ಕನ್ನಡ ಸಿನಿಮಾದಲ್ಲಿ ಆಸ್ಕರ್ ವಿಜೇತ ಹಾಲಿವುಡ್ ನಟ: ಯಾವುದು ಆ ಸಿನಿಮಾ?
Hollywood actor: ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟರೊಬ್ಬರು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯಾವುದು ಆ ಸಿನಿಮಾ? ಸಿನಿಮಾದಲ್ಲಿ ನಟಿಸುತ್ತಿರುವ ಆಸ್ಕರ್ ವಿಜೇತ ನಟ ಯಾರು? ಇತ್ಯಾದಿ ಮಾಹಿತಿ ಇಲ್ಲಿದೆ.
ಕನ್ನಡದ ಸಿನಿಮಾಗಳು (Sandalwood) ಹೊಸ ಹೊಸ ಎತ್ತರಗಳನ್ನು ಏರುತ್ತಿದೆ. ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಹೊಸ ರೀತಿಯ ಕತೆ ಕಟ್ಟಬೇಕು, ಹೊಸ ಮಾದರಿಯ ಸಿನಿಮಾಗಳನ್ನು ಪ್ರೇಕ್ಷಕರಿಗೆ ತೋರಿಸಬೇಕೆಂಬ ತುಡಿತ ಇಲ್ಲಿನ ನಿರ್ದೇಶಕ, ನಿರ್ಮಾಪಕರಲ್ಲಿ ಹಿಂದೆಂದಿಗಿಂತಲೂ ಈಗ ಹೆಚ್ಚಿಗಿದೆ ಎನ್ನಬಹುದು. ಇದೇ ಪ್ರಯತ್ನದ ಭಾಗವಾಗಿ, ಕನ್ನಡದ ಸಿನಿಮಾ ಒಂದನ್ನು ಅಮೆರಿಕದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಮಾತ್ರವಲ್ಲ ಹಾಲಿವುಡ್‍ನ (Hollywood) ಕೆಲ ನಟರು ಹಾಗೂ ತಂತ್ರಜ್ಞರನ್ನು ಈ ಸಿನಿಮಾಕ್ಕಾಗಿ ಬಳಸಿಕೊಳ್ಳಲಾಗಿದೆ.
ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸುತ್ತಿರುವ “ಮೈ ಹೀರೋ” ಸಿನಿಮಾವನ್ನು ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಎಂಜಲೀಸ್ , ಬಿಗ್ ಸರ್ ಇನ್ನು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಸುಮಾರು ಹದಿನೈದು ದಿನಗಳ ಕಾಲ ಅಮೆರಿಕದ ವಿವಿಧ ನಗರಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಮೆರಿಕದಲ್ಲಿ ಚಿತ್ರೀಕರಣ ಮಾಡುವ ಮೂಲಕ ಸಿನಿಮಾದ ಮೂರನೇ ಹಂತದ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ.
ಹಾಲಿವುಡ್‍ನ ಕೆಲವು ಖ್ಯಾತ ತಂತ್ರಜ್ಞರು ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಈ ಸಿನಿಮಾನಲ್ಲಿ ಹಾಲಿವುಡ್‍ನ ಖ್ಯಾತ ನಟರಾದ ಎರಿಕ್ ರಾಬರ್ಟ್ಸ್ ಹಾಗೂ ಹಾಲಿವುಡ್‍ನ ಮತ್ತಷ್ಟು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿದ್ದು ಆ ಬಗ್ಗೆ ಮುಂದಿನ ದಿನದಲ್ಲಿ ಹೇಳುವುದಾಗಿ ನಿರ್ದೇಶಕ ಅವಿನಾಶ್ ವಿಜಯಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:‘ಖುಷಿ’ ಪ್ರಚಾರಕ್ಕೆ ಚಕ್ಕರ್ ಹಾಕಿ, ಹಾಲಿವುಡ್ ಚಿತ್ರಕ್ಕೆ ಆಡಿಷನ್ ನೀಡುತ್ತಿದ್ದಾರಾ ಸಮಂತಾ?
