ಆನೆಗುಡ್ಡೆ ಗಣಪತಿ ಸನ್ನಿಧಿಯಲ್ಲಿ ‘ಗಾಡ್​ ಪ್ರಾಮಿಸ್​’ ಚಿತ್ರಕ್ಕೆ ನೆರವೇರಿತು ಮುಹೂರ್ತ

|

Updated on: May 10, 2024 | 4:29 PM

ಸೂಚನ್​ ಶೆಟ್ಟಿ ನಟನೆ, ನಿರ್ದೇಶನದ ‘ಗಾಡ್​ ಪ್ರಾಮಿಸ್​’ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ‘ಮೈತ್ರಿ ಪ್ರೊಡಕ್ಷನ್’ ಮೂಲಕ ಮಂಜುನಾಥ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಈ ಸಿನಿಮಾಗೆ ಗುರುಪ್ರಸಾದ್ ನರ್ನಾಡ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಭರತ್ ಮಧುಸೂದನ್ ಅವರ ಸಂಗೀತ, ನವೀನ್ ಶೆಟ್ಟಿ ಅವರ ಸಂಕಲನ ಈ ಚಿತ್ರಕ್ಕೆ ಇರಲಿದೆ.

ಆನೆಗುಡ್ಡೆ ಗಣಪತಿ ಸನ್ನಿಧಿಯಲ್ಲಿ ‘ಗಾಡ್​ ಪ್ರಾಮಿಸ್​’ ಚಿತ್ರಕ್ಕೆ ನೆರವೇರಿತು ಮುಹೂರ್ತ
‘ಗಾಡ್​ ಪ್ರಾಮಿಸ್​’ ಸಿನಿಮಾದ ಮುಹೂರ್ತ ಸಮಾರಂಭ
Follow us on

‘ಕಾಂತಾರ’ ಸಿನಿಮಾದ ಮುಹೂರ್ತ ನಡೆದಿದ್ದ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲೇ ಈಗ ‘ಗಾಡ್ ಪ್ರಾಮಿಸ್’ (God Promise) ಸಿನಿಮಾಗೂ ಮುಹೂರ್ತ ಮಾಡಲಾಗಿದೆ. ಹೊಸ ನಿರ್ದೇಶಕ ಸೂಚನ್ ಶೆಟ್ಟಿ ಅವರು ನಟಿಸಿ, ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದೆ. ‘ಗಾಡ್ ಪ್ರಾಮಿಸ್’ ಚಿತ್ರದ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರದ ಆನೆಗುಡ್ಡೆ ಗಣಪತಿ ದೇವಾಲಯದಲ್ಲಿ (Anegudde Ganapathi Temple) ಮುಹೂರ್ತ ನಡೆದಿದ್ದು, ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ನಟ ಪ್ರಮೋದ್ ಶೆಟ್ಟಿ ಅವರು ಅತಿಥಿಗಳಾಗಿ ಬಂದು ವಿಶ್​ ಮಾಡಿದ್ದಾರೆ.

‘ಗಾಡ್ ಪ್ರಾಮಿಸ್​’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ ರವಿ ಬಸ್ರೂರು ಅವರು ಕ್ಲ್ಯಾಪ್ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ ಅವರು ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ದಾರೆ. ಈ ವೇಳೆ ಮಾತನಾಡಿದ ನಿರ್ದೇಶಕ ಸೂಚನ್ ಶೆಟ್ಟಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡರು. ‘ಕಳೆದ 6-7 ತಿಂಗಳಿಂದ ಈ ಸಿನಿಮಾಗೆ ಪ್ರೀ-ಪ್ರೊಡಕ್ಷನ್ ಕೆಲಸ ಆರಂಭ ಮಾಡಿದ್ದೆವು. ನಾನು 2015ರಿಂದಲೂ ರವಿ ಬಸ್ರೂರು ಅವರ ತಂಡದಲ್ಲಿ ಮಾಡುತ್ತಿದ್ದೇನೆ. ಈಗ ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ’ ಎಂದು ಅವರು ಹೇಳಿದರು.

