‘ನಾಯಕನ ಮಗನಾಗಿದ್ದರೆ ಮೀಸಲಾತಿ ಹೋರಾಟಕ್ಕೆ ಬನ್ನಿ ಮಿಸ್ಟರ್ ಸುದೀಪ್’; ಮಾಜಿ ಸಂಸದ ಉಗ್ರಪ್ಪ ಸವಾಲು
ಚಿತ್ರದುರ್ಗದಲ್ಲಿ ನಡೆದ ಮದಕರಿ ನಾಯಕ ಜಯಂತೋತ್ಸವದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳ ಕೇಕೆ ಹಾಗೂ ಘೋಷಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ನಟರ ಹೆಸರಿಗೆ ಜೈಕಾರ ಹಾಕಿಸಿಕೊಳ್ಳುವುದಲ್ಲದೆ, ಮೀಸಲಾತಿ ಹೆಚ್ಚಳದಂತಹ ಹೋರಾಟಗಳಿಗೆ ಧೈರ್ಯವಿದ್ದರೆ ಬನ್ನಿ ಎಂದು ಸುದೀಪ್ ಅವರಿಗೆ ಉಗ್ರಪ್ಪ ಸವಾಲು ಹಾಕಿದ್ದಾರೆ.

ಮುಖ್ಯಾಂಶಗಳು
- ಚಿತ್ರದುರ್ಗದಲ್ಲಿ ಮದಕರಿ ನಾಯಕ ಜಯಂತಿ
- ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ ಕಿಚ್ಚ ಸುದೀಪ್
- ವೇದಿಕೆಯಲ್ಲಿ ಅಭಿಮಾನಿಗಳ ಅತಿರೇಕದ ಸಡಗರ
ಕೋಟೆನಾಡು ಚಿತ್ರದುರ್ಗದಲ್ಲಿ ಮಂಗಳವಾರ ಅದ್ಧೂರಿಯಾಗಿ ನಡೆದ ನಾಡಪ್ರಭು ರಾಜವೀರ ಮದಕರಿ ನಾಯಕ ಜಯಂತೋತ್ಸವವು ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಟ ಕಿಚ್ಚ ಸುದೀಪ್ ಆಗಮಿಸಿದ್ದರು.ಈ ವೇಳೆ ಅಭಿಮಾನಿಗಳು ಸೃಷ್ಟಿಸಿದ ಗದ್ದಲ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರ ಕೋಪಕ್ಕೆ ಕಾರಣ ಆಗಿದೆ.
ಉಗ್ರಪ್ಪ ಅವರು ಭಾಷಣ ಮಾಡುತ್ತಿದ್ದ ವೇಳೆ ಅಭಿಮಾನಿಗಳು ‘ಕಿಚ್ಚ, ಕಿಚ್ಚ’ ಎಂದು ಜೋರಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಅಭಿಮಾನಿಗಳ ಈ ನೂಕುನುಗ್ಗಲು ಮತ್ತು ಕೇಕೆ-ಘೋಷಣೆಗಳು ಮುಂದುವರಿದಾಗ ಸಭೆಯ ಗಂಭೀರತೆಗೆ ಧಕ್ಕೆಯುಂಟಾಯಿತು.
ಈ ಬೆಳವಣಿಗೆಯಿಂದ ತೀವ್ರ ಅಸಮಾಧಾನಗೊಂಡ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವೇದಿಕೆಯಿಂದಲೇ ಕಟುವಾಗಿ ಕಿಡಿಕಾರಿದರು. ‘ನಾಯಕರು ಎಂದು ಹೇಳಿಕೊಂಡು ಕೇಕೆ ಹಾಕಿಸಿಕೊಳ್ಳೋದಲ್ಲ. ನಾಯಕರ ಮಗನಾಗಿದ್ದರೆ ಹೋರಾಟಕ್ಕೆ ಬನ್ನಿ ಮಿಸ್ಟರ್ ಸುದೀಪ್. ಮೀಸಲಾತಿ ಹೆಚ್ಚಳದ ಹೋರಾಟಕ್ಕೆ ಬನ್ನಿ. 56 ಪರ್ಸೆಂಟ್ ಮೀಸಲಾತಿ ಬೇಕು. ಅದಕ್ಕಾಗಿ ಕೇಕೆ ಹಾಕಬೇಕು. ದಮ್ಮು ತಾಕತ್ತು ಇದ್ರೆ ಅದಕ್ಕಾಗಿ ಹೋರಾಡಬೇಕು’ ಎಂದು ವೇದಿಕೆ ಮೇಲೆಯೇ ಸವಾಲು ಹಾಕಿದರು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಹೆಲಿಕಾಪ್ಟರ್ ಇಳಿದು ಚಪ್ಪಲಿ ಧರಿಸದೇ ನಡೆದುಬಂದ ನಟ
ಮದಕರಿ ನಾಯಕನ ಜಯಂತಿಯಂತಹ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವದ ವೇದಿಕೆಯಲ್ಲಿ ನಟನ ಮೇಲೆ ರಾಜಕಾರಣಿಯೊಬ್ಬರ ಆಕ್ರೋಶದ ನುಡಿಗಳು ಸದ್ಯ ರಾಜ್ಯ ರಾಜಕಾರಣದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




