ಸಂಗೀತ ನಿರ್ದೇಶಕ ಇಳಯರಾಜ (Ilaiyaraaja) ಅವರು ಸಂಗೀತ ಮಾಂತ್ರಿಕರೆಂದೇ ಹೆಸರಾದವರು. ಸುಮಾರು 1,500ಕ್ಕೂ ಹೆಚ್ಚು ಚಿತ್ರಗಳ 7,000ಕ್ಕೂ ಅಧಿಕ ಹಾಡುಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. 20,000ಕ್ಕೂ ಹೆಚ್ಚು ವೇದಿಕೆಗಳಲ್ಲಿ ಲೈವ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡದಲ್ಲೂ ಬಹಳಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿದ ಖ್ಯಾತಿ ಅವರದ್ದು. ಇಳಯರಾಜ ಅವರು ನೀಡಿದ ಸಂಗೀತಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಹರಿಹರನ್ ಸೇರಿದಂತೆ ಹಲವು ಖ್ಯಾತ ಗಾಯಕರು ದನಿ ನೀಡಿದ್ದಾರೆ. ಅಂತಹ ಹಾಡುಗಳು ಕನ್ನಡದ ಸಾರ್ವಕಾಲಿಕ ಸೂಪರ್ ಹಿಟ್ ಹಾಡುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಚಲನಚಿತ್ರ ಸಂಗೀತಕ್ಕೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು, ಪದ್ಮ ಭೂಷಣ ಸೇರಿದಂತೆ ಅನೇಕ ಪುರಸ್ಕಾರಗಳು ಅವರಿಗೆ ಲಭಿಸಿವೆ. ಇಂದು ಇಳಯರಾಜ ಅವರ ಜನ್ಮದಿನ. 79ನೇ ವಯಸ್ಸಿಗೆ ಅವರು ಕಾಲಿಟ್ಟಿದ್ದಾರೆ. ಅವರ ಸಂಗೀತ ನಿರ್ದೇಶನದ ಎಂದೂ ಮರೆಯಲಾಗದ ಕನ್ನಡದ ಕೆಲವು ಸೂಪರ್ ಹಿಟ್ ಗೀತೆಗಳ ಪಟ್ಟಿ ಇಲ್ಲಿದೆ.
ಜೊತೆಯಲಿ ಜೊತೆ ಜೊತೆಯಲಿ: 1981ರಲ್ಲಿ ತೆರೆಕಂಡ ‘ಗೀತಾ’ ಚಿತ್ರದ ಈ ಹಾಡನ್ನು ಇಂದಿಗೂ ಜನರು ಗುನುಗುತ್ತಾರೆ. ಶಂಕರ್ ನಾಗ್ ಹಾಗೂ ಅಕ್ಷತಾ ರಾವ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಎಸ್ಪಿಬಿ ಹಾಗೂ ಎಸ್.ಜಾನಕಿ ಹಾಡಿದ್ದ ಹಾಡಿಗೆ ಚಿ.ಉದಯಶಂಕರ್ ಸಾಹಿತ್ಯ ಬರೆದಿದ್ದರು.
ನಗುವ ನಯನ: ಮಣಿರತ್ನಂ ನಿರ್ದೇಶನದ ‘ಪಲ್ಲವಿ ಅನುಪಲ್ಲವಿ’ ಚಿತ್ರದ ‘ನಗುವ ನಯನ’ ಹಾಡು ಕೂಡ ಕನ್ನಡಿಗರ ಅಚ್ಚುಮೆಚ್ಚಿನ ಗೀತೆಗಳಲ್ಲೊಂದು. ಅನಿಲ್ ಕಪೂರ್, ಕಿರಣ್ ನಟಿಸಿದ್ದ ಈ ಚಿತ್ರದಲ್ಲಿ ನಟಿಸಿದ್ದರು. ಹಾಡಿಗೆ ಆರ್ಎನ್ ಜಯಗೋಪಾಲ್ ಸಾಹಿತ್ಯ ಬರೆದಿದ್ದು, ಎಸ್ಪಿಬಿ ಹಾಗೂ ಎಸ್ ಜಾನಕಿ ಗಾಯನ ಮಾಡಿದ್ದರು.
