Movie-Politics: ರಾಜಕೀಯದಲ್ಲಿ ಏಳು-ಬೀಳು ಕಾಣುತ್ತಿರುವ ಸಿನಿಮಾ ತಾರೆಯರಿವರು
ಚಿತ್ರರಂಗ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯರಾಗಿರುವ ಸಿನಿಮಾ ತಾರೆಯರ ಪಟ್ಟಿ ಹಾಗೂ ಅವರ ರಾಜಕೀಯ ಜೀವನದ ಏಳು-ಬೀಳುಗಳ ಮಾಹಿತಿ ಇಲ್ಲಿದೆ.
ಕಿಚ್ಚ ಸುದೀಪ್ (Sudeep) ರಾಜಕೀಯಕ್ಕೆ (Politics) ಬರುತ್ತಾರೆಂದು ಕೆಲ ದಿನಗಳಿಂದ ಹರಿದಾಡಿದ್ದ ಸುದ್ದಿಗೆ ಇಂದು (ಏಪ್ರಿಲ್ 05) ತೆರೆ ಬಿದ್ದಿದೆ. ರಾಜಕೀಯ ಪ್ರವೇಶಿಸುತ್ತಿಲ್ಲ ಬದಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತಿದ್ದೇನೆ ಎಂದಿದ್ದಾರೆ ಸುದೀಪ್. ಸಿಎಂ ಬೊಮ್ಮಾಯಿಯವರಿಗೆ ಬೆಂಬಲ ಸೂಚಿಸುವ ಮೂಲಕ ಪರೋಕ್ಷವಾಗಿ ಕಿಚ್ಚ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ. ಸಿನಿಮಾ ರಂಗದವರು ರಾಜಕೀಯಕ್ಕೆ ಬರುವುದು ನಿಷಿದ್ಧವೂ ಅಲ್ಲ, ಈ ಬೆಳವಣಿಗೆ ಹೊಸದು ಸಹ ಅಲ್ಲ. ಈವರೆಗೆ ಹಲವು ಸಿನಿಮಾ ನಟ-ನಟಿಯರು ರಾಜಕೀಯಕ್ಕೆ ಬಂದು ಜನಸೇವೆಯಲ್ಲಿ ತೊಡಗಿದ್ದಾರೆ. ಆದರೆ ಕೆಲವರಷ್ಟೆ ರಾಜಕೀಯ ರಂಗದಲ್ಲಿ ಯಶಸ್ಸು ಗಳಿಸಿದ್ದಾರೆ. ಕೆಲವರಿಗೆ ರಾಜಕೀಯ ಕೈಹಿಡಿದಿಲ್ಲ ಅಂಥಹವರ ಪಟ್ಟಿ ಇಲ್ಲಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಸಿನಿಮಾ ತಾರೆಯರ ಪಟ್ಟಿ ಇಲ್ಲಿದೆ.
ಸುಮಲತಾ ಅಂಬರೀಶ್
ಚಿತ್ರರಂಗದಲ್ಲಿ ಹಾಗೂ ರಾಜಕೀಯದಲ್ಲಿ ಎರಡೂ ಕಡೆ ದೊಡ್ಡ ಯಶಸ್ಸು ಗಳಿಸಿದ್ದು ನಟ ಅಂಬರೀಶ್. ಚಿತ್ರರಂಗದಲ್ಲಿ ರೆಬೆಲ್ ಆಗಿದ್ದ ಅಂಬರೀಶ್ ರಾಜಕೀಯದಲ್ಲಿಯೂ ಬಹುತೇಕ ರೆಬಲ್ ಆಗಿಯೇ ಇದ್ದರು. 1994 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಅವರಿಗೆ ಮೊದಲಿಗೆ ವಿರೋಧ ವ್ಯಕ್ತವಾಗಿತ್ತು, ಟಿಕೆಟ್ ನೀಡದ ಕಾರಣ ಕಾಂಗ್ರೆಸ್ ತೊರೆದು ಜನತಾ ದಳ ಸೇರಿ ಗೆದ್ದರು. ಆ ಬಳಿಕ 1999 ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಸೇರಿ ಹಲವು ಚುನಾವಣೆ ಸ್ಪರ್ಧಿಸಿ ಗೆದ್ದ ಅವರು ರಾಜ್ಯ ಹಾಗೂ ಕೇಂದ್ರ ಎರಡರಲ್ಲೂ ಮಂತ್ರಿಯಾಗಿದ್ದರು. ನಿಧನಕ್ಕೆ 2018 ರ ಚುನಾವಣೆಯಲ್ಲಿ ಪಕ್ಷದೊಟ್ಟಿಗೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡರು. ಅವರ ನಿಧನದ ಬಳಿಕ ಅವರ ಪತ್ನಿ ಸುಮಲತಾ ಚುನಾವಣೆ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದರು. ಈಗವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.
