ಇಂದು (ಆಗಸ್ಟ್ 31) ಎಲ್ಲೆಡೆ ಗಣೇಶ ಚತುರ್ಥಿ (Ganesh Chaturthi) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆಗಳನ್ನು ವಿಶೇಷವಾಗಿ ಸಿಂಗರಿಸಲಾಗುತ್ತಿದೆ. ಹಬ್ಬಗಳು ಬಂತೆಂದರೆ ಸಿನಿಪ್ರಿಯರ ಪಾಲಿಗೆ ಖುಷಿಯೋ ಖುಷಿ. ಬಹುತೇಕ ಚಿತ್ರತಂಡಗಳು ಈ ವಿಶೇಷ ದಿನದಂದು ತಮ್ಮ ಚಿತ್ರಗಳ ಬಗ್ಗೆ ಹೊಸಹೊಸ ಅಪ್ಡೇಟ್ ನೀಡುತ್ತವೆ. ಪೋಸ್ಟರ್ ರಿಲೀಸ್ ಮಾಡಿ ಹಬ್ಬಕ್ಕೆ ಶುಭ ಕೋರುತ್ತಾರೆ. ಗಣೇಶ ಚತುರ್ಥಿಯಂದು ಈ ಸಂಪ್ರದಾಯ ಮುಂದುವರಿದಿದೆ. ಅನೇಕ ಸಿನಿಮಾ ತಂಡಗಳು ಹೊಸ ಪೋಸ್ಟರ್ ರಿಲೀಸ್ ಮಾಡಿವೆ. ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ತಂಡದವರೂ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಹೊಸ ಹೊಸ ಆಲೋಚನೆಗಳೊಂದಿಗೆ ಪ್ರೇಕ್ಷಕರ ಎದುರು ಬರುವ ಉದ್ದೇಶ ಇಟ್ಟುಕೊಂಡಿದ್ದರು. ‘ಪಿಆರ್ಕೆ ಪ್ರೊಡಕ್ಷನ್ಸ್’ ಸ್ಥಾಪಿಸಿ ಹೊಸಬರಿಗೆ ಅವಕಾಶ ನೀಡುವ ಕೆಲಸವೂ ನಡೆಯುತ್ತಿತ್ತು. ಇದೇ ನಿರ್ಮಾಣ ಸಂಸ್ಥೆ ಅಡಿಯಲ್ಲಿ ‘ಗಂಧದ ಗುಡಿ’ ಸಾಕ್ಷ್ಯ ಚಿತ್ರ ನಿರ್ಮಾಣ ಆಗುತ್ತಿತ್ತು. ಇದರ ಕೆಲಸಗಳು ಬಾಕಿ ಇರುವಾಗಲೇ ಅವರು ಇಹಲೋಕ ತ್ಯಜಿಸಿದರು. ಈಗ ಈ ಡಾಕ್ಯುಮೆಂಟರಿ ರಿಲೀಸ್ಗೆ ರೆಡಿ ಇದೆ.
ಗಣೇಶ ಚತುರ್ಥಿ ಅಂಗವಾಗಿ ‘ಗಂಧದ ಗುಡಿ’ಯ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪುನೀತ್ ಅವರು ಆನೆಯ ಜತೆ ನಿಂತಿದ್ದಾರೆ. ‘ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬದ ಸಂದರ್ಭದಲ್ಲಿ, ಭಗವಂತನು ನಿಮಗೆಲ್ಲರಿಗೂ ಸುಖ ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ’ ಎಂದು ಈ ಪೋಸ್ಟರ್ಗೆ ಕ್ಯಾಪ್ಶನ್ ನೀಡಲಾಗಿದೆ.
2021ರ ಅಕ್ಟೋಬರ್ 29ರಂದು ಅಪ್ಪು ನಿಧನ ಹೊಂದಿದರು. ಈ ಕಾರಣಕ್ಕೆ ಈ ವರ್ಷ ಅಕ್ಟೋಬರ್ 28ರಂದು ‘ಗಂಧದ ಗುಡಿ’ಯನ್ನು ರಿಲೀಸ್ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಡಾಕ್ಯುಮೆಂಟರಿಗಳು ಒಟಿಟಿ ಹಾಗೂ ಯೂಟ್ಯೂಬ್ಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ‘ಗಂಧದ ಗುಡಿ’ಯನ್ನು ಪುನೀತ್ ಅವರ ಆಸೆಯಂತೆ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಂದ ಉತ್ತಮ ಬೆಂಬಲ ಸಿಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಹೆಗಲಮೇಲೆ ಕೈ ಹಾಕಿ ನಿಂತ ಗಣಪ; ಮಣ್ಣಿನಲ್ಲಿ ಅರಳಿದ ಅಪ್ಪುಗೆ ಭಾರೀ ಬೇಡಿಕೆ
ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಈ ಹಬ್ಬದ ಸಂದರ್ಭದಲ್ಲಿ, ಭಗವಂತನು ನಿಮಗೆಲ್ಲರಿಗೂ ಸುಖ ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
Happy Gowri Ganesha Habba.
Wishing everyone prosperity, happiness, good health and peace on the festive occasion.#GGMovie pic.twitter.com/hPz7QeEEMp
— PRK Productions (@PRK_Productions) August 31, 2022
ಪುನೀತ್ ರಾಜ್ಕುಮಾರ್ ನಿಧನದ ನಂತರದಲ್ಲಿ ‘ಪಿಆರ್ಕೆ ಪ್ರೊಡಕ್ಷನ್’ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ವಹಿಸಿಕೊಂಡಿದ್ದಾರೆ. ಹೊಸಬರ ಸಿನಿಮಾಗೆ ಬೆಂಬಲ ನೀಡುವ ಕೆಲಸ ಕೂಡ ಮುಂದುವರೆದಿದೆ.
Published On - 2:45 pm, Wed, 31 August 22