ಅಪ್ಪು ಆಸೆಯಂತೆ ಶಕ್ತಿಧಾಮದಲ್ಲಿ ವಿದ್ಯಾಶಾಲೆಗೆ ಶಂಕುಸ್ಥಾಪನೆ; ನನ್ನ ಉಸಿರಿರುವವರೆಗೂ ಈ ಮಕ್ಕಳ ಜೊತೆ ಇರುತ್ತೇನೆ ಎಂದ ಶಿವಣ್ಣ

ಅಪ್ಪು ಆಸೆಯಂತೆ ಶಕ್ತಿಧಾಮದಲ್ಲಿ ವಿದ್ಯಾಶಾಲೆಗೆ ಶಂಕುಸ್ಥಾಪನೆ; ನನ್ನ ಉಸಿರಿರುವವರೆಗೂ ಈ ಮಕ್ಕಳ ಜೊತೆ ಇರುತ್ತೇನೆ ಎಂದ ಶಿವಣ್ಣ
ಶಿವಣ್ಣ-ಅಪ್ಪು

ಈ ಮಕ್ಕಳಲ್ಲಿ ಅಪ್ಪುನ ನೋಡುತ್ತಿದ್ದೇನೆ. ನನ್ನ ದುಃಖ ಕಡಿಮೆ ಮಾಡಿಕೊಳ್ಳಲು ಇದು ಸಹಕಾರಿ ಆಗುತ್ತಿದೆ. ಇಲ್ಲಿನ ಮಕ್ಕಳಲ್ಲಿ ಕೆಲವರು ಅಣ್ಣ ಅಂತಾರೆ, ಕೆಲವರು ಡ್ಯಾಡಿ ಅಂತಾರೆ. ನನ್ನ ಉಸಿರಿರುವವರೆಗೂ ನಾನು ಇಲ್ಲಿನ ಮಕ್ಕಳ ಜೊತೆ ಇರುತ್ತೇನೆ ಎಂದರು ಶಿವರಾಜ್​ಕುಮಾರ್.

TV9kannada Web Team

| Edited By: Rajesh Duggumane

Apr 07, 2022 | 7:03 PM

ಪುನೀತ್​ ರಾಜ್​ಕುಮಾರ್ ಅವರು (Puneeth Rajkumar) ಸಿನಿಮಾ ಜತೆಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದರು. ಅವರು ಈ ವಿಚಾರದಲ್ಲಿ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಅದರಲ್ಲಿ ಮೈಸೂರಿನಲ್ಲಿರುವ ಶಕ್ತಿಧಾಮದಲ್ಲಿ (Shakridhama) ಶಾಲೆ ನಿರ್ಮಾಣ ಆಗಬೇಕು ಎಂಬುದು ಕೂಡ ಒಂದಾಗಿತ್ತು. ಆ ಕನಸಿಗೆ ಇಂದು ಶಂಕುಸ್ಥಾಪನೆ ಆಗಿದೆ. ಅಂದರೆ, ಶಕ್ತಿಧಾಮದಲ್ಲಿ ಶಾಲೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್​ಕುಮಾರ್, ಅವರ ಪತ್ನಿ ಗೀತಾ ಶಿವರಾಜ್​ಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲಾದವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಶಿವರಾಜ್​ಕುಮಾರ್ (Shivarajkumar) ಮಾತನಾಡಿದ್ದು, ನನ್ನ ಉಸಿರಿರುವವರೆಗೂ ಇಲ್ಲಿನ ಮಕ್ಕಳ ಜೊತೆ ಇರುತ್ತೇನೆ ಎಂದಿದ್ದಾರೆ.

ಬಸವರಾಜ‌ ಬೊಮ್ಮಾಯಿ ಅವರನ್ನು ಶಿವರಾಜ್​ಕುಮಾರ್ ಹೊಗಳಿದ್ದಾರೆ. ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಸರ್ಕಾರ ನಮಗೆ ಸಾಕಷ್ಟು ಭರವಸೆಗಳನ್ನು ನೀಡಿದೆ. ಇಂತಹ ಸಿಎಂಅನ್ನು ನಾನು ನೋಡಿಲ್ಲ. ಇವರು ಕಾಮನ್ ಮ್ಯಾನ್. ನಮ್ಮ ಕುಟುಂಬದ ಮೇಲೆ ಅವರಿಗೆ ಸಾಕಷ್ಟು ಪ್ರೀತಿ ಇದೆ. ಈ ವಿಚಾರದಲ್ಲಿ ಡ್ರಾಮಾ ಮಾಡೋಕೆ ಆಗಲ್ಲ. ಅವರದ್ದು ಸತ್ಯವಾದ ಪ್ರೀತಿ. ಅದ್ಭುತವಾಗಿ ಪ್ರತಿಕ್ರಿ‌ಯೆ ನೀಡಿ ಸಹಕರಿಸಿದ್ದಾರೆ’ ಎಂದರು ಶಿವರಾಜ್​ಕುಮಾರ್. ಇದರ ಜತೆಗೆ ಶಕ್ತಿಧಾಮಕ್ಕೆ ಕಟ್ಟಡ ಕಟ್ಟಿಕೊಟ್ಟ ಸುಧಾಮೂರ್ತಿ  ಹಾಗೂ ಕಾರ್ಯಕ್ರಮದಲ್ಲಿದ್ದ ಸುತ್ತೂರು ಶ್ರೀಗಳಿಗೆ ಶಿವಣ್ಣ ಧನ್ಯವಾದ ಹೇಳಿದ್ದಾರೆ.  ‘

