AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಹರೀಶ್ ರಾಯ್ ನಿಧನ: ಉಡುಪಿಯ ಅಂಬಲಪಾಡಿಯಲ್ಲಿ ನಡೆಯಲಿದೆ ಅಂತ್ಯಕ್ರಿಯೆ

ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ ಅವರು ಇಂದು (ನವೆಂಬರ್ 6) ಕ್ಯಾನ್ಸರ್​​ನಿಂದ ನಿಧನರಾಗಿದ್ದಾರೆ. ಅವರು ಮೂಲತಃ ಉಡುಪಿಯವರಾಗಿದ್ದು, ಉಡುಪಿಯ ಅಂಬಲಪಾಡಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು. ಬೆಂಗಳೂರಿನ ನಿವಾಸದಿಂದ ಮಧ್ಯಾಹ್ನದ ನಂತರ ಹರೀಶ್ ರಾಯ್ ಅವರ ಪಾರ್ಥಿವ ಶರೀರ ಉಡುಪಿಗೆ ರವಾನೆ ಆಗಲಿದೆ.

ನಟ ಹರೀಶ್ ರಾಯ್ ನಿಧನ: ಉಡುಪಿಯ ಅಂಬಲಪಾಡಿಯಲ್ಲಿ ನಡೆಯಲಿದೆ ಅಂತ್ಯಕ್ರಿಯೆ
Harish Roy
ಮದನ್​ ಕುಮಾರ್​
|

Updated on: Nov 06, 2025 | 3:02 PM

Share

ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಅಭಿನಯಿಸಿ ಖ್ಯಾತಿ ಗಳಿಸಿದ್ದ ಹರೀಶ್ ರಾಯ್ (Harish Roy) ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಇಂದು (ನವೆಂಬರ್ 6) ಕೊನೆಯುಸಿರು ಎಳೆದರು. ಹರೀಶ್ ರಾಯ್ ಅವರು ಕ್ಯಾನ್ಸರ್ (Cancer) ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಚಿತ್ರರಂಗದವರು ಸಹಾಯ ಮಾಡಿದ್ದರು. ಆದರೂ ಕೂಡ ಹರೀಶ್ ರಾಯ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿಕಿತ್ಸೆ ಫಲಿಸದೇ ಹರೀಶ್ ರಾಯ್ ನಿಧನರಾದರು. ಉಡುಪಿಯ ಅಂಬಲಪಾಡಿಯಲ್ಲಿ ಅವರ ಅಂತ್ಯಕ್ರಿಯೆ (Harish Roy Funeral) ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ವಾಸವಾಗಿದ್ದ ಹರೀಶ್ ರಾಯ್ ಅವರು ಮೂಲತಃ ಉಡುಪಿಯ ಅಂಬಲಪಾಡಿಯವರು. ಅಲ್ಲಿ ಅವರ ಮನೆ ಇದೆ. ಹರೀಶ್ ರಾಯ್ ಅವರ ಮೂಲ ಹೆಸರು ಹರೀಶ್ ಆಚಾರ್ಯ. ಅಂಬಲಪಾಡಿಯಲ್ಲಿ ಇರುವ ಮನೆಯಲ್ಲಿ ಅವರ ತಾಯಿ ಮತ್ತು ಸಹೋದರ ವಾಸವಾಗಿದ್ದಾರೆ. ಅಂಬಲಪಾಡಿಯಲ್ಲೇ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.

ಸದ್ಯ ಹರೀಶ್ ರಾಯ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿರುವ ಅಂಜನಾಪುರದ ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಂಜನಾಪುರದಲ್ಲಿರುವ ಮನೆಯ ಬಳಿ ಎರಡು ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನದ ಬಳಿಕ ಉಡುಪಿಗೆ ಪಾರ್ಥಿವ ಶರೀರ ರವಾನೆ ಆಗಲಿದೆ. ಶುಕ್ರವಾರ (ನವೆಂಬರ್ 7) ಉಡುಪಿಯಲ್ಲಿ ಹರೀಶ್ ರಾಯ್ ಅಂತ್ಯ ಸಂಸ್ಕಾರ ನಡೆಯಲಿದೆ.

ಉಡುಪಿಯಲ್ಲಿ ಸ್ವರ್ಣೋದ್ಯಮ ನಡೆಸುವ ಕುಟುಂಬಕ್ಕೆ ಹರೀಶ್ ರಾಯ್ ಸೇರಿದವರು. ದಶಕಗಳ ಹಿಂದೆ ಪ್ರಖ್ಯಾತಿ ಪಡೆದಿದ್ದ ನೊವೆಲ್ಟಿ ಜ್ಯುವೆಲ್ಲರ್ಸ್ ಕುಟುಂಬ ಇವರದ್ದು. ಕೃಷ್ಣಮಠದ ರಥ ಬೀದಿ ಪರಿಸರದಲ್ಲಿ ಸ್ವರ್ಣೋದ್ಯಮ ಜನಪ್ರಿಯವಾಗಿತ್ತು. ಹರೀಶ್ ರಾಯ್ ಅವರನ್ನು ಕಳೆದುಕೊಂಡ ನೋವಿನಲ್ಲಿರುವ ಕುಟುಂಬದವರು ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ. ಪಾರ್ಥಿವ ಶರೀರ ಬೆಂಗಳೂರಿನಿಂದ ಉಡುಪಿಗೆ ಬಂದ ಬಳಿಕ ಅಂತಿಮ ಸಂಸ್ಕಾರಕ್ಕೆ ಕುಟುಂಬದವರು ಸಿದ್ಧತೆ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ: ಆಸ್ಪತ್ರೆ ಎದುರು ಪತ್ನಿ, ಮಗನ ಕಣ್ಣೀರು

ನಿಧನದ ಬಳಿಕ ಅಂಗಾಂಗ ದಾನ ಮಾಡಬೇಕು ಎಂಬುದು ಹರೀಶ್ ರಾಯ್ ಅವರ ಆಶಯ ಆಗಿತ್ತು. ತಮ್ಮ ಸಾವಿನ ನಂತರ ಬೇರೆಯವರಿಗೆ ಅನುಕೂಲ ಆಗಲಿ ಎಂಬ ಉದ್ದೇಶ ಅವರಿಗೆ ಇತ್ತು. ಆ ಬಗ್ಗೆ ಪತ್ನಿ ಬಳಿ ಅವರು ಹೇಳಿಕೊಂಡಿದ್ದರು. ಆದರೆ ಕ್ಯಾನ್ಸರ್ ಇದ್ದ ಕಾರಣದಿಂದ ಅಂಗಾಗಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.