿತು. ಈ ವಿವಾದ ಮಾಡಿದ್ದು ಸೋನು ಅವರ ಪತಿ ಎಂಬ ಆರೋಪ ಬಂತು. ಈ ಘಟನೆ ಇವರ ಸಂಬಂಧವನ್ನು ಮತ್ತಷ್ಟು ಹದಗೆಡಿಸಿತು. ಆ ಬಳಿಕ ಇವರಿಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.