‘ಅಮ್ಮ ಶಕ್ತಿಧಾಮಕ್ಕೆ ಹೋಗುವಂತೆ ಹೇಳುತ್ತಿದ್ದರು. ನಾನು ಅವಾಗ ಬಹಳ ಕಡಿಮೆ ಬರುತ್ತಿದೆ. ಯಾವಾಗ ಮನಸ್ಸು ಬರುತ್ತದೆಯೋ ಅವಾಗ ಹೋಗುತ್ತಾರೆ ಎಂದು ತಂದೆ ಹೇಳುತ್ತಿದ್ದರು. ನನಗೆ ಶಕ್ತಿಧಾಮಕ್ಕೆ ಹೋಗಬಾರದು ಎಂದೇನು ಇರಲಿಲ್ಲ. ಆದರೆ, ಈ ರೀತಿಯ ಮಕ್ಕಳನ್ನು ನೋಡಿದಾಗ ನನ್ನ ಮನಸ್ಸಿಗೆ ಬೇಸರವಾಗುತ್ತಿತ್ತು. ಅಮ್ಮನ ಬಳಿಕ ಈ ಜವಾಬ್ದಾರಿ ಗೀತಾಗೆ ಸಿಕ್ತು. ಗೀತನಿಂದ ನನಗೆ ಇಲ್ಲಿ ಬರುವ ಭಾಗ್ಯ ಸಿಕ್ತು’ ಎಂದಿದ್ದಾರೆ ಶಿವಣ್ಣ.

‘ಇತ್ತೀಚೆಗೆ ಮೈಸೂರಿಗೆ ಹೆಚ್ಚಾಗಿ ಶೂಟಿಂಗ್​ಗೆ ಬರುತ್ತಿದ್ದೇನೆ. ಅದರಲ್ಲೂ 7-8 ತಿಂಗಳಿಂದ ಹೆಚ್ಚೆಚ್ಚು ಬರುತ್ತಿದ್ದೇನೆ. ಮಕ್ಕಳ ಜೊತೆ ಮಕ್ಕಳಾಗಿ ನಾನು ಇರುತ್ತಿದ್ದೇನೆ. ಈ ಮಕ್ಕಳಲ್ಲಿ ಅಪ್ಪುನ ನೋಡುತ್ತಿದ್ದೇನೆ. ನನ್ನ ದುಃಖ ಕಡಿಮೆ ಮಾಡಿಕೊಳ್ಳಲು ಇದು ಸಹಕಾರಿ ಆಗುತ್ತಿದೆ. ಇಲ್ಲಿನ ಮಕ್ಕಳಲ್ಲಿ ಕೆಲವರು ಅಣ್ಣ ಅಂತಾರೆ, ಕೆಲವರು ಡ್ಯಾಡಿ ಅಂತಾರೆ. ನನ್ನ ಉಸಿರಿರುವವರೆಗೂ ನಾನು ಇಲ್ಲಿನ ಮಕ್ಕಳ ಜೊತೆ ಇರುತ್ತೇನೆ’ ಎಂದಿದ್ದಾರೆ ಅವರು.

ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ‘ಸ್ತ್ರಿ ಅಂದರೆ ಒಂದು ಶಕ್ತಿ. ಭಗವಂತ ಸೃಷ್ಟಿ ಮಾಡುವಾಗ ತಾಯಂದಿರಿಗೆ ಹೆಚ್ಚು ತೂಕ ಕೊಟ್ಟಿದಾನೆ. ಶಿವರಾಜ್​ಕುಮಾರ್ ಅವರು ಇದನ್ನು ಮುನ್ನಡೆಸುತ್ತಿರುವುದು ಖುಷಿಯ ವಿಚಾರ. ಒಂದು ಸರ್ಕಾರ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಅಪ್ಪುಗೆ ತಾಯಿ ಕರುಳು ಇತ್ತು. ಈ ಕಾರಣಕ್ಕೆ ಅವರು ಇಷ್ಟೊಂದು ಜನಕ್ಕೆ ಸಹಾಯ ಮಾಡಿದ್ದರು’ ಎಂದರು ಬೊಮ್ಮಾಯಿ.

ಇದನ್ನೂ ಒದಿ: ‘ಗೀತಾ ಅವರು ತಾಯಿ ಸ್ಥಾನದಲ್ಲಿ ಇದ್ದಾರೆ’; ಮೈಸೂರಿನ ಶಕ್ತಿಧಾಮದ ಬಗ್ಗೆ ಶಿವರಾಜ್​ಕುಮಾರ್​ ಮಾತು

Shiva Rajkumar: ಶಕ್ತಿಧಾಮದಲ್ಲಿ ಆಶ್ರಯ ಪಡೆಯಲಿದ್ದಾರೆ ಇನ್ನಷ್ಟು ಮಕ್ಕಳು; ಮಾಹಿತಿ ಹಂಚಿಕೊಂಡ ಶಿವಣ್ಣ

Follow us on

Related Stories

Most Read Stories

Click on your DTH Provider to Add TV9 Kannada