ಡಿಸೆಂಬರ್ 4ರಂದು ಬಣ್ಣದಲ್ಲಿ ರಿಲೀಸ್ ಆಗಲಿದೆ ‘ಜಗ ಮೆಚ್ಚಿದ ಮಗ’ ಸಿನಿಮಾ

ಹಳೆಯ ಸಿನಿಮಾಗಳ ಸುವರ್ಣ ನೆನಪುಗಳನ್ನು ಇಂದಿನ ತಲೆಮಾರಿಗೆ ಹೊಸ ರೂಪದಲ್ಲಿ ಪರಿಚಯಿಸುವ ಉದ್ದೇಶದಿಂದ ‘ಜಗ ಮೆಚ್ಚಿದ ಮಗ’ ಸಿನಿಮಾವನ್ನು ಬಣ್ಣದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ಚಿತ್ರದ ಮರುಸೃಷ್ಟಿ ತಮ್ಮ ಪಾಲಿಗೆ ಕೇವಲ ಒಂದು ಕೆಲಸವಲ್ಲ, ಕನ್ನಡ ಚಿತ್ರರಂಗದ ಅಮೂಲ್ಯ ನೆನಪನ್ನು ಉಳಿಸುವ ಪ್ರಯತ್ನ ಎಂದು ಉದಯಶಂಕರ್ ಹೇಳಿದ್ದಾರೆ.

ಡಿಸೆಂಬರ್ 4ರಂದು ಬಣ್ಣದಲ್ಲಿ ರಿಲೀಸ್ ಆಗಲಿದೆ ‘ಜಗ ಮೆಚ್ಚಿದ ಮಗ’ ಸಿನಿಮಾ
Jaga Mecchida Maga Poster

Updated on: Nov 29, 2026 | 6:01 PM

ವರನಟ ಡಾ ರಾಜ್‌ಕುಮಾರ್ ಅಭಿನಯದ ‘ಜಗ ಮೆಚ್ಚಿದ ಮಗ’ ಸಿನಿಮಾ 1972ರಲ್ಲಿ ಬಿಡುಗಡೆ ಆಗಿತ್ತು. ಆಗ ಕಪ್ಪು-ಬಿಳುಪಿನಲ್ಲಿ ಬಂದಿದ್ದ ಈ ಸಿನಿಮಾವನ್ನು ಈಗ ಬಣ್ಣದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಹೌದು, 54 ವರ್ಷಗಳ ಹಿಂದಿನ ಈ ಸಿನಿಮಾವನ್ನು ಆಧುನಿಕ ತಂತ್ರಜ್ಞಾನದ ನೆರವಿನಿಂದ ಬಣ್ಣದಲ್ಲಿ ಮರುಸೃಷ್ಟಿಸಿ, 5.1 ಸೌಂಡ್ ಅನುಭವದೊಂದಿಗೆ ಡಿಸೆಂಬರ್ 4ರಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂಬುದು ವಿಶೇಷ. ಈ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು.

ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ‘ಜಗ ಮೆಚ್ಚಿದ ಮಗ’ ಸಿನಿಮಾವನ್ನು ಭಾವ ನಾರಾಯಣ ಅವರು ನಿರ್ಮಾಣ ಮಾಡಿದ್ದರು. ಡಾ. ರಾಜ್‌ಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವನ್ನು ಮತ್ತೆ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನದ ಹಿಂದೆ ಉದಯಶಂಕರ್ ಅವರ ಹಲವು ವರ್ಷಗಳ ಪರಿಶ್ರಮವಿದೆ. ಈ ಸಿನಿಮಾದ ಹಕ್ಕುಗಳು ಮತ್ತು ಮೂಲ ನೆಗೆಟಿವ್‌ಗಾಗಿ ಅವರು ಸಾಕಷ್ಟು ವರ್ಷಗಳ ಕಾಲ ಹುಡುಕಾಟ ನಡೆಸಿದ್ದಾರೆ. ಗಾಂಧಿನಗರದಿಂದ ಚೆನ್ನೈವರೆಗೆ ಹುಡುಕಾಟ ನಡೆಸಿ, ಕೊನೆಗೆ ನಿರ್ಮಾಪಕ ಭಾವ ನಾರಾಯಣ ಅವರ ಕುಟುಂಬ ಹಾಗೂ ಸಂಬಂಧಿತ ಸಂಪರ್ಕಗಳ ಮೂಲಕ ಚಿತ್ರದ ಹಕ್ಕುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Loading...