ಅನಂತ್ನಾಗ್
ಮೋದಿಯ ಅಪ್ಪಟ ಬೆಂಬಲಿಗರೂ ಆಗಿರುವ ಅನಂತ್ನಾಗ್, ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಕೆಲವು ದಿನಗಳ ಹಿಂದೆ ಸುದ್ದಿ ಹರಡಿತ್ತು. ಅವರಿಗೆ ರಾಜಕೀಯ ಹೊಸದೇನೂ ಅಲ್ಲ. ಜೆಎಚ್ ಪಟೇಲರ ಸಂಪುಟದಲ್ಲಿ ಸಚಿವರಾಗಿದ್ದ ಅನಂತ್ನಾಗ್ ಶಾಸಕ, ವಿಧಾನ ಪರಿಷತ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಕಳೆದ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಅವರು ಸಕ್ರಿಯ ರಾಜಕೀಯದ ತುಸು ದೂರವೇ ಉಳಿದಿದ್ದಾರೆ.
ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು ಆರಂಭದಲ್ಲಿ ಯಶಸ್ಸು ಕಂಡರು. ಜನತಾ ಪಕ್ಷದಿಂದ ಚುನಾವಣೆ ಸ್ಪರ್ಧಿಸಿ ಗೆದ್ದ ಮುಖ್ಯಮಂತ್ರಿ ಚಂದ್ರು ಆ ಬಳಿಕ ಬಿಜೆಪಿ ಸೇರ್ಪಡೆಯಾಗಿ ಎಂಎಲ್ಸಿ ಆದರು. ಬಳಿಕ 2014 ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ರಾಜಕಾರಣಿಯಾಗಿ ದೊಡ್ಡ ಯಶಸ್ಸು ಅವರಿಗೆ ಇನ್ನೂ ದೊರೆತಿಲ್ಲ.
ಜಗ್ಗೇಶ್
ಸಿನಿಮಾ ಜೀವನದಂತೆಯೇ ಜಗ್ಗೇಶ್ರ ರಾಜಕೀಯ ಜೀವನವೂ ವರ್ಣರಂಜಿತವಾಗಿದೆ. ಮೊದಲಿಗೆ ಕಾಂಗ್ರೆಸ್ ಸೇರಿದ್ದ ಜಗ್ಗೇಶ್ ತುರುವೇಕೆರಿಯಿಂದ ಚುನಾವಣೆ ಸ್ಪರ್ಧಿಸಿ ಗೆದ್ದರು. ಬಳಿಕ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಟಿಕೆಟ್ ಪಡೆದು ಸ್ಪರ್ಧೆ ಮಾಡಿ ಸೋತಿದ್ದರು. ಬಳಿಕ ಬಿಜೆಪಿ ಪಕ್ಷದಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಪಡೆಯುತ್ತಾ ಸಾಗುತ್ತಿರುವ ಕೆಲವು ಸಿನಿಮಾ ನಟರಲ್ಲಿ ಜಗ್ಗೇಶ್ ಸಹ ಒಬ್ಬರು.
