BREAKING: ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ ‘ಸಲಾರ್’ ಬಿಡುಗಡೆ ಇಲ್ಲ

|

Updated on: Dec 20, 2023 | 7:35 PM

Salaar: ‘ಸಲಾರ್’ ಸಿನಿಮಾವನ್ನು ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧಾರ ಮಾಡಿದೆ ಹೊಂಬಾಳೆ ಫಿಲ್ಮ್ಸ್​. ‘ಡಂಕಿ’ ಸಿನಿಮಾಕ್ಕೆ ಹೆಚ್ಚು ಶೋ ನೀಡಿದ್ದರಿಂದ ಅಸಮಾಧಾನಗೊಂಡು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

BREAKING: ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ ‘ಸಲಾರ್’ ಬಿಡುಗಡೆ ಇಲ್ಲ
Follow us on

ಮಲ್ಟಿಪ್ಲೆಕ್ಸ್​ಗಳ (Multiplex) ತಾರತಮ್ಯ ನೀತಿಗೆ ವಿರೋಧವಾಗಿ ಹೊಂಬಾಳೆ ಫಿಲ್ಮ್ಸ್ (Hombale Films)​ ನಿರ್ಮಾಣ ಸಂಸ್ಥೆಯು ತಮ್ಮ ಬಹುಕೋಟಿ ಬಜೆಟ್​ನ ‘ಸಲಾರ್’ (Salaar) ಸಿನಿಮಾವನ್ನು ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ (ಪಿವಿಆರ್, ಐನಾಕ್ಸ್, ಮಿರಾಜ್‍) ಬಿಡುಗಡೆ ಮಾಡದೇ ಇರಲು ನಿರ್ಧಾರ ಮಾಡಿದೆ. ‘ಡಂಕಿ’ ಸಿನಿಮಾಕ್ಕೆ ಹೆಚ್ಚಿನ ಸ್ಕ್ರೀನ್​ಗಳನ್ನು ನೀಡಿ ‘ಸಲಾರ್’ ಸಿನಿಮಾಕ್ಕೆ ಕಡಿಮೆ ಸ್ಕ್ರೀನ್ ನಿಗದಿ ಮಾಡಿದ್ದ ಮಲ್ಟಿಪ್ಲೆಕ್ಸ್​ಗಳ ತಾರತಮ್ಯದಿಂದ ಅಸಮಾಧಾನಗೊಂಡು ಹೊಂಬಾಳೆ ಫಿಲ್ಮ್ಸ್​ ಈ ನಿರ್ಧಾರ ಮಾಡಿದೆ.

‘ಡಂಕಿ’ ಸಿನಿಮಾ ಡಿಸೆಂಬರ್ 21ರ ಗುರುವಾರ ಬಿಡುಗಡೆಯಾಗುತ್ತಿದೆ. ಪ್ರಭಾಸ್ ನಟನೆಯ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಡಿಸೆಂಬರ್ 22ಕ್ಕೆ ಬಿಡುಗಡೆ ಆಗಲಿದ್ದು ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಏಕಪರದೆಯ ಚಿತ್ರಮಂದಿರಗಳು ಎರಡೂ ಚಿತ್ರಗಳನ್ನು ಎರಡೆರೆಡು ಪ್ರದರ್ಶನ ಮಾಡಬೇಕು ಎಂದು ತೀರ್ಮಾನಿಸಿದ್ದರು. ಆದರೆ, ‘ಡಂಕಿ’ ವಿತರಕರು ಮಾತ್ರ ತಮಗೆ ನಾಲ್ಕು ಪ್ರದರ್ಶನಗಳನ್ನು ಕೊಡುವುದಾದರೆ ಮಾತ್ರ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದಿದ್ದರು.

ಏಕಪರದೆಯ ಚಿತ್ರಮಂದಿರಗಳ ಸಂಘಗಳು ಎರಡೂ ಚಿತ್ರಗಳನ್ನು ಪ್ರದರ್ಶಿಸುವ ತೀರ್ಮಾನ ತೆಗೆದುಕೊಂಡ ಕಾರಣ,  ‘ಡಂಕಿ’ ಸಿನಿಮಾದ ವಿತರಕರು ಮಲ್ಟಿಪ್ಲೆಕ್ಸ್ ನತ್ತ ವಾಲಿ, ಮಲ್ಟಿಪ್ಲೆಕ್ಸ್​ಗಳಲ್ಲಿ ಹೆಚ್ಚಿನ ಪ್ರದರ್ಶನಗಳನ್ನು ಗಿಟ್ಟಿಸಿಕೊಂಡರು. ಪಿವಿಆರ್ – ಐನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್ ಗಳಲ್ಲಿ ‘ಸಲಾರ್’ಗಿಂತ ‘ಡಂಕಿ’ ಚಿತ್ರಕ್ಕೆ ಹೆಚ್ಚಿನ ಪ್ರದರ್ಶನಗಳನ್ನು ಕೊಡುವುದಕ್ಕೆ ಮಲ್ಟಿಪ್ಲೆಕ್ಸ್ ಗಳು ಒಪ್ಪಿಕೊಂಡಿತು. ಈ ಮೊದಲು ಎರಡೂ ಸಿನಿಮಾಗಳಿಗೆ 50:50 ಅನುಪಾತದಲ್ಲಿ ಸ್ಕ್ರೀನ್​ಗಳನ್ನು ನೀಡುವ ಒಪ್ಪಂದವನ್ನು ಮಲ್ಟಿಪ್ಲೆಕ್ಸ್ ಮಾಡಿಕೊಂಡಿತ್ತು. ಆದರೆ ಬಳಿಕ ಈ ಒಪ್ಪಂದವನ್ನು ಮುರಿದಿದೆ. ಇದರಿಂದ ‘ಸಲಾರ್’ ಸಿನಿಮಾಕ್ಕೆ ಅನ್ಯಾಯವಾಗಿದೆ.

ಇದನ್ನೂ ಓದಿ:‘ಡಂಕಿ’ v/s‘ಸಲಾರ್’: ಮಲ್ಟಿಪ್ಲೆಕ್ಸ್​ನಿಂದ ತಾರತಮ್ಯ, ಪಾಠ ಕಲಿಸಲು ಮುಂದಾದ ಹೊಂಬಾಳೆ?

ತಮ್ಮ ಸಿನಿಮಾಕ್ಕೆ ಮಲ್ಟಿಪ್ಲೆಕ್ಸ್​ನಿಂದ ಆಗುತ್ತಿರುವ ಅನ್ಯಾಯವನ್ನು ಖಂಡಿಸಿರುವ ಹೊಂಬಾಳೆ ಫಿಲಂಸ್‍, ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್-ಇನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನ ಮಾಡಿದೆ. ಮಿಕ್ಕಂತೆ ಬೇರೆ ಮಲ್ಟಿಪ್ಲೆಕ್ಸ್ ಚೈನ್‍ಗಳಾದ ಸಿನಿಪೊಲಿಸ್‍ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ‘ಸಲಾರ್’ ಸಿನಿಮಾ ನಿಗದಿತ ದಿನದಂದು ಬಿಡುಗಡೆ ಆಗಲಿದೆ.

‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್‍ನಡಿ ವಿಜಯ್‍ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Wed, 20 December 23