ಕಪ್ಪು-ಬಿಳುಪಿನ ಸಿನಿಮಾಗೆ ಬಣ್ಣ ತುಂಬುವುದು ಸುಲಭದ ಕೆಲಸವಲ್ಲ. ಚಿತ್ರದ ಪ್ರತಿಯೊಂದು ಫ್ರೇಮ್‌ಗೂ ಪ್ರತ್ಯೇಕವಾಗಿ ಬಣ್ಣ ನೀಡುವ ಮೂಲಕ ಮೂಲ ಚಿತ್ರದ ಸೌಂದರ್ಯ ಮತ್ತು ಭಾವನೆಗಳಿಗೆ ಧಕ್ಕೆಯಾಗದಂತೆ ಹೊಸ ರೂಪ ನೀಡಲಾಗಿದೆ. ಸುಮಾರು ಎರಡು ಲಕ್ಷ ಅರವತ್ತು ಸಾವಿರ ಫ್ರೇಮ್‌ಗಳಿಗೆ ಬಣ್ಣದ ಮೆರುಗು ನೀಡಲಾಗಿದ್ದು, 70ಕ್ಕೂ ಹೆಚ್ಚು ತಂತ್ರಜ್ಞರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ವರ್ಷ ನಡೆದ ಈ ಕೆಲಸದಲ್ಲಿ ಪ್ರಸಾದ್ ಸ್ಟುಡಿಯೋ ಸೇರಿದಂತೆ ಹಲವು ತಾಂತ್ರಿಕ ತಂಡಗಳು ಕೈಜೋಡಿಸಿವೆ.

Jaga Mecchida Maga Press Meet

Jaga Mecchida Maga Press Meet

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಉದಯಶಂಕರ್ ಮಾತನಾಡಿದರು. ‘ಹಳೆಯ ಕನ್ನಡ ಸಿನಿಮಾಗಳನ್ನು ಹೊಸ ತಂತ್ರಜ್ಞಾನದಲ್ಲಿ ಮರುಸೃಷ್ಟಿಸಿ ಮುಂದಿನ ತಲೆಮಾರಿಗೆ ತಲುಪಿಸುವುದು ತಮ್ಮ ಉದ್ದೇಶ’ ಎಂದು ಅವರು ಹೇಳಿದರು. ಹಳೆಯ ಚಿತ್ರಗಳಲ್ಲಿರುವ ಕಲಾತ್ಮಕತೆ, ಅಭಿನಯ ಮತ್ತು ಭಾವನೆಗಳು ಕಾಲದೊಂದಿಗೆ ಮರೆಯಾಗಬಾರದು. ಇಂದಿನ ಪ್ರೇಕ್ಷಕರು ಆ ಸಿನಿಮಾಗಳನ್ನು ಉತ್ತಮ ತಾಂತ್ರಿಕ ಗುಣಮಟ್ಟದಲ್ಲಿ ಚಿತ್ರಮಂದಿರದಲ್ಲೇ ನೋಡುವಂತಾಗಬೇಕು ಎಂಬ ಆಶಯದಿಂದ ಈ ಪ್ರಯತ್ನ ಕೈಗೊಂಡಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ಡಾ ರಾಜ್​ಕುಮಾರ್ ಅದ್ಭುತ ವ್ಯಕ್ತಿತ್ವಕ್ಕೆ ಇಲ್ಲಿದೆ ಮತ್ತೊಂದು ಉದಾಹರಣೆ

‘ಜಗ ಮೆಚ್ಚಿದ ಮಗ’ ಬಳಿಕ ‘ಮಂತ್ರಾಲಯ ಮಹಾತ್ಮೆ’ ಸಿನಿಮಾವನ್ನು ಬಣ್ಣದಲ್ಲಿ ಮರುಸೃಷ್ಟಿಸುವ ಗುರಿ ಇದೆ. ಆನಂತರ ‘ಇಮ್ಮಡಿ ಪುಲಿಕೇಶಿ’ ಸೇರಿದಂತೆ ಇನ್ನೂ ಕೆಲವು ಹಳೆಯ ಚಿತ್ರಗಳ ಬಗ್ಗೆ ಯೋಚನೆ ಇದೆ. ‘ವೀರಕೇಸರಿ’ ಚಿತ್ರದ ನೆಗೆಟಿವ್ ಲಭ್ಯವಿರುವುದರಿಂದ ಅದನ್ನೂ ಮರುಸೃಷ್ಟಿಸುವ ಸಾಧ್ಯತೆ ಇದೆ ಎಂದು ಉದಯಶಂಕರ್ ಅವರು ತಿಳಿಸಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ‘ಜಗ ಮೆಚ್ಚಿದ ಮಗ’ ಚಿತ್ರದ ಸಂಯುಕ್ತ ನಿರ್ದೇಶಕ ಭಾರ್ಗವ, ಸಾರಾ ಗೋವಿಂದು, ಎಸ್. ಎ. ಚಿನ್ನೆಗೌಡ ಮುಂತಾದವರು ಭಾಗಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us