‘ಯು/ಎ’ ಪ್ರಮಾಣಪತ್ರ ಪಡೆದ ‘ರವಿಕೆ ಪ್ರಸಂಗ’; ಫೆಬ್ರವರಿ 16ರಂದು ಸಿನಿಮಾ ಬಿಡುಗಡೆ

| Updated By: ರಾಜೇಶ್ ದುಗ್ಗುಮನೆ

Updated on: Feb 03, 2024 | 6:26 AM

ಒಂದು ಡಿಫರೆಂಟ್​ ಆದ ಕಥಾವಸ್ತುವನ್ನು ಕೇಂದ್ರವಾಗಿಟ್ಟುಕೊಂಡು ‘ರವಿಕೆ ಪ್ರಸಂಗ’ ಸಿನಿಮಾ ಸಿದ್ಧವಾಗಿದೆ. ಗೀತಾ ಭಾರತಿ ಭಟ್​, ಸಂಪತ್​ ಮೈತ್ರೇಯ, ಸುಮನ್​ ರಂಗನಾಥ್​, ಪದ್ಮಜಾ ರಾವ್​, ರಾಕೇಶ್​ ಮಯ್ಯ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡು ಮತ್ತು ಟ್ರೇಲರ್​ ಗಮನ ಸೆಳೆದಿದೆ. ಫೆ.16ರಂದು ರಾಜ್ಯದ್ಯಂತ ‘ರವಿಕೆ ಪ್ರಸಂಗ’ ಬಿಡುಗಡೆ ಆಗಲಿದೆ.

‘ಯು/ಎ’ ಪ್ರಮಾಣಪತ್ರ ಪಡೆದ ‘ರವಿಕೆ ಪ್ರಸಂಗ’; ಫೆಬ್ರವರಿ 16ರಂದು ಸಿನಿಮಾ ಬಿಡುಗಡೆ
ಗೀತಾ ಭಾರತಿ ಭಟ್
Follow us on

ಸಂತೋಷ್ ಕೊಡೆಂಕೇರಿ ಅವರು ನಿರ್ದೇಶನ ಮಾಡಿರುವ ರವಿಕೆ ಪ್ರಸಂಗ’ (Ravike Prasanga) ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಸೆನ್ಸಾರ್​ ಮಂಡಳಿ ಸದಸ್ಯರು ಈ ಚಿತ್ರವನ್ನು ವೀಕ್ಷಿಸಿ ‘ಯು/ಎ’ ಪ್ರಮಾಣಪತ್ರ (Censor Certificate) ನೀಡಿದ್ದಾರೆ. ‘ದೃಷ್ಟಿ ಮೀಡಿಯಾ ಪ್ರೊಡಕ್ಷನ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಈ ಹಿಂದೆ ಅನಾವರಣ ಆಗಿದ್ದ ‘ರವಿಕೆ ಪ್ರಸಂಗ’ ಟ್ರೇಲರ್​ಗೆ ಜನಮೆಚ್ಚುಗೆ ಸಿಕ್ಕಿತ್ತು. ಪೂರ್ತಿ ಸಿನಿಮಾ ನೋಡಬೇಕು ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರಮಂದಿರದಲ್ಲಿ ‘ರವಿಕೆ ಪ್ರಸಂಗ’ ಸಿನಿಮಾ ತೆರೆಕಾಣಲಿದೆ. ಫೆಬ್ರವರಿ 16ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಗೀತಾ ಭಾರತಿ ಭಟ್ (Geetha Bharathi Bhat) ನಟಿಸಿದ್ದಾರೆ.

ಕನ್ನಡದ ಅನೇಕ ಸಿನಿಮಾಗಳು ಡಿಫರೆಂಟ್​ ಆದ ಟೈಟಲ್​ಗಳ ಮೂಲಕ ಗಮನ ಸೆಳೆದಿವೆ. ‘ರವಿಕೆ ಪ್ರಸಂಗ’ ಸಿನಿಮಾ ಕೂಡ ಅದೇ ಸಾಲಿಗೆ ಸೇರಿದೆ. ಶೂಟಿಂಗ್​ ಮುಗಿಸಿಕೊಂಡು, ಟೀಸ‌ರ್ ಮತ್ತು ಟ್ರೇಲರ್​ ಮೂಲಕ ಕೌತುಕ ಮೂಡಿಸಿರುವ ಈ ಸಿನಿಮಾ ಈಗ ಬಿಡುಗಡೆ ಸಜ್ಜಾಗಿದೆ. ಈ ಚಿತ್ರದಲ್ಲಿ ರವಿಕೆ ಅಂದರೆ ಬ್ಲೌಸ್​ ಪ್ರಮುಖ ಕಥಾವಸ್ತು! ಕೌಟುಂಬಿಕ ಕಥಾಹಂದರ ಇರುವಂತಹ ಈ ಸಿನಿಮಾವನ್ನು ಹಾಸ್ಯಭರಿತವಾಗಿ ಕಟ್ಟಿಕೊಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮನರಂಜನೆಯ ಜೊತೆಗೆ ಉತ್ತಮವಾದ ಒಂದು ಸಂದೇಶ ಕೂಡ ಈ ಸಿನಿಮಾದಲ್ಲಿ ಇರಲಿದೆ.

