
ಚಿತ್ರದುರ್ಗದಲ್ಲಿ ನಡೆದ ರಾಜ ವೀರಮದಕರಿ ನಾಯಕ ಜಯಂತೋತ್ಸವದ ವೇಳೆ ನಟ ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ಕುರಿತು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಪಟ್ಟಣದಲ್ಲಿ ಈ ಕುರಿತು ಮಾತನಾಡಿದ ಬಿಜೆಪಿಯ ಮಾಜಿ ಸಚಿವ ರಾಜುಗೌಡ ಅವರು, ಉಗ್ರಪ್ಪ ಅವರ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ತಾವು ಮತ್ತು ನಟ ಸುದೀಪ್ ಇಲ್ಲದ ಸಂದರ್ಭದಲ್ಲಿ ಉಗ್ರಪ್ಪ ಅವರು ಉಗ್ರಾವತಾರ ತೋರಿಸಿದ್ದಾರೆ ಎಂದು ರಾಜುಗೌಡ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ಗೂಡ್ಫಾದರ್ ಇಲ್ಲದೆ ತಮ್ಮ ಕಠಿಣ ಪರಿಶ್ರಮದಿಂದಲೇ 33 ವರ್ಷಗಳ ಕಾಲ ನಟನೆಯಲ್ಲಿ ಬೆಳೆದು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಮೇರು ನಟ ಸುದೀಪ್ ಅವರಿಗೆ ಉಗ್ರಪ್ಪ ಅವಮಾನ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ ವೀರಮದಕರಿ ನಾಯಕ ಜಯಂತಿಗೆ ಸುದೀಪ್ ಬಂದರೆ ತಪ್ಪೇನು ಎಂದು ಪ್ರಶ್ನಿಸಿದ ಅವರು, ಕಲಾವಿದನಿಗೆ ಯಾವುದೇ ಜಾತಿ ಇರುವುದಿಲ್ಲ ಎಂದರು.
ಸುದೀಪ್ ಅವರ ಹೆಲಿಕಾಪ್ಟರ್ ಬರೋದು ನೋಡಿ ಉಗ್ರಪ್ಪ ಅವರಿಗೆ ಹೊಟ್ಟೆಕಿಚ್ಚಾಗಿದೆ ಎಂದು ಕಿಡಿಕಾರಿದ ರಾಜುಗೌಡ, ರಾಜಕೀಯವಾಗಿ ತಮ್ಮ ಅಥವಾ ಶ್ರೀರಾಮುಲು ಅವರ ಬಗ್ಗೆ ಮಾತನಾಡಲಿ, ಆದರೆ ನಟರ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಹಾಗೂ ಅವಮಾನಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು. ಮೀಸಲಾತಿ ರದ್ದಾದಾಗ ಹೈಕೋರ್ಟ್ನಲ್ಲಿ ವಾದ ಮಾಡದ ಕಾಂಗ್ರೆಸ್ಗೆ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ‘ನಾಯಕನ ಮಗನಾಗಿದ್ದರೆ ಮೀಸಲಾತಿ ಹೋರಾಟಕ್ಕೆ ಬನ್ನಿ ಮಿಸ್ಟರ್ ಸುದೀಪ್’; ಮಾಜಿ ಸಂಸದ ಉಗ್ರಪ್ಪ ಸವಾಲು
ಮುಂದುವರಿದು ಮಾತನಾಡುತ್ತಾ, ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಈ ರೀತಿ ಅವಮಾನ ಮಾಡಿದರೆ ಮುಂದೆ ಯಾರಾದರೂ ಬರುತ್ತಾರಾ ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ಅಭಿಮಾನಿಗಳು ಆಕ್ರೋಶಗೊಂಡರೆ ಅದಕ್ಕೆ ಯಾರು ಹೊಣೆ ಎಂದು ಎಚ್ಚರಿಸಿದರು. ಉಗ್ರಪ್ಪ ಅವರು ಎಂಎಲ್ಸಿ ಸ್ಥಾನಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ರಾಜುಗೌಡ, ಸಮಾಜ ಹಾಗೂ ರಾಜ್ಯದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುವುದನ್ನು ಬಿಟ್ಟು, ಕೂಡಲೇ ನಟ ಸುದೀಪ್ಗೆ ವಿ.ಎಸ್. ಉಗ್ರಪ್ಪ ಅವರು ಬೇಷರತ್ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.