ಉಮಾಶ್ರೀ
ನಟಿ ಉಮಾಶ್ರೀ ಸಹ ರಾಜಕೀಯದಲ್ಲಿ ಏಳು-ಬೀಳು ಎರಡನ್ನೂ ಕಂಡವರು. ಸಮಾಜ ಸೇವೆ ಮಾಡುತ್ತಿದ್ದ ಉಮಾಶ್ರೀ, ಕಾಂಗ್ರೆಸ್ ಪಕ್ಷ ಸೇರಿ ತೇರದಾಳು ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿ ಗೆದ್ದರು. ಸಚಿವೆಯೂ ಆದರು ಆದರೆ ಕಳೆದ ಚುನಾವಣೆಯಲ್ಲಿ ಸೋತರು. ಈ ಬಾರಿ ಅವರಿಗೆ ಟಿಕೆಟ್ ಸಿಗುವುದು ಅನುಮಾನವಾಗಿದೆ.
ಬಿಸಿ ಪಾಟೀಲ್
2004 ರಲ್ಲಿ ಜನತಾ ದಳದಿಂದ ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಬಿಸಿ ಪಾಟೀಲ್ ಆ ಬಳಿಕ ಕಾಂಗ್ರೆಸ್ ಸೇರಿ ಅದೇ ಕ್ಷೇತ್ರದಿಂದ ಗೆದ್ದರು. 2013 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು ಸೋತರು. 2018 ರಲ್ಲಿ ಕಾಂಗ್ರೆಸ್ನಿಂದಲೇ ಸ್ಪರ್ಧಿಸಿ ಗೆದ್ದರಾದರೂ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಚುನಾವಣೆ ಸ್ಪರ್ಧಿಸಿದ್ದಾರಲ್ಲದೆ ಗೆಲುವು ಸಾಧಿಸಿ ಸಚಿವರೂ ಆಗಿದ್ದಾರೆ.
ಮುನಿರತ್ನ
ಸಿನಿಮಾ ನಿರ್ಮಾಪಕರಾಗಿದ್ದ ಮುನಿರತ್ನ ಚುನಾವಣೆಗೆ ಸ್ಪರ್ಧಿಸಿದ್ದು 2013 ರಲ್ಲಿ. ಮೊದಲ ಬಾರಿಗೆ ಗೆದ್ದು ಶಾಸಕರಾದರು. 2018 ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದರಾದರೂ ಆ ಬಳಿಕ ರಾಜೀನಾಮೆ ನೀಡಿ ಕುಮಾರಸ್ವಾಮಿ ಸರ್ಕಾರ ಉರುಳಲು ಕಾರಣವಾದರು. ಬಳಿಕ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಈಗ ಸಚಿವರಾಗಿದ್ದಾರೆ.
ಪ್ರಕಾಶ್ ರೈ
ನಟ ಪ್ರಕಾಶ್ ರೈ ಹೋರಾಟಗಾರ ಕಮ್ ರಾಜಕಾರಣಿ. ಗೌರಿ ಲಂಕೇಶ್ ಹತ್ಯೆಯ ಬಳಿಕ ಸಾಮಾಜಿಕವಾಗಿ ಹೆಚ್ಚು ಸಕ್ರಿಯರಾದ ಪ್ರಕಾಶ್ ರೈ, ಟ್ವಿಟ್ಟರ್ನಲ್ಲಿ ಜಸ್ಟ್ ಆಸ್ಕಿಂಗ್ ಅಭಿಯಾನ ಆರಂಭಿಸಿದರು. ಬಳಿಕ 2019 ರ ಲೋಕಸಭಾ ಚುನಾವಣೆಗೆ ಬೆಂಗಳೂರು ಸೆಂಟ್ರಲ್ನಿಂದ ಪಕ್ಷೇತರವಾಗಿ ಸ್ಪರ್ಧಿಸಿ ಸೋಲನುಭವಿಸಿದರು.