ಕೇಳದೆ ನಿಮಗೀಗ: ‘ಗೀತಾ’ ಚಿತ್ರದ ಈ ಹಾಡನ್ನು ಹಾಡಿದವರು ಎಸ್ಪಿಬಿ. ಚಿ.ಉದಯಶಂಕರ್ ಸಾಹಿತ್ಯ ಬರೆದಿದ್ದರು. ಈ ಹಾಡನ್ನು ಪ್ರತಿ ಬಾರಿ ಕೇಳುವಾಗಲೂ ಶಂಕರ್ ನಾಗ್ ಅವರ ನೆನಪು ಮತ್ತಷ್ಟು ಗಾಢವಾಗಿ ಕಾಡತೊಡಗುತ್ತದೆ.
ಜೀವ ಹೂವಾಗಿದೆ: ‘ನೀ ನನ್ನ ಗೆಲ್ಲಲಾರೆ’ ಚಿತ್ರದ ಈ ಹಾಡಿಗೆ ಡಾ.ರಾಜ್ಕುಮಾರ್ ಹಾಗೂ ಎಸ್.ಜಾನಕಿ ಧ್ವನಿ ನೀಡಿದ್ದರು. ಚಿ.ಉದಯಶಂಕರ್ ಸಾಹಿತ್ಯ ಬರೆದಿದ್ದರು. ಚಿತ್ರದಲ್ಲಿ ಮಂಜುಳಾ ಹಾಗೂ ರಾಜ್ಕುಮಾರ್ ಚಿತ್ರದಲ್ಲಿ ನಟಿಸಿದ್ದರು.
ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು: ಪ್ರಕಾಶ್ ರಾಜ್ ನಿರ್ದೇಶಿಸಿ ಅಭಿನಯಿಸಿರುವ ‘ಒಗ್ಗರಣೆ’ ಚಿತ್ರದ ಈ ಹಾಡನ್ನು ಕೈಲಾಶ್ ಖೇರ್ ಹಾಡಿದ್ದರು. ಈ ಹಾಡು ಕೂಡ ಎಲ್ಲರ ಮನಗೆದ್ದಿತ್ತು.
ಇದನ್ನೂ ಓದಿ: ಇಳಯರಾಜ ಜನ್ಮದಿನ; ವಿಶೇಷ ಕಾರ್ಯಕ್ರಮದ ಮೂಲಕ ಹುಟ್ಟುಹಬ್ಬ ಆಚರಿಸಲಿರುವ ಸಂಗೀತ ಮಾಂತ್ರಿಕ
ಇಲ್ಲಿ ನೀಡಲಾಗಿರುವುದು ಇಳಯರಾಜ ಸಂಗೀತ ನೀಡಿರುವ ಕೆಲವೇ ಕೆಲವು ಸೂಪರ್ ಹಿಟ್ ಹಾಡುಗಳನ್ನಷ್ಟೇ. ಇವುಗಳಲ್ಲದೇ ಇನ್ನೂ ಅನೇಕ ಹಾಡುಗಳು ಎಲ್ಲರ ಮನದಲ್ಲೂ ಹಸಿರಾಗಿವೆ. ‘ನಮ್ಮೂರ ಮಂದಾರ ಹೂವೆ’ ಚಿತ್ರದ ‘ಓಂಕಾರದಿ ಕಂಡೆ ಪ್ರೇಮ ನಾದವ’ ಸೇರಿದಂತೆ ಇತರ ಹಾಡುಗಳು, ‘ನಮ್ಮ ಪ್ರೀತಿಯ ರಾಮು’ ಚಿತ್ರದ ‘ನಾ ಕಾಣೊ ಲೋಕವನ್ನು’ ಗೀತೆ, ‘ಇದೊಳ್ಳೆ ರಾಮಾಯಣ’ ಚಿತ್ರದ ಶೀರ್ಷಿಕೆ ಗೀತೆ ಸೇರಿದಂತೆ ಹಲವು ಹಾಡುಗಳನ್ನು ಇಳಯರಾಜರ ಸಂಗೀತ ಮಾಂತ್ರಿಕತೆಗೆ ಉದಾಹರಣೆಯಾಗಿ ನೀಡಬಹುದು. ಅಂದಹಾಗೆ ಇಳಯರಾಜ ಸಂಗೀತ ನೀಡಿರುವ ನಿಮ್ಮಿಷ್ಟದ ಗೀತೆ ಯಾವುದು?
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