‘ಜೇಮ್ಸ್’ ಚಿತ್ರದಲ್ಲಿ ಚಿಕ್ಕಣ್ಣ, ಗಜಪಡೆ ಹರ್ಷ, ತಿಲಕ್ ಶೇಖರ್ ಅವರು ಹೀರೋ ಫ್ರೆಂಡ್ಸ್ ಪಾತ್ರ ಮಾಡಿದ್ದಾರೆ. ಈ ಮೂವರು ಒಟ್ಟಿಗೆ ವೇದಿಕೆಗೆ ಬಂದು ತಮ್ಮ ಮಾತುಗಳನ್ನು ಹಂಚಿಕೊಂಡರು. ‘ಏನು ಮಾತನಾಡಬೇಕೋ ತಿಳಿಯುತ್ತಿಲ್ಲ. ಈ ಥರ ಪ್ರಚಾರ ಯಾವ ಕಲಾವಿದರ ಜೀವನದಲ್ಲೂ ಬರಬಾರದು. ಪುನೀತ್ ಅವರ ಕೊನೇ ಸಿನಿಮಾದಲ್ಲಿ ನಾವು ಇದ್ದೇವೆ ಅನ್ನೋದನ್ನು ಅದೃಷ್ಟ ಅಂದುಕೊಳ್ಳುತ್ತೇವೆ. ಈ ಸಿನಿಮಾದಿಂದ ನಮ್ಮ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿ ಆಗಲಿದೆ. ಈ ಮಾತನ್ನು ನಾನೊಬ್ಬನೇ ಹೇಳುತ್ತಿಲ್ಲ. ಅಪ್ಪು ಸರ್ ಅಭಿಮಾನಿಗಳು ಮತ್ತು ಅಭಿಮಾನಿಗಳಲ್ಲದವರು ಕೂಡ ಇದನ್ನೇ ಹೇಳುತ್ತಿದ್ದಾರೆ. ದೇವರು ಈ ಚಿತ್ರಕ್ಕೆ ಒಳ್ಳೆಯದು ಮಾಡಲಿ’ ಎಂದು ಚಿಕ್ಕಣ್ಣ ಹೇಳಿದರು.
ಚಿಕ್ಕಣ್ಣನ ಬಗ್ಗೆ ಶಿವರಾಜ್ಕುಮಾರ್ ಅವರಿಗೆ ಪ್ರೀತಿ ಇದೆ. ಪುನೀತ್ ರೀತಿ ಚಿಕ್ಕಣ್ಣ ಅವರನ್ನು ಕೂಡ ಓರ್ವ ಸಹೋದರನ ರೀತಿಯಲ್ಲಿ ಶಿವಣ್ಣ ನೋಡುತ್ತಾರೆ. ಆ ಕುರಿತು ವೇದಿಕೆಯಲ್ಲಿ ಶಿವರಾಜ್ಕುಮಾರ್ ಮಾತನಾಡಿದರು. ‘ಚಿಕ್ಕಣ್ಣನನ್ನು ನೋಡಿದಾಗೆಲ್ಲ ತುಂಬ ನೋವಾಗುತ್ತದೆ. ನನಗೆ ಅಪ್ಪು ಒಬ್ಬ ತಮ್ಮನಾದರೆ ಚಿಕ್ಕಣ್ಣ ಇನ್ನೊಬ್ಬ ತಮ್ಮನ ರೀತಿ ಕಾಣ್ತಾರೆ. ಪುನೀತ್ ಜೊತೆ ತುಂಬ ಹತ್ತಿರವಾಗಿದ್ದವರು. ‘ರಾಜಕುಮಾರ’ ಸಿನಿಮಾದಲ್ಲಿ ಅವರು ಜೊತೆಯಾಗಿ ನಟಿಸಿದ್ದರು. ಅದನ್ನೆಲ್ಲ ನೋಡಿದರೆ ಇನ್ನೂ ದುಃಖ ಆಗುತ್ತದೆ’ ಎಂದು ಶಿವಣ್ಣ ಹೇಳಿದರು.
ಮಾ.17ರಂದು ಪುನೀತ್ ರಾಜ್ಕಮಾರ್ ಜನ್ಮದಿನ. ಆ ಪ್ರಯುಕ್ತ ‘ಜೇಮ್ಸ್’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಮತ್ತು ಟ್ರೇಡ್ಮಾರ್ಕ್ ಹಾಡು ಸೂಪರ್ ಹಿಟ್ ಆಗಿದೆ. ಆ ಮೂಲಕ ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿದೆ. ಈಗಾಗಲೇ ಎಲ್ಲ ಚಿತ್ರಮಂದಿರಗಳ ಎದುರಿನಲ್ಲಿ ಕಟೌಟ್ ನಿಲ್ಲಿಸಲು ಭರದ ಸಿದ್ಧತೆ ನಡೆದಿದೆ. ‘ಜೇಮ್ಸ್’ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಲು ಫ್ಯಾನ್ಸ್ ಕಾಯುತ್ತಿದ್ದಾರೆ.
ಈ ಸಿನಿಮಾದಲ್ಲಿ ಪುನೀತ್ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ. ‘ಅಪ್ಪು ವಾಯ್ಸ್ಗೆ ನಾನೇ ಡಬ್ಬಿಂಗ್ ಮಾಡಬೇಕು ಎಂದಾಗ ಅವನದ್ದೇ ವಾಯ್ಸ್ ಬಳಕೆ ಮಾಡೋಕೆ ಆಗತ್ತ ನೋಡಿ ಅಂತ ನಾನು ಹೇಳಿದ್ದೆ. ಮಿಮಿಕ್ರಿ ಮಾಡುವವರ ಬಳಿ ಡಬ್ ಮಾಡಿಸೋಕೆ ಟ್ರೈ ಮಾಡಿ ಎಂದಿದ್ದೆ. ಚೇತನ್ ಅವರು ಪ್ರಯತ್ನ ಮಾಡಿದರು. ಆದರೆ, ಸರಿಯಾಗಿ ಬರಲಿಲ್ಲ. ನಾನು ತುಂಬಾನೇ ಹೆದರಿಕೊಂಡು ಮಾಡಿದೆ. ಅಪ್ಪುದು ಅದ್ಭುತ ವಾಯ್ಸ್ ಆಗಿತ್ತು. ಸ್ವಲ್ಪ ಟ್ರೈ ಮಾಡಿದ್ದೇನೆ. ಅಪ್ಪು ಪಾತ್ರಕ್ಕೆ ಎರಡು ದಿನ ಡಬ್ ಮಾಡಿದ್ದೇನೆ’ ಎಂದರು ಶಿವಣ್ಣ.
ಇದನ್ನೂ ಓದಿ:
‘ಪುನೀತ್ ಪಾತ್ರಕ್ಕೆ ಡಬ್ ಮಾಡುವಾಗ ಭಯವಾಯ್ತು’; ‘ಜೇಮ್ಸ್’ ಕಾರ್ಯಕ್ರಮದಲ್ಲಿ ಶಿವಣ್ಣ ಭಾವುಕ ನುಡಿ
ಪುನೀತ್ ಮೇಲಿನ ಅಭಿಮಾನಕ್ಕೆ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಿಸಿದ ಫ್ಯಾನ್ಸ್; ಇಲ್ಲಿದೆ ವಿಡಿಯೋ