ಶಶಿಕುಮಾರ್ ರಾಜಕೀಯ
1999 ರಲ್ಲಿ ಚುನಾವಣೆ ಗೆದ್ದು ಚಿತ್ರದುರ್ಗ ಸಂಸದರಾಗಿದ್ದ ಶಶಿಕುಮಾರ್ ಆ ಬಳಿಕ 2008 ರಲ್ಲಿ ಚಳ್ಳಕೆರೆ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನಿರಾಕರಿಸಿದ ಬಳಿಕ ಜೆಡಿಎಸ್ನಿಂದ ಸ್ಪರ್ಧಿಸಿ ಸೋತರು. ಈ ಬಾರಿ ಬಿಜೆಪಿ ಸೇರ್ಪಡೆಯಾಗಿರುವ ಶಶಿಕುಮಾರ್ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಶಶಿಕುಮಾರ್ ಸೀಸನಲ್ ರಾಜಕಾರಣಿ ಎಂದ ಟೀಕೆ ಇದೆ.
ಉಪೇಂದ್ರ
ಉಪೇಂದ್ರ ತಮ್ಮ ಸಿನಿಮಾ ಮಾದರಿಯಲ್ಲಿಯೇ ರಾಜಕೀಯದಲ್ಲಿಯೂ ತುಸು ಭಿನ್ನ. ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷ ಸೇರದೆ. ತಾವೇ ಒಂದು ರಾಜಕೀಯ ಪಕ್ಷ ಕಟ್ಟಿರುವ ಉಪೇಂದ್ರ, ಜನರ ಆದೇಶದ ರಾಜಕೀಯ ಮಾಡುತ್ತೇನೆಂದು ಹೇಳುತ್ತಿದ್ದಾರೆ. ಉಪೇಂದ್ರ ಈ ವರೆಗೂ ಚುನಾವಣೆಗೆ ನಿಂತಿಲ್ಲವಾದರೂ ಅವರ ಪಕ್ಷದ ಒಬ್ಬ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ಗೆದ್ದಿದ್ದರು ಬಳಿಕ ಅವರೂ ಪಕ್ಷಾಂತರ ಮಾಡಿದರು. ಈ ಚುನಾವಣೆಯಲ್ಲಿ ಉಪೇಂದ್ರ ಅವರ ಪಕ್ಷದ ಎಷ್ಟು ಅಭ್ಯರ್ಥಿ ಗೆಲ್ಲುತ್ತಾರೆ ಕಾದು ನೋಡಬೇಕಿದೆ.
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿಯದ್ದು ರಾಜಕೀಯ ಹಿನ್ನೆಲೆಯೇ ಆಗಿದ್ದರೂ ಅವರು ಮೊದಲಿಗೆ ಗುರುತಿಸಿಕೊಂಡಿದ್ದು ಸಿನಿಮಾ ನಟನಾಗಿ. ಸಿನಿಮಾ ನಟನಗಾಗಿ ಜನಪ್ರಿಯತೆ ಗಳಿಸಿಕೊಂಡ ಬಳಿಕ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಸೋಲನುಭವಿಸಿದರು. ಇದೀಗ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.
ರಾಜಕೀಯದಲ್ಲಿ ಸಕ್ರಿಯರಾಗಿರುವ ಇತರೆ ಕೆಲವು ನಟ-ನಟಿಯರು
ನಟಿ ತಾರಾ ಬಿಜೆಪಿ ಸೇರಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ, ನಟಿ ಮಾಳವಿಕಾ ಅವಿನಾಶ್ ಸಹ ಬಿಜೆಪಿ ಪಕ್ಷದ ವಕ್ತಾರೆಯಾಗಿದ್ದಾರೆ, ಹಾಸ್ಯನಟ ಸಾಧುಕೋಕಿಲ ಇತ್ತೀಚೆಗಷ್ಟೆ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ನಟಿ ಪೂಜಾ ಗಾಂಧಿ ಬಿಆರ್ಎಸ್ ಕಾಂಗ್ರೆಸ್ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತು ಅತ್ತೂ ಇಲ್ಲದೆ ಇತ್ತೂ ಇಲ್ಲದೆ ಆಗಿದ್ದಾರೆ. ನಟಿ ಭಾವನಾ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