‘ಕುಂದಾಪುರ ಸುತ್ತಮುತ್ತ ‘ಗಾಡ್​ ಪ್ರಾಮಿಸ್​’ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ. ಫ್ಯಾಮಿಲಿ ಡ್ರಾಮಾ ಶೈಲಿಯ ಕಥೆ ಈ ಸಿನಿಮಾದಲ್ಲಿದೆ. ಆಡಿಷನ್ ನಡೆಸಿ ಕಲಾವಿದರನ್ನು ಆಯ್ಕೆ ಮಾಡಿದ್ದೇವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ. ರವಿ ಸರ್ ನನಗೆ ಗುರುಗಳು. ನಿರ್ದೇಶನ ತಂಡದ ಜತೆಗೆ ‘ಕಟಕ’, ‘ಗಿರ್ಮಿಟ್’ ಚಿತ್ರಗಳ ಬರವಣಿಗೆಯಲ್ಲಿಯೂ ನಾನು ತೊಡಗಿಸಿಕೊಂಡಿದ್ದೆ. ಆ ಅನುಭವಗಳನನ್ನು ಇಟ್ಟುಕೊಂಡು ಈಗ ಡೈರೆಕ್ಷನ್​ ಆರಂಭಿಸಿದ್ದೇನೆ’ ಎಂದು ಸೂಚನ್​ ಶೆಟ್ಟಿ ಹೇಳಿದ್ದಾರೆ.

ಮುಹೂರ್ತಕ್ಕೆ ಮುಖ್ಯ ಅತಿಥಿಯಾಗಿ ಬಂದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಾತನಾಡಿ, ‘ಒಂದು ಸಿನಿಮಾ ಮಾಡೋದರಿಂದ ಎಷ್ಟೋ ಕಲಾವಿದರು ಮತ್ತು ತಂತ್ರಜ್ಞರ ಭವಿಷ್ಯ ನಿರ್ಧಾರ ಆಗುತ್ತದೆ. ನಮ್ಮ ಕರಾವಳಿಯವರಿಗೆ ಒಳ್ಳೆಯ ವೇದಕೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಜೊತೆ ಬಂದವರಿಗೆ ಎಲ್ಲ ವಿಭಾಗದ ಕೆಲಸ ಕಲಿಯಿರಿ ಅಂತ ನಾನು ಹೇಳುತ್ತೇನೆ. ಇದೇ ರೀತಿ ಎಲ್ಲರೂ ಎಲ್ಲ ವಿಭಾಗಗಳ ಕೆಲಸ ಕಲಿಯಿರಿ. ನಮ್ಮ ಭಾಗದಲ್ಲಿ ನೂರಾರು ಸಿನಿಮಾ ಬರಲಿ’ ಎಂದು ಅವರು ಹೇಳಿದರು.

ಇದನ್ನೂ ಓದಿ: ರೂಪೇಶ್​ ಶೆಟ್ಟಿ ನಟನೆಯ ‘ಅಧಿಪತ್ರ’ ಸಿನಿಮಾದ ಆಡಿಯೋ ಹಕ್ಕು ಪಡೆದ ಲಹರಿ ಸಂಸ್ಥೆ

‘ಸೂಚನ್ ಯಾವುದೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾನೆ. ನಟನೆ, ನಿರ್ದೇಶನ ಎರಡು ಒಟ್ಟಿಗೆ ಮಾಡುವುದರಿಂದ ಎಲ್ಲರೂ ಒಟ್ಟಿಗೆ ಸೇರಿ ಮುಂದುವರಿಯಿರಿ. ಇದು ಒಳ್ಳೆಯ ತಂಡವಾಗಿ ಹೊರಹೊಮ್ಮಲಿ. ಈ ಸಿನಿಮಾ ತುಂಬ ಚೆನ್ನಾಗಿ ಮೂಡಿಬರಲಿದೆ ಎಂಬ ಭರವಸೆ ಇದೆ. ಒಳ್ಳೆಯ ಬಜೆಟ್ ಸಹ ಇದೆ’ ಎಂದು ನಟ ಪ್ರಮೋದ್ ಶೆಟ್ಟಿ ಹೇಳಿದ್ದಾರೆ. ಈ ಮೊದಲು ‘ಹಫ್ತಾ’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಮೈತ್ರಿ ಮಂಜುನಾಥ್ ಅವರು ಈಗ ‘ಗಾಡ್​ ಪ್ರಾಮಿಸ್​’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದು ಅವರ ಎರಡನೇ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.