ಇದನ್ನೂ ಓದಿ: ‘ಬ್ಲೌಸ್​ ಬಗ್ಗೆ ಸಿನಿಮಾ ಅಂದ್ರೆ ಅಸಹ್ಯ ಅಲ್ಲ’; ‘ರವಿಕೆ ಪ್ರಸಂಗ’ ಚಿತ್ರದ ಬಗ್ಗೆ ಗೀತಾ ಭಾರತಿ ಭಟ್​ ಮಾತು

ಈ ಸಿನಿಮಾದಲ್ಲಿನ ರವಿಕೆ ಹಾಡನ್ನು ಚೈತ್ರಾ ಮತ್ತು ಚೇತನ್ ನಾಯಕ್ ಹಾಡಿದ್ದಾರೆ. ‘ಮನಸಲಿ ಜೋರು ಕಲರವ..’ ಹಾಡಿಗೆ ಮಾನಸ ಹೊಳ್ಳ ಧ್ವನಿಯಾಗಿದ್ದಾರೆ. ‘ಹಸಿಮನಸಲಿ..’ ಗೀತೆಯನ್ನು ಜೋಗಿ ಸುನೀತಾ ಹಾಡಿದ್ದಾರೆ. ನಾಯಕಿ ಗೀತಾ ಭಾರತಿ ಭಟ್ ಅವರು ಉತ್ತಮ ಅಭಿನಯದ ಜೊತೆಗೆ ಸಖತ್​​ ಆಗಿ ಡ್ಯಾನ್ಸ್​ ಕೂಡ ಮಾಡಿದ್ದಾರೆ. ‘ಮಾರ್ಸ್​ ಡಿಸ್ಟ್ರಿಬ್ಯುಟರ್ಸ್’ ಮೂಲಕ ಈ ಸಿನಿಮಾ ಬಿಡುಗಡೆ ಆಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತ ಶೂಟಿಂಗ್​ ಮಾಡಲಾಗಿದೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ, ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: ‘ರವಿಕೆ ಪ್ರಸಂಗ’ ಚಿತ್ರದ ಹಾಡು ಕೇಳಿದ್ರಾ? ಹೆಣ್ಮಕ್ಕಳಿಗೆ ಇಷ್ಟ ಆಗಲಿದೆ ಈ ಸಿನಿಮಾ

ವಿದೇಶದಲ್ಲೂ ‘ರವಿಕೆ ಪ್ರಸಂಗ’ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಪ್ರತಿಯೊಬ್ಬ ಮಹಿಳೆಗೂ ಕನೆಕ್ಟ್​ ಆಗುವಂತ ಕಥೆ ಈ ಸಿನಿಮಾದಲ್ಲಿ ಇದೆ. ಮಹಿಳೆಯರಿಗೆ ಸೀರೆ ಅಂದರೆ ಇಷ್ಟ. ಸೀರೆ ರೀತಿ ಬ್ಲೌಸ್ ಕೂಡ ಚೆನ್ನಾಗಿರಬೇಕು. ಅದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ರವಿಕೆ ಹೊಲಿಸಲಾಗುತ್ತದೆ. ರವಿಕೆ ಪರ್ಫೆಕ್ಟ್ ಆಗಿ ಇರಬೇಕು ಎಂದು ಹೆಣ್ಮಕ್ಕಳು ಭಾರಿ ಕಾಳಜಿ ವಹಿಸುತ್ತಾರೆ. ಇಂಥ ಒಂದು ವಿಷಯವನ್ನು ಕಾಮಿಡಿ ಶೈಲಿಯಲ್ಲಿ ಹೇಳಲು ಪ್ರಯತ್ನಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:16 pm, Fri, 2 February 24