ಎರಿಕ್ ರಾಬರ್ಟ್ಸ್ 1978 ರಿಂದಲೂ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೊದಲ ಸಿನಿಮಾಕ್ಕೆ ಗೋಲ್ಡನ್ ಗ್ಲೋಬ್ ಪಡೆದಿದ್ದ ಎರಿಕ್ ರಾಬರ್ಟ್ಸ್, ‘ರನ್ಅವೇ ಟ್ರೈನ್’ ಸಿನಿಮಾಕ್ಕಾಗಿ ಅತ್ಯುತ್ತಮ ಪೋಷಕ ನಟ ಆಸ್ಕರ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಮಿಸ್ಸಿಸ್ಸಿಪ್ಪಿಯ ಬಿಲೋಕ್ಸಿಯಲ್ಲಿ ಜನಿಸಿದ ಎರಿಕ್ ರಾಬರ್ಟ್ಸ್. ಅಟ್ಲಾಂಟಾ ಪ್ರದೇಶದ ಸುತ್ತಮುತ್ತ ಬೆಳೆದವರು. ನ್ಯೂಯಾರ್ಕ್ ನಗರದಲ್ಲಿ ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಲ್ಲಿ ಅವರು ಬರ್ನ್ ದಿಸ್‍ನಲ್ಲಿ ಬ್ರಾಡ್‍ವೇಯಲ್ಲಿನ ಪಾತ್ರಕ್ಕಾಗಿ ಥಿಯೇಟರ್ ವಲ್ಡ್ ಪ್ರಶಸ್ತಿಯನ್ನು ಗೆದ್ದಿದ್ದರು.
ದಿ ಡಾರ್ಕ್ ನೈಟ್, ಫೈನಲ್ ಅನಾಲಿಸಿಸ್, ಮತ್ತು ಪಾಲ್ ಥೋಮನ್ ಆಂಡರ್ಸನ್ ಅವರ ಇನ್ಹೆರೆಂಟ್ ವೈಸ್ ಫಾರ್ ವಾರ್ನರ್ ಬ್ರದರ್ಸ್, ಮಿಲೇನಿಯಮ್ ಫಿಲ್ಮ್ಸ್ ಲವ್ಲೇಸ್ ಮತ್ತು ದಿ ಎಕ್ಸ್‍ಪೆಂಡಬಲ್ಸ್ ಫಾರ್ ಲಯನ್ಸ್‍ಗೇಟ್‍ನಲ್ಲಿನ ಅವರ ಪಾತ್ರಗಳು ಇತರ ಗಮನಾರ್ಹ ಪ್ರದರ್ಶನಗಳನ್ನು ಒಳಗೊಂಡಿವೆ. ವಾರ್ನರ್ ಬ್ರದರ್ಸ್ ಜರ್ಮನಿ ನಿರ್ಮಾಣದ “ಹೆಡ್ ಫುಲ್ ಆಫ್ ಹನಿ”ಯಲ್ಲಿ ರಾಬರ್ಟ್ಸ್, “ಮ್ಯಾಟ್ ದಿಲ್ಲನ್” ಅವರ ವೈದ್ಯರ ಪಾತ್ರ ಮಾಡಿದ್ದಾರೆ.
“ಮೈ ಹೀರೋ” ಸಿನಿಮಾಕ್ಕೆ ಅವಿನಾಶ್ ವಿಜಯಕುಮಾರ್ ಮತ್ತು ಮುತ್ತುರಾಜ್ ಟಿ ಕಥೆ ಮತ್ತು ಚಿತ್ರಕಥೆ ರಚಿಸಿದ್ದಾರೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಮಾಡಿದ್ದಾರೆ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ ಮತ್ತು ಮುತ್ತುರಾಜ್ ಟಿ ಅವರ ಎಡಿಟಿಂಗ್ ಮಾಡಿದ್ದಾರೆ. ಜಿಲಾಲಿ ರೆಜ್ ಕಲ್ಲಾಹ್, ಮಾಸ್ಟರ್ ವೇದಿಕ್, ಎರಿಕ್ ರಾಬರ್ಟ್ಸ್ ಮುಂತಾದವರು ಸಿನಿಮಾನಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:20 pm, Sun, 10 September 23